Governor Speech Highlights : ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಇಂದು ಉಭಯ ಸದನಗಳನ್ನುದ್ದೇಶಿಸಿ ರಾಜ್ಯಪಾಲ ಥಾವರಚಂದ್ ಗೇಹಲೊಟ್ ಭಾಷಣ ಮಾಡಿದರು. ರಾಜ್ಯಪಾರಾಳ ಭಾಷಣದ ಹೈಲೈಟ್ಸ್ ಈಕೆಳಕಂಡಂತಿದೆ.
*ಕರ್ನಾಟಕದ ಆರ್ಥಿಕತೆಯನ್ನು 1 ಟ್ರಿಲಿಯನ್ ಡಾಲರ್ ಗಾತ್ರಕ್ಕೆ ವಿಸ್ತರಿಸಲು ಪ್ರಯತ್ನ :
ಕರ್ನಾಟಕದ ಆರ್ಥಿಕತೆಯನ್ನು 1 ಟ್ರಿಲಿಯನ್ ಡಾಲರ್ ಗಾತ್ರಕ್ಕೆ ವಿಸ್ತರಿಸಲು ಸಮಗ್ರ ಹಾಗೂ ಸಮರ್ಥ ಪ್ರಯತ್ನ ಮಾಡಲಾಗುತ್ತಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹೋಟ್ ತಿಳಿಸಿದ್ದಾರೆ. ವಿಧಾನಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಿದ ಅವರು, ತಮ್ಮ ಸರ್ಕಾರ ಸುಸ್ಥಿರ ಕೃಷಿ ವ್ಯವಸ್ಥೆ ರೂಪಿಸುವ ಜೊತೆಗೆ ಆರೋಗ್ಯ, ಶಿಕ್ಷಣ, ನೈರ್ಮಲ್ಯ ವಲಯಕ್ಕೆ ಆದ್ಯತೆ ನೀಡುತ್ತಿದೆ. ಬಜೆಟ್‌ನ ಶೇ.15.01 ರಷ್ಟು ಸಂಪತ್ತನ್ನು ಬಂಡವಾಳ ವೆಚ್ಚಗಳಿಗೆ ವಿನಿಯೋಗಿಸುವ ಮೂಲಕ ಮೂಲಭೂತ ಸೌಕರ್ಯ ಅಭಿವೃದ್ಧಿಯಲ್ಲಿ ಮುಂಚೂಣಿ ರಾಜ್ಯವಾಗಿದೆ.
ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣಗಳಿದಂತಹ ಪ್ರಗತಿಪರ ರಾಜ್ಯಗಳಿಗಿಂತಲೂ ಹೆಚ್ಚಿನ ಹಣವನ್ನು ನಮ್ಮಲ್ಲಿ ಬಳಕೆ ಮಾಡಲಾಗಿದೆ ಎಂದಿದ್ದಾರೆ. ಆಡಳಿತದಲ್ಲಿ ಪಾರದರ್ಶಕತೆಗಾಗಿ ಕಂದಾಯ, ಗ್ರಾಮೀಣಾಭಿವೃದ್ಧಿ, ಅರಣ್ಯ ಇಲಾಖೆಯ ವರ್ಗಾವಣೆಯಲ್ಲಿ ಕೌನ್ಸಲಿಂಗ್ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಮಧ್ಯವರ್ತಿಗಳ ಹಸ್ತಕ್ಷೇಪವನ್ನು ತಪ್ಪಿಸಲಾಗಿದೆ. ಈ ಹಿಂದೆ ನಡೆದಿದ್ದ ಭ್ರಷ್ಟಾಚಾರ ಪ್ರಕರಣಗಳ ತನಿಖೆಗಳು ತಾರ್ಕಿಕ ಅಂತ್ಯ ಕಾಣುವ ಹಂತಕ್ಕೆ ಬಂದಿವೆ ಎಂದು ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖವಾಗಿರುವುದು ವಿಶೇಷವಾಗಿದೆ.
ಆರ್ಥಿಕ ಬೆಳವಣಿಗೆಗಳ ಉತ್ತೇಜನದ ಜೊತೆಗೆ ವೃತ್ತಿ ನಿರ್ವಹಣೆಯಲ್ಲೂ ಉತ್ತಮ ಸಾಧನೆ ಮಾಡಲಾಗಿದೆ. 2024-25ನೇ ಆರ್ಥಿಕ ವರ್ಷದ ಮೊದಲ ಮೂರು ತ್ರೈಮಾಸಿಕದಲ್ಲಿ 1,81,908 ಕೋಟಿ ರೂ.ಗಳ ರಾಜಸ್ವ ಸಂಗ್ರಹವಾಗಿದೆ.
ಕಳೆದ ಸಾಲಿಗೆ ಹೋಲಿಸಿದರೆ ಇದು ಶೇ.13 ರಷ್ಟು ಬೆಳವಣಿಗೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ಶೇ.12 ರಷ್ಟು ಜಿಎಸ್‌ಟಿ ಬೆಳವಣಿಗೆ ದರ ದಾಖಲಾಗುವ ನಿರೀಕ್ಷೆಯಿದೆ ಎಂದರು.
