ಬೆಂಗಳೂರು,ಸೆ.9– ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಲ್ಲಿಯವರೆಗೂ ರಾಜ್ಯದಲ್ಲಿ ಅಧಿಕಾರದಲ್ಲಿರುತ್ತದೆಯೋ ಅಲ್ಲಿಯವರೆಗೂ ಹಿಂದೂಗಳಿಗೆ ಉಳಿಗಾಲವಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ತಮ ಸಾಮಾಜಿಕ ಜಾಲತಾಣ ಎಕ್‌್ಸನಲ್ಲಿ ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿ ಗಣಪತಿ ವಿಸರ್ಜನೆ ವೇಳೆ ನಡೆದ ಗಲಭೆ ವಿಚಾರವಾಗಿ ಸರ್ಕಾರದ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರದಿಂದ ಈ ವರ್ಷವೂ ಗಣೇಶೋತ್ಸವಕ್ಕೆ ವಿಘ್ನ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಳೆದ ವರ್ಷ ನಾಗಮಂಗಲ, ಶಿವಮೊಗ್ಗ ಸೇರಿದಂತೆ ಅನೇಕ ಕಡೆ ಗಣೇಶೋತ್ಸವ ವೇಳೆ ಕೋಮು ದಳ್ಳುರಿ ನಡೆದಿದ್ದರೂ ಈ ಬಾರಿ ಎಚ್ಚೆತ್ತುಕೊಳ್ಳದ ಕಾಂಗ್ರೆಸ್ ಸರ್ಕಾರ ಈ ವರ್ಷ ಮದ್ದೂರು, ಹುಬ್ಬಳ್ಳಿ, ಬಾಗಲಕೋಟೆ, ಸಾಗರ, ಧಾರವಾಡ ಸೇರಿದಂತೆ 4-5 ಕಡೆಗಳಲ್ಲಿ ನೆಮದಿಯ ಗಣೇಶೋತ್ಸವಕ್ಕೆ ಭಂಗ ಉಂಟುಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಪ್ರಕಾರ ಇವೆಲ್ಲವೂ ಆಕಸಿಕ, ಸಣ್ಣ ಘಟನೆಗಳೋ ಅಥವಾ ಈ ಘಟನೆಗಳ ಬಗ್ಗೆ ಗೊತ್ತಿಲ್ಲ ಎಂದು ಎಂದಿನಂತೆ ತಿಪ್ಪೆ ಸರಿಸುತ್ತಾರೋ ಆ ಭಗವಂತನೇ ಬಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಒಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಇರುವವರೆಗೂ ಕರ್ನಾಟಕದಲ್ಲಿ ಹಿಂದೂಗಳಿಗೆ ಉಳಿಗಾಲವಿಲ್ಲ. ಹಿಂದೂಗಳು ತಮ ಹಬ್ಬ, ಹರಿದಿನಗಳನ್ನು, ಉತ್ಸವ, ಜಾತ್ರೆಗಳನ್ನು ನೆಮದಿಯಿಂದ ಆಚರಿಸಲು ಸಾಧ್ಯವಿಲ್ಲ ಎಂದು ಆತಂಕ ಹೊರಹಾಕಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ ಸಿಎಂ ಸಿದ್ದರಾಮಯ್ಯನವರೇ, ನಿಮ ಸ್ವಯಂಘೋಷಿತ, ಜಾತ್ಯತೀತ ಸರ್ಕಾರದಲ್ಲಿ ಹಿಂದೂಗಳು ಹೇಗೆ ಎರಡನೇ ದರ್ಜೆ ಪ್ರಜೆಗಳಾಗಿದ್ದಾರೆ ಎನ್ನುವುದನ್ನು ಈ ಹೆಣ್ಣುಮಗಳು ಬಹಳ ಚೆನ್ನಾಗಿ ಹೇಳಿದ್ದಾಳೆ ನೋಡಿ ಎಂದು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಡಿಸಿಎಂ ಶಿವಕುಮಾರ್ ಅವರೇ, ನಿಮ ಸ್ವಯಂಘೋಷಿತ ಬ್ರದರ್ಸ್‌ಗಳು ಹೇಗೆ ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎನ್ನುವುದನ್ನು ಕಿವಿಗೊಟ್ಟು ಕೇಳಿ ಸ್ವಾಮಿ. ನಮಸ್ತೇ ಸದಾ ವತ್ಸಲೇ ಎಂದು ಹೇಳಿದ್ದಕ್ಕೆ ವಾರ್ನಿಂಗ್ ಬಂದ ಕೂಡಲೇ ಎದ್ದೆನೋ ಬಿದ್ದೆನೋ ಎಂದು ಹೆದರಿಕೊಂಡು ಸುದ್ದಿಗೋಷ್ಠಿ ಮಾಡಿ ಹೈಕಮಾಂಡ್ ನಾಯಕರಿಗೆ ಕ್ಷಮೆ ಕೇಳಿದರಲ್ಲ, ಈಗ ಗಣೇಶೋತ್ಸವಕ್ಕೆ ಭದ್ರತೆ ಕೊಡಲಾಗದ ತಾವು ಹಿಂದೂಗಳ ಕ್ಷಮೆ ಕೇಳುತ್ತೀರಾ? ಎಂದು ಪ್ರಶ್ನಿಸಿದ್ದಾರೆ.ನಾಚಿಕೆಯಾಗಬೇಕು ನಿಮ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಎಂದು ಅಶೋಕ್ ಸಿಡಿಮಿಡಿಗೊಂಡಿದ್ದಾರೆ.