ಬೆಂಗಳೂರು,ಸೆ.5- ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಕಳೆದ ಐದು ತಿಂಗಳಲ್ಲಿಯೇ ಅತೀ ಹೆಚ್ಚು ವಾಣಿಜ್ಯ ತೆರಿಗೆ ಆಗಸ್ಟ್‌ನಲ್ಲಿ ಸಂಗ್ರಹವಾಗಿದೆ.ವಾಣಿಜ್ಯ ತೆರಿಗೆಗಳ ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದಲ್ಲಿ ಆಗಸ್ಟ್ ತಿಂಗಳಿನಲ್ಲಿ 9,067.05 ಕೋಟಿ ರೂ. ವಾಣಿಜ್ಯ ತೆರಿಗೆಗಳ ಸಂಗ್ರಹವಾಗಿದೆ. ಇದರಲ್ಲಿ 6,772.83 ಕೋಟಿ ರೂ. ಸರಕು ಸೇವಾ ತೆರಿಗೆ, 2,189.93 ಕೋಟಿ ರೂ. ಕರ್ನಾಟಕ ಮಾರಾಟ ತೆರಿಗೆ ಹಾಗೂ 104.29 ಕೋಟಿ ರೂ. ವೃತ್ತಿ ತೆರಿಗೆ ಸೇರಿದೆ.
ಸರಕು ಸೇವಾ ತೆರಿಗೆಯಲ್ಲಿ ಕಳೆದ ಐದು ತಿಂಗಳಿನಲ್ಲಿಯೇ ಅತೀ ಹೆಚ್ಚು ಸಂಗ್ರಹವಾಗಿದ್ದರೆ ಮಾರಾಟ ತೆರಿಗೆ ಹಾಗೂ ವೃತ್ತಿ ತೆರಿಗೆಯಲ್ಲಿ ಇಳಿಕೆಯಾಗಿರುವುದು ಕಂಡುಬಂದಿದೆ. ಏಪ್ರಿಲ್‌ನಲ್ಲಿ ಒಟ್ಟು ತೆರಿಗೆ 8,552.38 ಕೋಟಿ ರೂ., ಮೇನಲ್ಲಿ 8,950.43 ಕೋಟಿ ರೂ., ಜೂನ್‌ನಲ್ಲಿ 8,773.78 ಕೋಟಿ ರೂ., ಜುಲೈನಲ್ಲಿ 8,959.93 ಕೋಟಿ ರೂ. ಸಂಗ್ರಹವಾಗಿತ್ತು.
ಏಪ್ರಿಲ್‌ನಿಂದ ಆಗಸ್ಟ್ ಅಂತ್ಯದವರೆಗೆ 32,478.60 ಕೋಟಿ ರೂ. ಸರಕು ಸೇವಾ ತೆರಿಗೆ, 11,139.52 ಕೋಟಿ ರೂ. ಕರ್ನಾಟಕ ಮಾರಾಟ ತೆರಿಗೆ, 685.45 ಕೋಟಿ ರೂ. ವೃತ್ತಿ ತೆರಿಗೆ ಸೇರಿ ಒಟ್ಟು 44,303.57 ಕೋಟಿ ರೂ. ವಾಣಿಜ್ಯ ತೆರಿಗೆಗಳ ಸಂಗ್ರಹವಾಗಿದೆ.
2024-25ನೇ ಸಾಲಿನ ಆರ್ಥಿಕ ವರ್ಷದಲ್ಲಿ 1,02,585.52 ಕೋಟಿ ರೂ. ವಾಣಿಜ್ಯ ತೆರಿಗೆಗಳ ಸಂಗ್ರಹವಾಗಿದ್ದು, 2025-26ನೇ ಆರ್ಥಿಕ ಸಾಲಿನಲ್ಲಿ ಇದಕ್ಕಿಂತಲೂ ಹೆಚ್ಚಿನ ತೆರಿಗೆ ಸಂಗ್ರಹದ ನಿರೀಕ್ಷೆ ಇತ್ತು. ಆದರೆ ಕೇಂದ್ರ ಸರ್ಕಾರ ಜಿಎಸ್‌ಟಿ ಪರಿಷ್ಕರಣೆ ಮಾಡಿ ಕೆಲವು ವಸ್ತುಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಿದ್ದು, ಸ್ಲ್ಯಾಬ್‌ಗಳನ್ನು ಕಡಿತ ಮಾಡಿರುವುದರಿಂದ ವಾರ್ಷಿಕ 15 ಸಾವಿರ ಕೋಟಿ ರೂ.ನಷ್ಟು ರಾಜ್ಯಕ್ಕೆ ಜಿಎಸ್‌ಟಿ ತೆರಿಗೆ ಸಂಗ್ರಹ ಕಡಿಮೆಯಾಗಲಿದೆ ಎಂದು ರಾಜ್ಯಸರ್ಕಾರ ಈಗಾಗಲೇ ಹೇಳಿದೆ.ಹೀಗಾಗಿ ಸೆಪ್ಟೆಂಬರ್‌ನಿಂದ ಜಿಎಸ್‌ಟಿ ಸಂಗ್ರಹದಲ್ಲಿ ಇಳಕೆಯಾಗುವ ಸಾಧ್ಯತೆ ಹೆಚ್ಚಾಗಿದೆ.