ಮೈಕ್ರೋ ಫೈನಾನ್ಸ್ ಕಿರುಕುಳ ತಡೆಯಲು ಸುಗ್ರೀವಾಜ್ಞೆ ಜಾರಿಗೆ ತರಲಾಗಿದ್ದು, ಸಾಲ ವಸೂಲಾತಿ ನೆಪದಲ್ಲಿ ತೊಂದರೆ ಕೊಡುವವರಿಗೆ 6 ತಿಂಗಳಿನಿಂದ 10 ತಿಂಗಳವರೆಗೆ ಶಿಕ್ಷೆ ಹಾಗೂ ಗರಿಷ್ಠ 5 ಲಕ್ಷ ರೂ.ಗಳವರೆಗೂ ದಂಡ ವಿಧಿಸಲಾಗುತ್ತದೆ ಎಂದು ಹೇಳಿದರು.
ಹೊಸ ಕೈಗಾರಿಕಾ ನೀತಿ ರೂಪಿಸಲಾಗಿದ್ದು, ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲಿ 2ನೇ ಸ್ಥಾನದಲ್ಲಿದೆ. 2024 ರ ಏಪ್ರಿಲ್‌ನಿಂದ ಸೆ. ಅಂತ್ಯದವರೆಗೆ 88,853 ಮಿಲಿಯನ್ ಡಾಲರ್ ಸರಕು ಸೇವೆಗಳನ್ನು ರಫ್ತು ಮಾಡುವ ಮೂಲಕ ದೇಶದಲ್ಲೇ ನಂ.1 ಸ್ಥಾನದಲ್ಲಿದ್ದೇವೆ. ಶೇ.11.17 ರಷ್ಟು ಪ್ರಗತಿ ಸಾಧಿಸಲಾಗಿದೆ.
ಇತ್ತೀಚೆಗೆ ನಡೆದ ಜಾಗತಿಕ ಹೂಡಿಕೆದಾರರ ಬಂಡವಾಳ ಸಮಾವೇಶದಲ್ಲಿ 10.27 ಲಕ್ಷ ಹೂಡಿಕೆಯ ಒಡಂಬಡಿಕೆಯಾಗಿದ್ದು, ಶೇ.70ರಷ್ಟು ಬಂಡವಾಳ ಬೆಂಗಳೂರು ವ್ಯಾಪ್ತಿಯಿಂದ ಹೊರಗೆ ಹೂಡಿಕೆಯಾಗುತ್ತಿದೆ. ನಿರುದ್ಯೋಗ ನಿವಾರಣೆಗೆ ಇದು ಮಹತ್ವದ ಕ್ರಮ. ಉತ್ತರ ಕರ್ನಾಟಕ ಭಾಗದಲ್ಲಿ ಶೇ.45 ರಷ್ಟು ಹೂಡಿಕೆಗೆ ಉದ್ಯಮಿಗಳು ಆಸಕ್ತಿ ತೋರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಕಲಬುರಗಿಯಲ್ಲಿ 1 ಸಾವಿರ ಎಕರೆ ಜಾಗದಲ್ಲಿ ಜವಳಿ ಪಾರ್ಕ್ ಸ್ಥಾಪನೆಗೆ ಮೂಲಭೂತ ಸೌಕರ್ಯಗಳಿಗಾಗಿ 390 ಕೋಟಿ ರೂ. ನೀಡಲಾಗಿದೆ. ಇದರಿಂದ 1 ಲಕ್ಷ ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ. ಎಂಎಸ್‌ಎಂಇ ವಲಯಗಳ ಅಭಿವೃದ್ಧಿಗೆ 687 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಬೆಂಗಳೂರು ಹೊರವಲಯದಲ್ಲಿ 40 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಯೊಂದಿಗೆ ಕ್ಲೀನ್ ಸಿಟ್ ಅಭಿವೃದ್ಧಿಪಡಿಸಲಾಗುತ್ತಿದ್ದು, 80 ಸಾವಿರ ಉದ್ಯೋಗವಕಾಶಗಳು ಸೃಷ್ಟಿಯಾಗಲಿವೆ ಎಂದಿದ್ದಾರೆ.
*ವಿದ್ಯುತ್ ಉತ್ಪಾದನೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿ ಹೆಚ್ಚಿನ ಆದ್ಯತೆ
ವಿದ್ಯುತ್ ಉತ್ಪಾದನೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹೋಟ್ ತಿಳಿಸಿದ್ದಾರೆ.ವಿಧಾನಮಂಡಲದ ಜಂಟಿ ಅಧಿವೇಶನವನ್ನು ದ್ದೇಶಿಸಿ ಭಾಷಣ ಮಾಡಿದ ಅವರು, ವಿಜಯಪುರ ವಿಮಾನನಿಲ್ದಾಣ ಕಾಮಗಾರಿ ಇದೇ ವರ್ಷ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿದೆ.
