Friday, February 7, 2025
Homeರಾಜ್ಯಸಿಬಿಐ ತನಿಖೆ ನಿರಾಕರಿಸಿ ಹೈಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ : ಶಾಸಕ ಪೊನ್ನಣ್ಣ

ಸಿಬಿಐ ತನಿಖೆ ನಿರಾಕರಿಸಿ ಹೈಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ : ಶಾಸಕ ಪೊನ್ನಣ್ಣ

High Court verdict rejecting CBI probe is welcome: MLA Ponnanna

ಬೆಂಗಳೂರು,ಫೆ.7- ಸಿಬಿಐ ತನಿಖೆ ನಿರಾಕರಿಸಿ ಹೈಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಸತಗೊಂಡಿದ್ದಾರೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆಗಿರುವ ಶಾಸಕ ಎ.ಎಸ್. ಪೊನ್ನಣ್ಣ ತಿಳಿಸಿದ್ದಾರೆ.

ಗೃಹಕಚೇರಿ ಕಾವೇರಿಯಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೂರುದಾರ ಸ್ನೇಹಮಯಿ ಕೃಷ್ಣ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಮೂರು ವಿಚಾರಗಳನ್ನು ಪ್ರಸ್ತಾಪಿಸಿದ್ದರು. ಲೋಕಾಯುಕ್ತ ಸಂಸ್ಥೆಯ ಸ್ವಾತಂತ್ರ್ಯದ ಬಗ್ಗೆ , ಲೋಕಾಯುಕ್ತ ತನಿಖೆಯ ಬಗ್ಗೆ ಹಾಗೂ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕಾದ ಅನಿವಾರ್ಯತೆ ಬಗ್ಗೆ ವಿವರಿಸಿದರು. ಅವೆಲ್ಲದಕ್ಕೂ ನ್ಯಾಯಮೂರ್ತಿಗಳು ಉತ್ತರ ನೀಡಿದ್ದಾರೆ ಎಂದು ಹೇಳಿದರು.

ಲೋಕಾಯುಕ್ತ ಸ್ವತಂತ್ರ ತನಿಖಾ ಸಂಸ್ಥೆ ಎಂದು ನ್ಯಾಯಮೂರ್ತಿಗಳು ಬಲವಾಗಿ ಪ್ರತಿಪಾದಿಸಿದ್ದಾರೆ. ಈಗ ನಡೆದಿರುವ ತನಿಖೆಯು ತೃಪ್ತಿಕರವಾಗಿದೆ ಹಾಗೂ ಸಿಬಿಐಗೆ ವಹಿಸಲು ಪೂರಕ ಅಂಶಗಳಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ತೀರ್ಪು ಸ್ವಾಗತಾರ್ಹ ಎಂದು ಪೊನ್ನಣ್ಣ ಅಭಿಪ್ರಾಯಪಟ್ಟರು.

ಕಾನೂನಾತಕ ಪ್ರಕ್ರಿಯೆಗಳಲ್ಲಿ ಎಲ್ಲರಿಗೂ ಭಾಗವಹಿಸಲು ಅವಕಾಶವಿದೆ. ಸಿಬಿಐ, ಜಾರಿನಿರ್ದೇಶನಾಲಯದಂತಹ ತನಿಖಾ ಸಂಸ್ಥೆಗಳನ್ನು ರಾಜಕೀಯಕ್ಕೆ ಬಳಸುವುದನ್ನು ನಾವು ಮೊದಲಿನಿಂದಲೂ ಖಂಡಿಸುತ್ತಾ ಬಂದಿದ್ದೇವೆ. ಉಳಿದಂತೆ ಯಾವುದೇ ತನಿಖೆಯಲ್ಲಿ ಅಥವಾ ಕಾನೂನು ಪ್ರಕ್ರಿಯೆಯಲ್ಲಿ ಯಾರು ಹಸ್ತಕ್ಷೇಪ ಮಾಡುತ್ತಿಲ್ಲ ಎಂದರು.

ಮುಡಾ ಪ್ರಕರಣದಲ್ಲಿ ತನಿಖೆಗೆ ರಾಜ್ಯಪಾಲರು ನೀಡಿರುವ ಪೂರ್ವಾನುಮತಿಯನ್ನು ಪ್ರಶ್ನಿಸಿ, ಸಲ್ಲಿಸಲಾಗಿರುವ ಮೇಲನವಿ ಕುರಿತು ಹೈಕೋರ್ಟ್ ವಿಭಾಗೀಯ ಪೀಠ ಇನ್ನು ತೀರ್ಪು ನೀಡಿಲ್ಲ. ಸಿಬಿಐ ತನಿಖೆಗೆ ಕೋರಿದ್ದ ಅರ್ಜಿಗೆ ಸಂಬಂಧಪಟ್ಟಂತೆ ಮಾತ್ರ ಹೈಕೋರ್ಟ್ ಏಕಸದಸ್ಯ ಪೀಠ ಇಂದು ತೀರ್ಪು ನೀಡಿದೆ. ಲೋಕಾಯುಕ್ತ ತನಿಖೆ ಕೂಡ ಇನ್ನು ಪೂರ್ಣಗೊಂಡಿಲ್ಲ ಎಂದು ಅವರು ವಿವರಿಸಿದರು.

ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಇಲ್ಲ ಎಂದು ನಾವು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದೇವೆ. ಅವರ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ. ಇದರಲ್ಲಿ ನೈಜ್ಯ ಕಾನೂನು ಹೋರಾಟ ನಡೆಯುತ್ತಿಲ್ಲ. ಯಾವ ಅಪರಾಧ ಕೂಡ ನಡೆದಿಲ್ಲ. ಯಾವುದೇ ಅಪರಾಧೀಕರಣಕ್ಕೆ ಕಾಲಮಿತಿ ಎಂಬುದಿರುತ್ತದೆ. ಯಾವುದೇ ಅಪರಾಧೀಕರಣಕ್ಕೆ ಕಾಲಮಿತಿ ಎಂಬುದಿರುತ್ತದೆ. 1996ರ ಪ್ರಕರಣವನ್ನು ಈಗ ವಿಚಾರಣೆ ನಡೆಸಲು ಪ್ರಯತ್ನಿಸಲಾಗುತ್ತಿದೆ. ಆದರೆ ಇದರಲ್ಲಿ ರಾಜಕೀಯ ಕಾರಣ ಬಿಟ್ಟರೇ ಬೇರೇನೂ ಇಲ್ಲ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅಮಾಯಕ ಹೆಣ್ಣು ಮಗಳು. ದುರದ್ದೇಶಪೂರ್ವಕವಾಗಿ ಅವರಿಗೆ ಮುಜುಗರ ಉಂಟು ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿದರು.
ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸುವುದಾಗಿ ದೂರುದಾರ ಸ್ನೇಹಮಯಿಕೃಷ್ಣ ಹೇಳುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಪೊನ್ನಣ್ಣ, ಇಲ್ಲಿ ಸ್ನೇಹಮಯಿ ಕೃಷ್ಣ ಎಂಬುದು ಕೇವಲ ನೆಪ ಮಾತ್ರ.

ಇದರ ಹಿಂದೆ ವಿರೋಧ ಪಕ್ಷಗಳ ಕೈವಾಡವಿದೆ. ಸ್ನೇಹಮಯಿ ಕೃಷ್ಣ ಅವರ ಪರವಾಗಿ ದೊಡ್ಡ ದೊಡ್ಡ ವಕೀಲರು ಬಂದು ವಾದ ಮಾಡುತ್ತಿದ್ದಾರೆ. ಹಿರಿಯ ವಕೀಲರಿಗೆ ಹಣ ನೀಡಲು ಸ್ನೇಹಮಯಿ ಕೃಷ್ಣ ಅವರಿಗೆ ಸಾಧ್ಯವೇ? ವಾಸ್ತವ ಏನು ಎಂದು ಎಲ್ಲರಿಗೂ ಗೊತ್ತಿದೆ. ಸರ್ಕಾರಕ್ಕೆ ಗುಪ್ತಚರ ಮಾಹಿತಿ ಇದೆ. ಕೆಲವರು ಸುಮನೆ ಬಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಅವರು ಆತಾವಲೋಕನ ಮಾಡಿಕೊಳ್ಳಲಿ. ಇದೇ ರೀತಿಯ ತಪ್ಪುಗಳನ್ನು ಮಾಡಿ ವಿಧಾನಸಭೆಯ ಮೂರು ಉಪಚುನಾವಣೆಗಳಲ್ಲೂ ಅವರು ಸೋಲು ಕಂಡಿದ್ದಾರೆ ಎಂದರು.

ಹೈಕೋರ್ಟ್ ತೀರ್ಪಿಗೆ ನಾವು ಸಂಭ್ರಮಿಸುತ್ತಿಲ್ಲ. ಪಟಾಕಿ ಹೊಡೆಯುತ್ತಿಲ್ಲ. ಜೈಲಿನಿಂದ ಬಂದು ಯಾರು ಪಟಾಕಿ ಹೊಡೆದರು ಎಂಬುದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಗೊತ್ತಿದೆ. ಬಿಜೆಪಿಯಲ್ಲಿ ನೂರೆಂಟು ಸಮಸ್ಯೆಗಳಿವೆ, ಬಣಗಳಿವೆ, ಯಡಿಯೂರಪ್ಪ ಅವರನ್ನು ಟೀಕಿಸಲಾಗುತ್ತಿದೆ ಎಂದರು.

ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರನ್ನು ನಾವು ಗೌರವದಿಂದ ಕಾಣುತ್ತೇವೆ. ಆದರೆ ಅವರದ್ದೇ ಪಕ್ಷದಲ್ಲಿ ಯಡಿಯೂರಪ್ಪ ಅವರನ್ನು ಹೀನಾಯವಾಗಿ ನಿಂದಿಸಲಾಗುತ್ತಿದೆ. ಹಿರಿಯ ನಾಯಕರ್ಯಾರು ಯಡಿಯೂರಪ್ಪ ಪರವಾಗಿ ಮಾತನಾಡುತ್ತಿಲ್ಲ ಎಂದು ವಿಜಯೇಂದ್ರ ನಿನ್ನೆ ಅಳಲು ತೋಡಿಕೊಂಡಿದ್ದಾರೆ. ಇಷ್ಟೆಲ್ಲ ಕಣ್ಣೆದುರಿಗೆ ಇದ್ದ ಮೇಲೆ ನಾವು ಪ್ರತಿಕ್ರಿಯೆ ನೀಡುವ ಅಗತ್ಯವೇನಿದೆ ಎಂದು ತಿರುಗೇಟು ನೀಡಿದರು.

RELATED ARTICLES

Latest News