ಬೆಂಗಳೂರು,ಮಾ.23- ಪ್ರತಿಭಟನಾ ಸಂದರ್ಭದಲ್ಲಿ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಕೇಂದ್ರ ಸಚಿವೆ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ವಿರುದ್ಧ ದಾಖಲಾಗಿದ್ದ ಎಫ್ಐಆರ್‌ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಬೆಂಗಳೂರಿನ ಕಾಟನ್‍ಪೇಟೆ ಪೊಲೀಸರು ರಾಜ್ಯ ಚುನಾವಣಾಧಿಕಾರಿಗಳ ದೂರಿನ ಮೇರೆಗೆ ದಾಖಲಿಸಿರುವ ಎಫ್‍ಐಆರ್‍ಗೆ ತಡೆಯಾಜ್ಞೆ ನೀಡಬೇಕೆಂದು ಶೋಭಾ ಕರಂದ್ಲಾಜೆ ಪರ ಹಿರಿಯ ವಕೀಲ ವೆಂಕಟೇಶ್ ದಳವಾಯಿ ಮೇಲ್ಮನವಿ ಸಲ್ಲಿಸಿದ್ದರು.ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‍ನ ನ್ಯಾಯಮೂರ್ತಿ ಕೃಷ್ಣ.ಎಸ್ ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಶೋಭಾ ಕರಂದ್ಲಾಜೆ ವಿರುದ್ಧ ದಾಖಲಾಗಿದ್ದ ಎಫ್‍ಐಆರ್‍ಗೆ ತಡೆ ಆದೇಶ ನೀಡಿತು.
ಇದಕ್ಕೂ ಮುನ್ನ ಶೋಭಾ ಕರಂದ್ಲಾಜೆ ಪರ ವಾದ ಮಂಡಿಸಿದ ಹಿರಿಯ ವಕೀಲ ವೆಂಕಟೇಶ್ ದಳವಾಯಿ ಅವರು ಈಗಾಗಲೇ ಕಕ್ಷಿದಾರರು ತಮ್ಮ ಹೇಳಿಕೆ ಕುರಿತಂತೆ ಯಾವುದೇ ಸಮುದಾಯಕ್ಕೂ ನೋವಾಗಬಾರದೆಂಬ ಕಾರಣಕ್ಕಾಗಿ ಸಾರ್ವಜನಿಕವಾಗಿ ಬಹಿರಂಗ ಕ್ಷಮೆಯಾಚಿಸಿದ್ದಾರೆ.
ಚುನಾವಣಾ ಆಯೋಗ ದೂರು ದಾಖಲಿಸಿಕೊಂಡ ನಂತರ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಪೋಸ್ಟ್ ಮಾಡಿದ್ದನ್ನು ಸಹ ಅಳಿಸಿ ಹಾಕಿದ್ದಾರೆ. ಅವರ ಉದ್ದೇಶ ಯಾರೊಬ್ಬರಿಗೂ ನೋಯಿಸಬಾರದು ಎಂಬುದಾಗಿದೆಯೇ ಹೊರತು ರಾಜ್ಯ ಇಲ್ಲವೇ ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಹೇಳಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಆದರೂ ಆಯೋಗದ ಸೂಚನೆ ಮೇರೆಗೆ ಪೊಲೀಸರು ಎಫ್‍ಐಆರ್ ಹಾಕಿದ್ದಾರೆ. ನಮ್ಮ ಕಕ್ಷಿದಾರರ ವಿರುದ್ಧ ದಾಖಲಾಗಿರುವ ಸೆಕ್ಷನ್‍ಗಳು ಮತಕ್ಕಾಗಿ ಪ್ರಚಾರ ಮಾಡುವ ಉದ್ದೇಶಕ್ಕೆ ಇಲ್ಲವೇ ರ್ನಿಧಿಷ್ಟ ಅಭ್ಯರ್ಥಿಗಳಿಗೆ ಮತ ಚಲಾಯಿಸುವ ವಿರುದ್ಧ ದಾಖಲಾಗುವ ಪ್ರಕರಣಗಳಿಗೆ ಪ್ರಜಾಪ್ರತಿನಿಧಿ ಕಾಯ್ದೆ ಸೆಕ್ಷನ್ 123(3), 123(3ಎ), 125 ಸೆಕ್ಷನ್‍ಗಳಡಿ ದೂರು ದಾಖಲಿಸಬೇಕೆಂಬುದನ್ನು ಮನವರಿಕೆ ಮಾಡಿದರು.
ಈ ವೇಳೆ ನ್ಯಾಯಪೀಠ ನಾವು ನಾಜಿ ಆಡಳಿತದಲ್ಲಿ ಇಲ್ಲ. ನಮಗೆ ವಾಕ್ ಸ್ವಾತಂತ್ರ್ಯವಿದೆ. ಈ ಸೆಕ್ಷನ್‍ಗಳಡಿ ಪೊಲೀಸರು ದೂರುಗಳನ್ನು ಹೇಗೆ ದಾಖಲಿಸುತ್ತಾರೆ? ಎಂದು ಪ್ರಶ್ನೆ ಮಾಡಿದರು. ವಾದವನ್ನು ಆಲಿಸಿದ ನಂತರ ನ್ಯಾಯಾಲಯ ಮುಂದಿನ ಆದೇಶದವರೆಗೆ ಶೋಭಾ ಕರಂದ್ಲಾಜೆ ವಿರುದ್ಧ ಕಾಟನ್‍ಪೇಟೆ ಪೊಲೀಸರು ಪ್ರಜಾಪ್ರತಿನಿ ಕಾಯ್ದೆ ಸೆಕ್ಷನ್ 123(3), 123(3ಎ), 125 ಸೆಕ್ಷನ್‍ಗಳಡಿ ದಾಖಲಾಗಿದ್ದ ಎಫ್‍ಐಆರ್‍ಗೆ ತಡೆಯಾಜ್ಞೆ ನೀಡಿತು.