ಉಪ ಚುನಾವಣೆ ಸೋಲಿನ ಬಗ್ಗೆ ವರದಿ ಕೇಳಿದ ಕಾಂಗ್ರೆಸ್ ಹೈಕಮಾಂಡ್

Spread the love

ಬೆಂಗಳೂರು, ಡಿ.12- ಉಪ ಚುನಾವಣೆಯ ಸೋಲಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ಹೈಕಮಾಂಡ್, ಸಕಾರಣಗಳ ಸಹಿತ ಸಮಗ್ರ ವರದಿಗಳನ್ನು ನೀಡುವಂತೆ ಸೂಚನೆ ನೀಡಿದೆ. ಹನ್ನೊಂದು ಕ್ಷೇತ್ರಗಳ ಪೈಕಿ ಕೇವಲ ಶಿವಾಜಿನಗರ ಕ್ಷೇತ್ರ ಮಾತ್ರ ಉಳಿಸಿಕೊಳ್ಳಲಾಗಿದೆ.

ಕಳೆದ ವರ್ಷ ಜೆಡಿಎಸ್ ಗೆದ್ದಿದ್ದ ಹುಣಸೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದ್ದು ಹೊರತು ಪಡಿಸಿ ಕಾಂಗ್ರೆಸ್ ಶಾಸಕರೇ ಇದ್ದ 10 ಕ್ಷೇತ್ರಗಳಲ್ಲೂ ಪಕ್ಷ ಸೋಲಲು ಕಾರಣ ಏನು ಎಂದು ಹೈಕಮಾಂಡ್  ಪ್ರಶ್ನಿಸಿದೆ. ಬಹಳಷ್ಟು ಕಡೆ ಕಾಂಗ್ರೆಸ್ ನಾಯಕರೇ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ ನೀಡಿದ್ದರು ಎಂಬ ಮಾಹಿತಿ ಇದೆ.

ಪಕ್ಷ ದ್ರೋಹ ಮಾಡಿ ಬಿಜೆಪಿಗೆ ಬೆಂಬಲ ನೀಡಿದ ನಾಯಕರ ಪೈಕಿ ಸಮಗ್ರ ವರದಿ ನೀಡಿ. ಅವರನ್ನು ಯಾವುದೇ ಕಾರಣಕ್ಕೂ ಪಕ್ಷದಲ್ಲಿ ಮುಂದುವರೆಸುವ ಅಗತ್ಯವಿಲ್ಲ. ಅವರೆಷ್ಟೇ ದೊಡ್ಡ ನಾಯಕರಾಗಿದ್ದರೂ ಚಿಂತೆಯಿಲ್ಲ. ಮುಲಾಜಿಲ್ಲದೆ ಪಕ್ಷದಿಂದ ಹೊರಹಾಕಬೇಕಿದೆ.

ಆ ಕುರಿತಂತೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ಕೆಪಿಸಿಸಿ ಹಂಗಾಮಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರಿಗೆ ಸೂಚನೆ ನೀಡಲಾಗಿದೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಪಕ್ಷದ ಹಿರಿಯ ನಾಯಕರೇ ಕಾರಣ. ಅಧಿಕಾರದ ಅವಕಾಶ ಬಂದಾಗ ಪೈಫೋಟಿಗಿಳಿದು ಮುಂದೆ ಬರುವ ಮುಖಂಡರು, ಚುನಾವಣೆ ಬಂದಾಗ ತಮಗೂ ಪಕ್ಷಕ್ಕೂ ಸಂಬಂಧವಿಲ್ಲದಂತೆ ವರ್ತಿಸುತ್ತಾರೆ. ಇಂತಹವರಿಂದಾಗಿ ಪಕ್ಷ ಹಾಳಾಗುತ್ತಿದೆ ಎಂದು ಸಿದ್ದರಾಮಯ್ಯ ಹೈಕಮಾಂಡ್ ಬಳಿ ತಮ್ಮ ಅಸಮಾಧಾನ ಹೊರ ಹಾಕಿದ್ದರು.

ಇದರಿಂದಾಗಿ ಪಕ್ಷಕ್ಕೆ ದ್ರೋಹ ಬಗೆದ ನಾಯಕರ ಬಗ್ಗೆ ಹೈಕಮಾಂಡ್ ಕೆಪಿಸಿಸಿ ಉಸ್ತುವಾರಿ ನಾಯಕರಾದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ವರದಿ ಕೇಳಿದ್ದಾರೆ.

Facebook Comments