ಮೈಸೂರು ವಿಮಾನನಿಲ್ದಾಣದ ರನ್‌ವೇ ವಿಸ್ತರಣೆ ಮಾಡಲಾಗುವುದು. ರಾಯಚೂರಿನಲ್ಲಿ 119 ಕೋಟಿ ರೂ. ಬಳಕೆ ಮಾಡಿ ವಿಮನನಿಲ್ದಾಣ ಅಭಿವೃದ್ಧಿಪಡಿಸಲಾಗುವುದು. ಧರ್ಮಸ್ಥಳ, ಮಡಿಕೇರಿ, ಚಿಕ್ಕಮಗಳೂರಿನಲ್ಲಿ ಏರ್‌ಸ್ಟ್ರಿಪ್ಗಳನ್ನು ನಿರ್ಮಿಸಲು ಭೂಮಿ ಗುರುತಿಸಲಾಗುತ್ತಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಬಳಿ 407 ಎಕರೆಯಲ್ಲಿ ಬೆಂಗಳೂರು ಸಿಗ್ನೆಚರ್ ಬ್ಯುಸಿನೆಸ್ ಪಾರ್ಕ್ ನಿರ್ಮಿಸಲಾಗುವುದು. 2ನೇ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕಾಗಿ ಪ್ರಕ್ರಿಯೆಗಳು ಆರಂಭಗೊಂಡಿವೆ. ಕಾರವಾರ ನೌಕಾನೆಲೆ ಬಳಿ ವಿಮಾನನಿಲ್ದಾಣಕ್ಕೂ ಭೂಸ್ವಾಧೀನ ಆರಂಭಿಸಲಾಗಿದೆ ಎಂದ ಹೇಳಿದ್ದಾರೆ.
ರಾಜ್ಯದ 9 ರೈಲ್ವೆ ಯೋಜನೆಗಳಿಗೆ 600 ಕೋಟಿ ರೂ.ಗಳನ್ನು ಒದಗಿಸಲಾಗಿದೆ. 66 ಕಿ.ಮೀ. ದ್ವಿಪಥ ಯೋಜನೆ ಕಾಮಗಾರಿ 2025ರ ಆಗಸ್ಟ್ ವೇಳೆಗೆ ಪೂರ್ಣಗೊಳ್ಳಲಿದೆ. ರೈಲ್ವೆ ಇಲಾಖೆ ಸಹಭಾಗಿತ್ವದಲ್ಲಿ 148.17 ಕಿ.ಮೀ. ಉದ್ದದ ಬೆಂಗಳೂರು ಉಪನಗರ ರೈಲ್ವೆ ಯೋಜನೆಯನ್ನು 15,765 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಸಂಚಾರದಟ್ಟಣೆ ನಿಯಂತ್ರಿಸಲು ಇದು ಮಹತ್ವದ ಉಪಕ್ರಮ ಎಂದು ವಿಶ್ಲೇಷಿಸಿದ್ದಾರೆ.
ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ 25 ಕೋಟಿ ರೂ. ವೆಚ್ಚ ಮಾಡಿ ಮುಂದಿನ 5 ವರ್ಷಗಳ ಅವಧಿಗೆ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ವೈಲ್ಡ್ ಅಂಡ್ ವೈರ್‌ಲೆಸ್ ತಂತ್ರಜ್ಞಾನ ಸಂಸ್ಥೆ ಸ್ಥಾಪಿಸಲಾಗುತ್ತಿದೆ. ಮೈಸೂರಿನ ಮಂಡಕಳ್ಳಿಯ ಕರ್ನಾಟಕ ಮುಕ್ತ ವಿವಿಯಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ಜಾಗತಿಕ ತಂತ್ರಜ್ಞಾನ ಕೇಂದ್ರ ಅಭಿವೃದ್ಧಿಪಡಿಸಲಾಗುವುದು.
ಮಹಿಳಾ ನವೋದ್ಯಮಗಳನ್ನು ಪ್ರೋತ್ಸಾಹಿಸಲು ಮಾರುಕಟ್ಟೆ ಪ್ರವೇಶ ಮತ್ತು ಕಾರ್ಯ ಚಟುವಟಿಕೆಯನ್ನು ವಿಸ್ತರಿಸಲು ಅಗತ್ಯ ಬೆಂಬಲ ನೀಡಲಾಗುತ್ತಿದೆ. ಜೈವಿಕ ತಂತ್ರಜ್ಞಾನ ನೀತಿ 4.0 ಮತ್ತು ಕರ್ನಾಟಕ ಜಾಗತಿಕ ಸಾಮರ್ಥ್ಯ ಕೇಂದ್ರಗಳ ನೀತಿಯನ್ನು ಪ್ರಕಟಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ 1.62 ಕೋಟಿ ಗ್ರಾಹಕರು ಸೌಲಭ್ಯ ಪಡೆಯುತ್ತಿದ್ದು, 17,290 ಕೋಟಿ ರೂ.ಗಳನ್ನು ಎಸ್ಕಾಂಗಳಿಗೆ ಬಿಡುಗಡೆ ಮಾಡಲಾಗಿದೆ. ಶರಾವತಿ ಟಿಎಸ್‌ಪಿಯಲ್ಲಿ 2 ಸಾವಿರ ವೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಕಾರ್ಯಾದೇಶ ನೀಡಲಾಗಿದೆ.
