ಬೆಂಗಳೂರು, ಡಿ.20- ಚನ್ನಗಿರಿ ಕ್ಷೇತ್ರದ ಮಾಜಿ ಶಾಸಕ ಹಾಗೂ ಕೆಎಸ್‍ಡಿಎಲ್ ಅಧ್ಯಕ್ಷರಾಗಿದ್ದ ಮಾಡಾಳ್ ವಿರೂಪಾಕ್ಷಪ್ಪ ಅವರ ವಿರುದ್ಧ ನಡೆಯುತ್ತಿದ್ದ ಲೋಕಾಯುಕ್ತ ತನಿಖೆಯನ್ನು ರದ್ದುಗೊಳಿಸಿ ಹೈಕೋರ್ಟ್ ಇಂದು ಆದೇಶ ಹೊರಡಿಸಿದೆ. ಕಳೆದ 2022ರಲ್ಲಿ ಕನ್ನಿಂಗ್‍ಹ್ಯಾಮ್ ರಸ್ತೆಯಲ್ಲಿರುವ ಮಾಡಾಳ್ ವಿರೂಪಾಕ್ಷಪ್ಪ ಅವರ ಕಚೇರಿ ಮೇಲೆ ದಾಳಿ ನಡೆಸಿ 8 ಕೋಟಿ ಹಣವನ್ನು ಲೋಕಾಯುಕ್ತ ಪೊಲೀಸರು ಜಪ್ತಿ ಮಾಡಿದ್ದರು.
ಕೆಎಸ್‍ಡಿಎಲ್‍ನ ಕೆಲ ನೌಕರರು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳಿ ಲೋಕಾಯುಕ್ತಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ಈ ಸಂಬಂಧ ದಾಳಿ ನಡೆಸಲಾಗಿತ್ತು. ಇದು ಆಗಿನ ಬಿಜೆಪಿ ಸರ್ಕಾರಕ್ಕೆ ಭಾರೀ ಮುಜುಗರ ತಂದಿತ್ತು. ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಇದನ್ನು ಗಂಭೀರವಾಗಿ ಪರಿಗಣಿಸಿ ಭ್ರಷ್ಟಾಚಾರ ನಡೆಸಿ ಈ ಹಣವನ್ನು ಸಂಪಾದಿಸಲಾಗಿದೆ ಎಂದು ಹೋರಾಟ ನಡೆಸಿತ್ತು.
ಈ ಸಂಬಂಧ ಲೋಕಾಯುಕ್ತ ಪೊಲೀಸರು ಮಾಡಾಳ್ ವಿರೂಪಾಕ್ಷಪ್ಪ ಸೇರಿ ಅವರ ಪುತ್ರ ಹಾಗೂ ಇತರರನ್ನು ಬಂಧಿಸಿ ತನಿಖೆ ಕೈಗೊಂಡಿದ್ದರು. ನಂತರ ಜಾಮೀನಿನ ಮೇಲೆ ಇತ್ತೀಚೆಗೆ ಮಾಡಾಳ್ ವಿರೂಪಾಕ್ಷಪ್ಪ ಅವರು ಬಿಡುಗಡೆಯಾಗಿದ್ದರು.
ನಟಿ ರಶ್ಮಿಕಾ ಡೀಪ್ ಫೇಕ್ ವಿಡಿಯೋ ಮಾಡಿದ ನಾಲ್ವರನ್ನು ಪತ್ತೆ ಹಚ್ಚಿದ ಪೋಲೀಸರು
ನಾನು ಅಡಿಕೆ ವ್ಯಾಪಾರಿಯಾಗಿದ್ದು, ವರ್ತಕರು ನನಗೆ ತಂದುಕೊಟ್ಟಿದ್ದ ಹಣವನ್ನು ಇಲ್ಲಿ ಇರಿಸಿದ್ದೆ ಎಂದು ಕೆಲ ದಾಖಲೆಗಳನ್ನು ನೀಡಿದ್ದರು ಮತ್ತು ಲೋಕಾಯುಕ್ತ ತನಿಖೆ ವಿರುದ್ಧವೂ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ಸ್ಪೀಕರ್ ಅನುಮತಿ ಪಡೆಯದೆ ಶಾಸಕರನ್ನು ಬಂಧಿಸಿದ್ದು ಮತ್ತು ತನಿಖೆ ಕೈಗೊಳ್ಳಲಾಗಿದೆ ಎಂದು ತಾಂತ್ರಿಕ ಕಾರಣವೊಡ್ಡಿ ಇಂದು ಪ್ರಕರಣವನ್ನು ರದ್ದುಗೊಳಿಸಿದೆ. ಇದರಿಂದಾಗಿ ಮಾಡಾಳ್ ವಿರೂಪಾಕ್ಷಪ್ಪ ಅವರು ನಿರಾಳರಾಗಿದ್ದಾರೆ.