ಬೆಂಗಳೂರು, ಮಾ.9– ಚಿತ್ರದುರ್ಗದ ತಮಟಕಲ್ ಬ್ರಿಡ್ಜ್ ಬಳಿ ಇಂದು ಮಧ್ಯಾಹ್ನ ಟ್ರಕ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಗರದ ಐವರು ಮೃತಪಟ್ಟಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ಸಿ.ವಿ.ರಾಮನ್‌ನಗರದ ನಿವಾಸಿ ಚಿದಂಬರ್ ಆಚಾರ್ಯ(52), ಈರಣ್ಣ ಬಡಾವಣೆ ನಿವಾಸಿ ಮಲ್ಲಿಕಾರ್ಜುನ (50), ವಿದ್ಯಾರಣ್ಯಾಪುರದ ನಿವಾಸಿ ರುದ್ರಸ್ವಾಮಿ(52) ಹಾಗೂ ಶಾಂತಮೂರ್ತಿ(60) ಎಂದು ಗುರುತಿಸಲಾಗಿದೆ. ಮತ್ತೊಬ್ಬರ ಹೆಸರು ಮತ್ತು ವಿಳಾಸ ತಿಳಿದುಬಂದಿಲ್ಲ.ಗಂಭೀರವಾಗಿ ಗಾಯಗೊಂಡಿರುವ ಒಬ್ಬರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.
ನಗರದ ಈ ಆರು ಮಂದಿ ಕಾರಿನಲ್ಲಿ ಸವದತ್ತಿಯಲ್ಲಮ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುವಾಗ ಈ ಅಪಘಾತ ಸಂಭವಿಸಿದೆ. ಇಂದು ಮಧ್ಯಾಹ್ನ 12 ಗಂಟೆ ಸಂದರ್ಭದಲ್ಲಿ ಕಾರು ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ ತಮಟಕಲ್ ಬ್ರಿಡ್ಜ್ ಹತ್ತಿರ ಬರುತ್ತಿದ್ದಾಗ ನಿಂತಿದ್ದ ಟ್ರಕ್‌ವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರು ಮೃತಪಟ್ಟಿದ್ದು, ಒಬ್ಬರು ಗಾಯಗೊಂಡಿದ್ದಾರೆ.
ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಸುದ್ದಿ ತಿಳಿದ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಅಪಘಾತದ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಾರಿನ ಅತಿವೇಗವೇ ಈ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.