ತ್ಯಾಜ್ಯದಿಂದ 11.5 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸ್ಥಾವರ ಬಿಡದಿಯಲ್ಲಿ ಡಿಸೆಂಬರ್‌ನಿಂದ ಕಾರ್ಯಾರಂಭಗೊಂಡಿದೆ. ಪಿಎಂ ಕುಸುಮ್ ಯೋಜನೆಯಡಿ ರೈತರ ಪಂಪ್‌ಸೆಟ್ ಗಳನ್ನು ಸೌರೀಕರಣ ವಿದ್ಯುತ್‌ಗೆ ಸಂಪರ್ಕಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
*ನಿರಂತರ ನೀರು ಸರಬರಾಜು ಯೋಜನೆ :
ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ನಿರಂತರ ನೀರು ಸರಬರಾಜು ಯೋಜನೆಯನ್ನು ವಿಶ್ವಬ್ಯಾಂಕ್ ನೆರವಿನೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹೋಟ್ ತಿಳಿಸಿದರು.
ವಿಧಾನಮಂಡಲದ ಜಂಟಿ ಅಧಿವೇಶನವನ್ನು ದ್ದೇಶಿಸಿ ಭಾಷಣ ಮಾಡಿದ ಅವರು, 3,741 ಕೋಟಿ ರೂ. ವೆಚ್ಚದಲ್ಲಿ 5 ವರ್ಷಗಳ ಅವಧಿಗೆ ಈ ಯೋಜನೆಯನ್ನು ಅನುಷ ಸ್ಥಾನಗೊಳಿಸಲಾಗುತ್ತಿದ್ದು, 2025ರ ಜೂನ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದರು.
ಎಡಿಬಿ ಮತ್ತು ಅಮೃತ್ ಯೋಜನೆಯ ಅನುದಾನದಡಿ ಕರ್ನಾಟಕ ಸಮಗ್ರ ನಗರ ನೀರು ನಿರ್ವಹಣಾ ಹೂಡಿಕೆ ಕಾರ್ಯಕ್ರಮದಡಿ 2584 ಕೋಟಿ ರೂ. ವೆಚ್ಚದಲ್ಲಿ ರಾಜ್ಯದ 8 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.
ದುಡಿಯುವ ವರ್ಗದ ಜನರಿಗೆ ಗುಣಮಟ್ಟದ ಆಹಾರ ನೀಡಲು ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಮುಂದುವರೆಸಿದೆ. ಇಂದಿರಾ ಕ್ಯಾಂಟೀನ್ ಹಂತ-2 ರಡಿ 186 ಕ್ಯಾಂಟೀನ್ ನಿರ್ಮಾಣಗೊಳಿಸಲು ಅನುಮೋದನೆಯನ್ನು ನೀಡಿದ್ದು 156 ಕ್ಯಾಂಟೀನ್ ಪೂರ್ಣಗೊಂಡಿವೆ ಎಂದರು.
*ಡಬಲ್ ಡೆಕ್ಕರ್ ಮಾದರಿಯಲ್ಲಿ ಮೆಟ್ರೋ ಮತ್ತು ರಸ್ತೆ ಮೇಲೇತುವೆ ನಿರ್ಮಾಣ :
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ತಗ್ಗಿಸುವ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಡಬಲ್ ಡೆಕ್ಕರ್ ಮಾದರಿಯಲ್ಲಿ ಮೆಟ್ರೋ ಮತ್ತು ರಸ್ತೆ ಮೇಲೇತುವೆ ನಿರ್ಮಿಸಲು ಉದ್ದೇಶಿಸಿದೆ ಎಂದು ರಾಜ್ಯಪಾಲ ಥಾವರಚಂದ್ ಗೆಹೋಟ್ ತಿಳಿಸಿದರು.
ವಿಧಾನಮಂಡಲದ ಜಂಟಿ ಅಧಿವೇಶನವನ್ನು ದ್ದೇಶಿಸಿ ಭಾಷಣ ಮಾಡಿದ ಅವರು, ಸುಮಾರು 40.50ಕಿ.ಮೀ. ಸಂಯುಕ್ತ ಮೆಟ್ರೋ ರಸ್ತೆ ಮೇತುವೆ ಯೋಜನೆಯನ್ನು 8,916 ಕೋಟಿ ರೂ.ಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದರು. ಬೆಂಗಳೂರು ಪರಿಫೆರಲ್ ರಿಂಗ್ ರಸ್ತೆ ಭಾಗ-1 ರ ಯೋಜನೆಯನ್ನು ಕೈಗೊಳ್ಳಲು ಅಗತ್ಯವಿರುವ ರೂ.27,000 ಕೋಟಿಗಳನ್ನು ಹುಡೋ ಸಂಸ್ಥೆಯಿಂದ ಸಾಲದ ರೂಪದಲ್ಲಿ ಪಡೆಯಲು ನಿರ್ಧರಿಸಿದ್ದು, ಸಾಲದ ಮೊತ್ತಕ್ಕೆ ಭದ್ರತೆ ನೀಡಲಿದೆ.
