ಬೆಂಗಳೂರು,ಫೆ.7- ಸಿಎಂ ಸಿದ್ದರಾಮಯ್ಯ ಹೈಕೋರ್ಟ್ ತೀರ್ಪಿನಿಂದ ನಿರಾಳರಾಗಿದ್ದು, ಬಜೆಟ್ ಪೂರ್ವಭಾವಿ ಸಭೆಗಳನ್ನು ಮುಂದುವರೆಸಿದ್ದಾರೆ.ಮತ್ತೊಂದೆಡೆ ಸಿದ್ದರಾಮಯ್ಯ ಬೆಂಬಲಿಗರು ಹೈಕೋರ್ಟ್ ತೀರ್ಪನ್ನು ಸ್ವಾಗತಿಸಿ ನೃತ್ಯ ಮಾಡುವ ಮೂಲಕ ಸಂಭ್ರಮ ಆಚರಿಸಿದ್ದಾರೆ.ಹೈಕೋರ್ಟ್ ತೀರ್ಪು ತನಿಖಾ ಸಂಸ್ಥೆಯನ್ನು ನಿರ್ಧರಿಸುವುದಕ್ಕೆ ಮಾತ್ರ ಸೀಮಿತವಾಗಿದೆ. ಪ್ರಕರಣದ ಸತ್ಯಸತ್ಯತೆ ಬಗ್ಗೆ ಯಾವುದೇ ಅಭಿಪ್ರಾಯಗಳು ಪ್ರಕಟವಾಗಿಲ್ಲ.
ಹೀಗಾಗಿ ಸಿದ್ದರಾಮಯ್ಯ ಪೂರ್ಣ ದೋಷಮುಕ್ತರಾಗಿಲ್ಲ ಎಂದು ವಿರೋಧ ಪಕ್ಷಗಳು ತಿರುಗೇಟು ನೀಡುವ ನಡುವೆಯೇ ಕಾಂಗ್ರೆಸ್ನ ಅದರಲ್ಲೂ ಸಿದ್ದರಾಮಯ್ಯ ಬಣದಲ್ಲಿ ಸಂಭ್ರಮದ ವಾತಾವರಣದಲ್ಲಿ ಮನೆ ಮಾಡಿದೆ.ಒಂದು ವೇಳೆ ಹೈಕೋರ್ಟ್ ಸಿಬಿಐ ತನಿಖೆಗೆ ಅಸ್ತು ಎಂದಿದ್ದೇ ಆಗಿದ್ದರೆ ಸಿದ್ದರಾಮಯ್ಯ ಸಂಕಷ್ಟಕ್ಕೊಳಗಾಗುವ ಸಾಧ್ಯತೆ ಇದೆ.
ದೆಹಲಿಯ ಅಬಕಾರಿ ನೀತಿ ವಿಚಾರವಾಗಿ ಸಿಬಿಐ ಮತ್ತು ಜಾರಿನಿರ್ದೇಶನಾಲಯಗಳು ತನಿಖೆ ನಡೆಸಿ ಅಲ್ಲಿನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ್ದವು. ಕೇಂದ್ರ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದ ಕೇಜ್ರಿವಾಲ್ ಜೈಲಿನಲ್ಲೇ ಇದ್ದುಕೊಂಡೇ ಮುಖ್ಯಮಂತ್ರಿಯಾಗಿ ಆಡಳಿತ ಮುಂದುವರೆಸಿದ್ದರು.
ಜಾಮೀನು ಪಡೆದು ಹೊರಬಂದ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯ ನೈತಿಕತೆಗೆ ಸವಾಲು ಎಸೆದರು. ಕರ್ನಾಟಕದಲ್ಲೂ ಮುಡಾ ಪ್ರಕರಣ ಸಿಬಿಐ ತನಿಖೆಗೆ ಒಳಗಾದರೆ ದೆಹಲಿಯ ಮಾದರಿಯಲ್ಲೇ ಬೆಳವಣಿಗೆಗಳಾಗಬಹುದು ಎಂಬ ದುಗುಡ ಸಿದ್ದರಾಮಯ್ಯನವರ ಬೆಂಬಲಿಗರಲ್ಲಿತ್ತು.
ಸಿದ್ದರಾಮಯ್ಯ ಅವರು ಸಿಬಿಐ ಕುಣಿಕೆಗೆ ಬಿದ್ದರೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುತ್ತಾರೆ. ಈ ಸದಾವಕಾಶದಲ್ಲಿ ತಾವು ಅಧಿಕಾರ ಗಿಟ್ಟಿಸಿಕೊಳ್ಳಬಹುದೆಂದು ಸಚಿವ ಸಂಪುಟದಲ್ಲಿರುವ ಹಲವಾರು ಮಂದಿ ಒಳಗೊಳಗೆ ಮಂಡಿಗೆ ತಿನ್ನುತ್ತಿದ್ದರು. ಆದರೆ ಎಲ್ಲದಕ್ಕೂ ಪೂರ್ಣ ವಿರಾಮ ಎಂಬಂತೆ ಹೈಕೋರ್ಟ್ ತೀರ್ಪು ವಿರೋಧ ಬಣದ ಬಾಯಿ ಮುಚ್ಚಿಸಿದೆ.
