Thursday, November 14, 2024
Homeಮನರಂಜನೆದರ್ಶನ್ ಜಾಮೀನು ತೆರವಿಗೆ ಮೇಲ್ಮನವಿ ಗೃಹ ಇಲಾಖೆ ಪರಿಶೀಲನೆ

ದರ್ಶನ್ ಜಾಮೀನು ತೆರವಿಗೆ ಮೇಲ್ಮನವಿ ಗೃಹ ಇಲಾಖೆ ಪರಿಶೀಲನೆ

Home department review of Darshan's appeal against bail

ಬೆಂಗಳೂರು,ನ.13- ನಟ ದರ್ಶನ್ ಅವರ ಮಧ್ಯಂತರ ಜಾಮೀನು ತೆರವು ಕುರಿತು ಮೇಲನವಿ ಸಲ್ಲಿಸುವ ಕುರಿತಂತೆ ಗೃಹ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರ್ಶನ್ ಪ್ರಕರಣದಲ್ಲಿ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಅದನ್ನು ತೆರವು ಮಾಡುವ ಸಂಬಂಧ ಸುಪ್ರೀಂಕೋರ್ಟ್ಗೆ ಮೇಲನವಿ ಸಲ್ಲಿಸುವ ಬಗ್ಗೆ ಸಾಕಷ್ಟು ಪ್ರಕ್ರಿಯೆಗಳು ನಡೆಯಬೇಕು. ಅನಗತ್ಯ ವಿಳಂಬವಾಗುತ್ತಿದೆ ಎಂಬ ಆಕ್ಷೇಪ ಸರಿಯಲ್ಲ.

ಪೊಲೀಸರು ಯಾವ ಸಮಯದಲ್ಲಿ ಮೇಲನವಿ ಸಲ್ಲಿಸಲು ಅನುಮತಿ ಕೇಳಿದ್ದಾರೆ. ಯಾವಾಗ ತೀರ್ಮಾನ ಮಾಡಬೇಕು ಎಂಬುದನ್ನು ಗೃಹ ಇಲಾಖೆ ಕಾರ್ಯದರ್ಶಿಯವರು ನಿರ್ಧರಿಸುತ್ತಾರೆ. ಒಂದು ವೇಳೆ ಮೇಲನವಿ ಸಲ್ಲಿಸುವುದಾದರೆ ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ನಾನು ಸಲಹೆ ನೀಡಿದ್ದೇನೆ ಎಂದರು.

ಈ ವಿಚಾರದಲ್ಲಿ ಕಾನೂನು ಇಲಾಖೆಯ ಅಭಿಪ್ರಾಯ ಪಡೆಯಬೇಕು. ಅಲ್ಲಿಂದ ಗೃಹ ಇಲಾಖೆ ಪರಿಶೀಲನೆ ನಡೆಸಿ ನಿರ್ಧಾರ ತೆಗೆದುಕೊಳ್ಳಬೇಕಿದೆ. ಎಲ್ಲವನ್ನೂ ಏಕಾಏಕಿ ನಿರ್ಧರಿಸಲಾಗುವುದಿಲ್ಲ ಎಂದು ಹೇಳಿದರು.

ಅಲ್ಪಸಂಖ್ಯಾತರಿಗೆ ಗುತ್ತಿಗೆ ಕಾಮಗಾರಿಗಳಲ್ಲಿ ಶೇ.4 ರಷ್ಟು ಮೀಸಲಾತಿ ನೀಡಬೇಕು ಎಂದು ಆ ಸಮುದಾಯದ ಶಾಸಕರು, ಸಚಿವರು ಮೇಲನವಿ ಸಲ್ಲಿಸಿದ್ದಾರೆ. ಈ ವಿಚಾರವಾಗಿ ಯಾವುದೇ ನಿರ್ಧಾರವಾಗಿಲ್ಲ. ಅನಗತ್ಯವಾಗಿ ತಪ್ಪು ಸಂದೇಶ ರವಾನೆಯಾಗುತ್ತಿದೆ. ಬೇಡಿಕೆ ಬಂದಿರುವುದು ನಿಜ. ಆದರೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದರು.

ಚಿಕ್ಕಮಗಳೂರಿನಲ್ಲಿ ಕೆಲವು ಪ್ರದೇಶಗಳಲ್ಲಿ 4 ಅಥವಾ 6 ಜನ ಶಂಕಿತ ನಕ್ಸಲೀಯರು ಕಾಣಿಸಿಕೊಂಡಿದ್ದಾರೆ ಎಂಬ ವರದಿ ಇದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕೂಂಬಿಂಗ್ ಆಪರೇಷನ್ ಆರಂಭಿಸಿದ್ದಾರೆ ಎಂದು ತಿಳಿಸಿದರು.