ಕಾಮಗಾರಿಯನ್ನು ಸುಮಾರು 2565 ಎಕರೆ ಭೂ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡು ಕೈಗೊಳ್ಳಲು ಉದ್ದೇಶಿಸಲಾಗಿರುತ್ತದೆ. ಸುಮಾರು 73 ಕಿ.ಮೀ ಉದ್ಯದ ರಸ್ತೆ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬೆಂಗಳೂರು ಪೆರಿಫೆರಲ್ ರಿಂಗ್ ರಸ್ತೆ ಭಾಗ 1 ರ ಯೋಜನೆಯನ್ನು ಕೈಗೆತ್ತಿಕೊಳ್ಳಲು ಅಗತ್ಯವಿರುವ 27 ಸಾವಿರ ಕೋಟಿ ರೂ.ಗಳನ್ನು ಹುಡೋ ಸಂಸ್ಥೆಯಿಂದ ಸಾಲ ರೂಪದಲ್ಲಿ ಪಡೆಯಲು ನಿರ್ಧರಿಸಲಾಗಿದೆ. 73 ಕಿ.ಮೀ. ಉದ್ದದ ರಸ್ತೆ ನಿರ್ಮಾಣಕ್ಕೆ 2,565 ಎಕರೆ ಭೂಸ್ವಾಧೀನಪಡಿಸಿಕೊಳ್ಳಬೇಕಿದೆ ಎಂದರು.
ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ-2ಎ ರಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೃಷ್ಣರಾಜಪುರದವರೆಗೆ 19.75 ಕಿ.ಮೀ. ಮತ್ತು ಹಂತ-2ಬಿ ರಲ್ಲಿ ಕೃಷ್ಣರಾಜಪುರದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ 38.44 ಕಿ.ಮೀ. ಉದ್ದದ ಒಟ್ಟು 14,788 ಕೋಟಿ ರೂ. ಅಂದಾಜು ವೆಚ್ಚದ ಕಾಮಗಾರಿಯು ಪ್ರಗತಿಯಲ್ಲಿದೆ.
ಹಂತ-3 ಕಾರಿಡಾರ್ 1 ಕೆಂಪಾಪುರದಿಂದ ಜೆ.ಪಿ.ನಗರ 4ನೇ ಹಂತದವರೆಗೆ – 32.15 ಕಿ.ಮೀ ಮತ್ತು ಕಾರಿಡಾರ್ 2 – ಹೊಸಹಳ್ಳಿಯಿಂದ ಕಡಬಗೆರೆವರೆಗಿನ 12.50 2.2, ಒಟ್ಟು 44.65 8 ಉದ್ದದ 15,611 ಅಂದಾಜು ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಯೋಜನೆಗಳನ್ನು ಡಿಸೆಂಬರ್-2029 ರೊಳಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ಮಹಿಳೆ ಮತ್ತು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ನಿರ್ಭಯಾ ನಿಧಿಯಡಿ ಸಾರ್ವಜನಿಕ ಸೇವಾ ವಾಹನಗಳು ಅಂದರೆ ಮಜಲು ವಾಹನ, ಶಾಲಾ ವಾಹನ, ಖಾಸಗಿ ಸೇವಾ ವಾಹನ, ಮ್ಯಾಕ್ಸಿಕ್ಯಾಬ್, ಒಪ್ಪಂದ ವಾಹನ, ಮೋಟಾರ್ ಕ್ಯಾಬ್ ಹಾಗೂ ರಾಷ್ಟ್ರೀಯ ರಹದಾರಿ ಹೊಂದಿದ ಸರಕು ಸಾಗಣೆ ವಾಹನಗಳಿಗೆ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಸುವ ಯೋಜನೆಯನ್ನು ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿ ಒಟ್ಟು 6,04,863 ಸಾರ್ವಜನಿಕ ಸೇವಾ ವಾಹನಗಳ ಪೈಕಿ ಡಿಸೆಂಬರ್ 2024ರ ಅಂತ್ಯಕ್ಕೆ 40,848 ವಾಹನಗಳಿಗೆ ಈ ವ್ಯವಸ್ಥೆ ಅಳವಡಿಸಲಾಗಿದೆ ಎಂದರು.
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ ಭಾರೀ ಸಂಚಾರ ದಟ್ಟಣೆಯಾಗಿ ಅಪಘಾತಗಳ ಹೆಚ್ಚಳಕ್ಕೆ ಕಾರಣವಾಗಿದೆ. ಸುಗಮ ಸಂಚಾರಕ್ಕಾಗಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಬೆಂಗಳೂರು ಸಂಚಾರ ಪೊಲೀಸರು ಮುಂಚೂಣಿಯಲ್ಲಿದ್ದಾರೆ. ಸುಸ್ಥಿರ ಸಂಚಾರ ನಿರ್ವಹಣೆಗಾಗಿ ಎಎಸ್‌ಟಿಆರ್ಎಎಂ ಕೃತಕ ಬುದ್ದಿಮತ್ತೆ ಆಧಾರಿತ ಡೇಟಾ ಪ್ಲಾಟ್ ಫಾರಂ, ನೈಜ ಸಮಯದಲ್ಲಿ ಡೇಟಾವನ್ನು ಸಂಗ್ರಹಿಸಲು ಮತ್ತು ವಿಶ್ಲೇಷಿಸಲು ಮತ್ತು ಸಂಚಾರವನ್ನು ತೆರವುಗೊಳಿಸುವುದಕ್ಕೆ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಕೃತಕ ಬುದ್ಧಿಮತ್ತೆ ಆಧಾರಿತ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ ಎಂದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಗರದಾದ್ಯಂತ 34 ಸ್ಥಳಗಳಲ್ಲಿ ವಸತಿ ಸಮುಚ್ಚಯ ನಿರ್ಮಿಸಿ ಸುಮಾರು 30,000 ವಸತಿ ಘಟಕಗಳನ್ನು ಹಂಚುವ ಗುರಿಯನ್ನು ಹಮ್ಮಿಕೊಂಡಿದೆ. ಈ ಪೈಕಿ ಇದುವರೆವಿಗೂ 25 ಯೋಜನೆಗಳಲ್ಲಿ ಒಟ್ಟು 14,909 ಫ್ಲಾಟ್‌ಗಳ ನಿರ್ಮಾಣ ಕಾರ್ಯಕೈಗೊಂಡಿದ್ದು, 10,615 ಫ್ಲಾಟ್‌ಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿವೆ ಎಂದು ವಿವರಿಸಿದರು.