ದೂರದಾರ ಸ್ನೇಹಮಯಿ ಕೃಷ್ಣ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದಾರೆ. ಅದೇನೇ ಇದ್ದರೂ ಸದ್ಯಕ್ಕಂತೂ ಸಿದ್ದರಾಮಯ್ಯ ಬೀಸುವ ದೊಣ್ಣೆಯಿಂದ ಪಾರಾದಂತಾಗಿದೆ.ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಮಧ್ಯಂತರ ತನಿಖೆಯ ವರದಿ ಸೋರಿಕೆಯಾಗಿದೆ. ಅದರಲ್ಲಿ ಸಿದ್ದರಾಮಯ್ಯ ಅವರು ಮುಡಾ ಪ್ರಕರಣದಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ. 50:50 ಅನುಮಪಾತದಡಿ ನಿವೇಶನ ಪಡೆದುಕೊಂಡಿರುವುದರಲ್ಲಿ ಲೋಪವೂ ಆಗಿಲ್ಲ ಎಂದು ಹೇಳಲಾಗುತ್ತಿತ್ತು.
ಜಾರಿನಿರ್ದೇಶನಾಲಯದ ತನಿಖೆಯಿಂದ ಸಿದ್ದರಾಮಯ್ಯ ಅವರಿಗೆ ಒಂದಿಷ್ಟು ಮುಜುಗರವಾಗುವುದನ್ನು ಬಿಟ್ಟರೆ ಈಗ ಸಿಬಿಐ ತನಿಖೆಯ ಭೀತಿ ನಿವಾರಣೆಯಾಗಿದೆ. ಲೋಕಾಯುಕ್ತ ತನಿಖಾ ವರದಿ ಸೋರಿಕೆಯಾಗಿರುವುದು ನಿಜವಾದರೆ ಅದರಲ್ಲಿ ಸಿದ್ದರಾಮಯ್ಯನವರಿಗೆ ಕ್ಲೀನ್ಚಿಟ್ ನೀಡಿರುವುದು ಸತ್ಯವೇ ಆಗಿದ್ದರೆ ಮುಡಾ ಕಳಂಕದಿಂದ ಸಿದ್ದರಾಮಯ್ಯ ನಿಟ್ಟುಸಿರು ಬಿಡಬಹುದಾಗಿದೆ.
ಸುಮಾರು 5 ದಶಕಗಳ ಕಾಲ ಶಾಸಕರಾಗಿ, ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ, ಉಪಮುಖ್ಯಮಂತ್ರಿ ಹಾಗೂ ಎರಡು ಬಾರಿ ಮುಖ್ಯಮಂತ್ರಿಯಾಗಿ ಜವಾಬ್ದಾರಿಗಳನ್ನು ನಿಭಾಯಿಸಿರುವ ಸಿದ್ದರಾಮಯ್ಯ ಮುಡಾ ಆರೋಪದಿಂದ ಇಕ್ಕಟ್ಟಿಗೆ ಸಿಲುಕಿದರು.
ಬಿಜೆಪಿ-ಜೆಡಿಎಸ್ ಪಕ್ಷಗಳು ಮುಡಾ ಪ್ರಕರಣವನ್ನು ಜನಾಂದೋಲನವಾಗಿಸಲು ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ನಡೆಸಿದವು. ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ಸಿದ್ದರಾಮಯ್ಯ ಪಡೆದಿರುವ ನಾಲ್ಕು ನಿವೇಶನಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿರುವವರೇ ಸ್ವಯಂ ಭ್ರಷ್ಟರು ಎಂದು ಹೇಳುವ ಮೂಲಕ ಬಿಜೆಪಿಲ್ಲೇ ಭಿನ್ನ ಧ್ವನಿಗಳು ಕೇಳಿಬಂದಿದ್ದವು. ಆದರೂ ವಿರೋಧ ಪಕ್ಷಗಳು ಮುಡಾ ಪ್ರಕರಣವನ್ನು ಪದೇ ಪದೇ ಪ್ರಸ್ತಾಪಿಸಿ ಕಾಂಗ್ರೆಸ್ ಸರ್ಕಾರಕ್ಕೆ ಕಡಿವಾಣ ಹಾಕುವ ಪ್ರಯತ್ನ ನಡೆಸಿದ್ದವು.
ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ನೆಪದಲ್ಲಿ ರಾಜಕೀಯ ಷಡ್ಯಂತ್ರ ಮಾಡುವ ಮೂಲಕ ಕಾಂಗ್ರೆಸ್ನ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನವನ್ನು ಬಿಜೆಪಿ-ಜೆಡಿಎಸ್ ನಡೆಸುತ್ತಿವೆ ಎಂದು ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆದಿಯಾಗಿ ಎಲ್ಲರೂ ಅಭಿಪ್ರಾಯ ವ್ಯಕ್ತಪಡಿಸಿದ್ದರು ಜೊತೆಗೆ ಸಿದ್ದರಾಮಯ್ಯನವರ ಬೆಂಬಲಕ್ಕೆ ನಿಂತಿದ್ದರು.
ಆದರೂ ರಾಜಕೀಯವಾಗಿ ಈ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಸಿಬಿಐ ತನಿಖೆಗೆ ಒಪ್ಪಿಸಿದರೆ ಮತ್ತೊಂದು ಮಗ್ಗಲಿಗೆ ತಿರುವ ಪಡೆದುಕೊಳ್ಳುವ ಸಾಧ್ಯತೆ ಇತ್ತು. ಈ ಕಾರಣಕ್ಕಾಗಿಯೇ ಸಿದ್ದರಾಮಯ್ಯ ಅಭಿಮಾನಿಗಳು ಸಂಭ್ರಮ ಪಡೆಯುತ್ತಿದ್ದಾರೆ.