ಮಹಾತ್ಮಕಾಂಕ್ಷೆಯ ಯೋಜನೆಯಲ್ಲಿ ಒಂದಾದ ಕಾವೇರಿ 5ನೇ ಹಂತ ಪೂರ್ಣಗೊಂಡಿದ್ದು, 775 ದಶಲಕ್ಷ ಲೀಟರ್ ಹೆಚ್ಚುವರಿಯಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳ 50 ಲಕ್ಷ ಜನರಿಗೆ ಕಾವೇರಿ ಕುಡಿಯುವ ನೀರನ್ನು ಸರಬರಾಜು ಮಾಡುವ ಯೋಜನೆಯನ್ನು ಜಾರಿಗೊಳಿಸಿದೆ ಎಂದರು.
ಬೆಂಗಳೂರು ನಗರ ಹಾಗೂ ಅದರ ಉಪನಗರಗಳಿಗೆ ಹೆಚ್ಚುವರಿ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು 6 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಸದರಿ ಯೋಜನೆಯನ್ನು ಕೈಗೊಳ್ಳಲು 6939 ಕೋಟಿ ರೂ.ಗಳ ವೆಚ್ಚದಲ್ಲಿ ವಿಸ್ತ್ರತ ಯೋಜನಾ ವರದಿ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.
*10.91 ಕೋಟಿ ಮಾನವ ದಿನಗಳ ಉದ್ಯೋಗ ಸೃಜನೆ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪ್ರಸ್ತುತ ಸಾಲಿನಲ್ಲಿ ಜನವರಿ-2025ರ ಅಂತ್ಯದವರೆಗೆ 10.91 ಕೋಟಿ ಮಾನವ ದಿನಗಳ ಉದ್ಯೋಗ ಸೃಜನೆ ಮಾಡಲಾಗಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹೋಟ್ ತಿಳಿಸಿದರು.
ವಿಧಾನಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಿದ ಅವರು, ಪ್ರಸ್ತುತ ಸಾಲಿನಲ್ಲಿ ಒಟ್ಟು 5626.56 ಕೋಟಿ ರೂ. ಮೊತ್ತ ವೆಚ್ಚ ಮಾಡಲಾಗಿದೆ ಎಂದು ಹೇಳಿದರು.ರಾಜ್ಯ ಸರ್ಕಾರವು ಗ್ರಾಮೀಣ ಮನೆಗಳಿಗೆ ನಳ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಮುಂದುವರೆಸಿದೆ. 101.32 ಲಕ್ಷ ಮನೆಗಳ ಪೈಕಿ ಈವರೆಗೆ 83.94 ಲಕ್ಷ ಮನೆಗಳಿಗೆ ನಳ ಸಂಪರ್ಕವನ್ನು ಒದಗಿಸಲಾಗಿದೆ. 2024-25ನೇ ಸಾಲಿನಲ್ಲಿ 7.27 ಲಕ್ಷ ಮನೆಗಳಿಗೆ ಸಂಪರ್ಕ ಒದಗಿಸಲಾಗಿದೆ ಎಂದರು.
ಬಾಹ್ಯ ನೆರವಿನ ಯೋಜನೆಯಡಿ 7,110 ಕಿಲೋ ಮೀಟರ್ ಉದ್ದದ ಗ್ರಾಮೀಣ ರಸ್ತೆಗಳನ್ನು 5,190 ಕೋಟಿ ರೂ.ಗಳಲ್ಲಿ ಅಭಿವೃದ್ಧಿ ಪಡಿಸಲು ಪ್ರಗತಿಪಥ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದೆ. ಜೊತೆಗೆ 1,150 ಕಿ.ಮೀ. ಉದ್ದದ ರಸ್ತೆಗಳನ್ನು ಕಲ್ಯಾಣ ಪಥ ಕಾರ್ಯಕ್ರಮದಡಿ ಅಭಿವೃದ್ಧಿ ಪಡಿಸಲು ಉದ್ದೇಶಿಸಿ ಟೆಂಡರ್‌ಗಳನ್ನು ಕರೆಯಲಾಗಿದೆ ಎಂದು ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ 3867 ಕೂಸಿನ ಮನೆಗಳನ್ನು ಪ್ರಾರಂಭಿಸಲಾಗಿದ್ದು, 49,288 ಮಕ್ಕಳ ಪಾಲನೆ ಮಾಡಲಾಗುತ್ತಿದೆ. ಒಟ್ಟು ಅರಿವು 5,770 ಕೇಂದ್ರಗಳ ಪೈಕಿ 5,895 ಕೇಂದ್ರಗಳನ್ನು ಡಿಜಿಟಲೀಕರಣಗೊಳಿಸಿದ್ದು, 50.28 ಲಕ್ಷ ಮಕ್ಕಳನ್ನು ನೋಂದಣಿ ಮಾಡಲಾಗಿದೆ. ಇದಲ್ಲದೇ ಗ್ರಂಥಾಲಯ ಹೊಂದಿಲ್ಲದ ಗ್ರಾಮಗಳಲ್ಲಿ 6,599 ಹೊಸ ಗ್ರಂಥಾಲಯಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದರು.
*ಲಿಂಗತ್ವ ಅಲ್ಪಸಂಖ್ಯಾ ತರಿಗೂ ಗೃಹಲಕ್ಷ್ಮಿ ಯೋಜನೆ ವಿಸ್ತರಣೆ :
ಗೃಹಲಕ್ಷ್ಮಿ ಯೋಜನೆಯನ್ನು ಲಿಂಗತ್ವ ಅಲ್ಪಸಂಖ್ಯಾ ತರಿಗೂ ವಿಸ್ತರಿಸಲಾಗಿದೆ ಎಂದು ರಾಜ್ಯಪಾಲ ಥಾವರಚಂದ್ ಗೆಹೋಟ್ ತಿಳಿಸಿದರು.ವಿಧಾನಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಿದ ಅವರು, ಪ್ರತೀ ತಿಂಗಳು 2 ಸಾವಿರ ರೂ. ನೀಡುವ ಗೃಹಲಕ್ಷ್ಮಿ ಯೋಜನೆಗೆ 1,26,24,547 ಮಹಿಳೆಯರು ನೋಂದಾವಣಿಯಾಗಿದ್ದು ಈವರೆಗೂ 36 ಸಾವಿರ ಕೋಟಿ ರೂ.ಗಳನ್ನು ನೇರವಾಗಿ ಖಾತೆಗೆ ಜಮಾ ಮಾಡಲಾಗಿದೆ ಎಂದು ಹೇಳಿದರು.
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಗುವಿನ ಜನನವನ್ನು ಪ್ರೋತ್ಸಾಹಿಸುವ ಮತ್ತು ಲಿಂಗಾನುಪಾತವನ್ನು ಉತ್ತಮಗೊಳಿಸುವ ಉದ್ದೇಶದಿಂದ ಭಾಗ್ಯಲಕ್ಷ್ಮಿ ಸುಕನ್ಯ ಸಮೃದ್ಧಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಪ್ರತೀ ಹೆಣ್ಣು ಮಗುವಿನ ಖಾತೆಗೆ ವರ್ಷಕ್ಕೆ 3 ಸಾವಿರ ರೂ.ನಂತೆ 15 ವರ್ಷದವರೆಗೆ ಹಣ ಜಮೆ ಮಾಡಲಾಗುತ್ತಿದ್ದು, 5,59,693 ಫಲಾನುಭವಿಗಳ ಖಾತೆಗೆ ಈವರೆಗೂ 168 ಕೋಟಿ ರೂ.ಗಳನ್ನು ಜಮೆ ಮಾಡಲಾಗಿದೆ ಎಂದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 10 ಲಕ್ಷ ಫಲಾನುಭವಿಗಳನ್ನು ನೊಂದಾಯಿಸಿ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಹೆಲ್ತ್ ಕೇರ್ ಯೋಜನೆಯಡಿ ಮತ್ತಷ್ಟು ಸೌಲಭ್ಯ ವಿಸ್ತರಣೆಗಾಗಿ ರಾಜ್ಯಾದ್ಯಂತ 43 ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.
ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆಯಡಿ 10.61 ಕೋಟಿ ರೂ.ಗಳನ್ನು ಪಾವತಿಸಲಾಗಿದೆ. ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯಲ್ಲಿ 25 ವರ್ಗದ 21 ಲಕ್ಷ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಿ ಸವಲತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು. ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯಡಿ 5.12 ಲಕ್ಷ ಕಾರ್ಮಿಕರನ್ನು ನೋಂದಾಯಿಸಲಾಗಿದೆ ಎಂದರು.
*ರಾಜ್ಯದಲ್ಲಿ 36,799 ಎಕರೆ ನೀರಾವರಿ ಸಾಮರ್ಥ್ಯ ಹೆಚ್ಚಳ :
ರಾಜ್ಯದಲ್ಲಿ 36,799 ಎಕರೆ ನೀರಾವರಿ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹೋಟ್ ತಿಳಿಸಿದರು. ವಿಧಾನಮಂಡಲದ ಜಂಟಿ ಅಧಿವೇಶನವನ್ನು ದ್ದೇಶಿಸಿ ಭಾಷಣ ಮಾಡಿದ ಅವರು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಲಸಂಪನ್ಮೂಲ ಇಲಾಖೆಗೆ 16,837 ಕೋಟಿ ರೂ. ಅನುದಾನ ಒದಗಿಸಲಾಗಿದ್ದು ಎತ್ತಿನಹೊಳೆ ಯೋಜನೆ ಲೋಕಾರ್ಪಣೆಗೊಂಡಿದೆ.
ಬಾಕಿ ನೀರಾವರಿ ಯೋಜನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸರ್ಕಾರ ಬದ್ಧವಾಗಿದೆ. ಕೆಲವು ಯೋಜನೆಗಳಿಗೆ ಕೇಂದ್ರದ ಅನುಮತಿ ಅಗತ್ಯವಿರುವುದರಿಂದ ಒತ್ತಡ ಹೇರುವ ಕೆಲಸವನ್ನು ಮುಂದುವರೆಸಲಾಗಿದೆ ಎಂದರು. ಸಣ್ಣ ನೀರಾವರಿ ಇಲಾಖೆಯಿಂದ 5,847 ಹೆಕ್ಟೇರ್ ನೀರಾವರಿ ಸಾಮರ್ಥ್ಯವನ್ನು ಸೃಷ್ಟಿಸಲಾಗಿದೆ. 165 ಬ್ಯಾರೇಜ್ ಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆಯಲ್ಲಿ 2491 ಕಿ.ಮೀ. ರಾಜ್ಯ ಹೆದ್ದಾರಿಗಳು 3103, ಕಿ.ಮೀ. ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿ ಹಾಗೂ ನವೀಕರಣ, 199 ಸೇತುವೆಗಳ ನಿರ್ಮಾಣವನ್ನು ಪೂರ್ಣಗೊಳಿಸಲಾಗಿದೆ. ಎಚ್‌ಎಸ್‌ಡಿಪಿ ಹಂತ 5 ರಡಿಯಲ್ಲಿ ಒಟ್ಟು 9 ಸಾವಿರ ಕೋಟಿ ರೂ. ವೆಚ್ಚದಲ್ಲಿ 2500 ಕಿ.ಮೀ. ಹೆದ್ದಾರಿಗಳ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ರಾಜ್ಯವ್ಯಾಪಿ ರಸ್ತೆ ಮತ್ತು ಸೇತುವೆಗಳ ನಿರ್ಮಾಣಕ್ಕೆ 4 ಸಾವಿರ ಕೋಟಿ ರೂ. ಮೊತ್ತದ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ. ಸಿಐಆರ್ಎಫ್ ಯೋಜನೆಯಡಿ 1385 ಕೋಟಿ ರೂ.ಗಳ ವೆಚ್ಚದಲ್ಲಿ 2,056 ಕಿ.ಮೀ. ರಾಜ್ಯದ 295 ರಸ್ತೆಗಳ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
*ರಾಜ್ಯದಲ್ಲಿ ಗಂಭೀರ ಕಾನೂನು ಸುವ್ಯವಸ್ಥೆ ಸಮಸ್ಯೆಗಳು ಉದ್ಭವಿಸಿಲ್ಲ :
ಕಳೆದ 19 ತಿಂಗಳಿನಲ್ಲಿ ರಾಜ್ಯದಲ್ಲಿ ಗಂಭೀರ ಕಾನೂನು ಸುವ್ಯವಸ್ಥೆ ಸಮಸ್ಯೆಗಳು ಉದ್ಭವಿಸಿಲ್ಲ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹೋಟ್ ತಿಳಿಸಿದರು. ವಿಧಾನಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಿದ ಅವರು, ಪೊಲೀಸ್ ಠಾಣೆಗಳು ಜನಸ್ನೇಹಿಯಾಗಿ ಕೆಲಸ ಮಾಡುತ್ತಿವೆ.
ಇತ್ತೀಚಿನ ದಿನಗಳಲ್ಲಿ ಸೈಬರ್ ಪ್ರಕರಣಗಳು ಹೆಚ್ಚಾಗುತ್ತಿವೆ. ರಾಜ್ಯ ಪೊಲೀಸ್ ಇಲಾಖೆ ನಿರಂತರವಾಗಿ ಜಾಗೃತಿ ಮೂಡಿಸಿ ಅಪರಾಧಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚುತ್ತಿದೆ. ಹೀಗಾಗಿ ಪ್ರಕರಣಗಳ ವೇದಿಕೆಯಾಗುತ್ತಿದೆ ಎಂದು ಹೇಳಿದರು.
ಪೊಲೀಸ್ ಇಲಾಖೆಗೆ ಅಗತ್ಯ ಸಂಪನ್ಮೂಲಗಳನ್ನು ಒದಗಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 26 ಸುಸಜ್ಜಿತ ಪೊಲೀಸ್ ಠಾಣೆಗಳು ಹಾಗೂ 2,016 ವಸತಿ ಗೃಹಗಳನ್ನು ನಿರ್ಮಿಸಲಾಗುತ್ತಿದೆ ಎಂದರು. ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿ ಜೊತೆಗೆ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಸೇರಿದಂತೆ ನಾಡಿನ ಸಮಗ್ರ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.