ಬಂಡೀಪುರ ಅರಣ್ಯ ಪ್ರದೇಶದ ರಸ್ತೆಯಲ್ಲಿ ರಾತ್ರಿ ವೇಳೆ ಸಂಚಾರಕ್ಕೆ ಮೊದಲಿನಿಂದಲೂ ಅನುಮತಿ ಇತ್ತು. ಅದು ಹೊಸದೇನಲ್ಲ. ಕೆಲ ಕಾರಣಗಳಿಗಾಗಿ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಮತ್ತೆ ಆರಂಭಿಸಬೇಕು ಎಂದಾದರೆ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

ಮಹರ್ಷಿ ವಾಲೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಚಿವ ಬಿ.ನಾಗೇಂದ್ರ ಇನ್ನೂ ನಿರ್ದೋಷಿ ಎಂದು ತೀರ್ಮಾನವಾಗಿಲ್ಲ. ಒಂದು ವೇಳೆ ಅವರ ಮೇಲಿನ ಆರೋಪ ನಿರಾಧಾರ ಎಂದಾದರೆ ಮತ್ತೆ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ ಎಂದು ಹೇಳಿದರು.

ಸಚಿವ ಸಂಪುಟ ವಿಸ್ತರಣೆ ಹಾಗೂ ನಾಗೇಂದ್ರ ಅವರ ಸೇರ್ಪಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹೈಕಮಾಂಡ್ಗೆ ಬಿಟ್ಟ ವಿಚಾರ. ಈ ಹಿಂದೆ ಸಚಿವ ಕೆ.ಜೆ.ಜಾರ್ಜ್ ಅವರು ನಿರ್ದೋಷಿ ಎಂದು ತೀರ್ಮಾನವಾದಾಗ ಅವರನ್ನು ಮರಳಿ ಸಂಪುಟಕ್ಕೆ ತೆಗೆದುಕೊಳ್ಳಲಾಯಿತು. ಈಗ ಅದೇ ರೀತಿ ನಾಗೇಂದ್ರ ಅವರನ್ನು ಮರಳಿ ಸಂಪುಟಕ್ಕೆ ಸೇರಿಸಿಕೊಂಡರೆ ಅದರಲ್ಲಿ ತಪ್ಪೇನೂ ಇಲ್ಲ ಎಂದರು.

ಒಳಮೀಸಲಾತಿ ವಿಚಾರವಾಗಿ ಈಗಾಗಲೇ ಸಮಿತಿ ರಚಿಸಲಾಗಿದೆ. ಉಪಚುನಾವಣೆಯ ಬಳಿಕ ಈ ಪ್ರಕ್ರಿಯೆಗಳು ಚುರುಕುಗೊಳ್ಳಲಿವೆ. ಸಮಿತಿ 3 ತಿಂಗಳ ಒಳಗಾಗಿ ವರದಿ ನೀಡಲಿದೆ. 3 ದಶಕಗಳ ಹೋರಾಟದಲ್ಲಿ ತಾಳೆಯಿಂದಿದ್ದವರು ಇನ್ನು 3 ತಿಂಗಳು ಸಹನೆಯಿಂದಿರಬೇಕು ಎಂದು ಮನವಿ ಮಾಡಿದರು.

ಕೋವಿಡ್ ಹಗರಣದಲ್ಲಿ ನ್ಯಾಯಮೂರ್ತಿ ಮೈಕಲ್ ಡಿ. ಕುನ್ನಾ ಅವರ ನೇತೃತ್ವದ ಆಯೋಗ ನೀಡಿರುವ 4 ಸಂಪುಟಗಳ ವರದಿಯನ್ನು ಸಚಿವ ಸಂಪುಟದ ಉಪಸಮಿತಿ ಪರಿಶೀಲನೆ ನಡೆಸಿ ಸಂಪುಟ ಸಭೆಗೆ ಶಿಫಾರಸುಗಳನ್ನು ನೀಡಲಾಗುವುದು. ಆ ವೇಳೆ ಎಸ್ಐಟಿ ಸೇರಿದಂತೆ ಯಾವ ಸ್ವರೂಪದ ತನಿಖೆ ನಡೆಸಬೇಕು ಎಂದು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.

ಸದ್ಯಕ್ಕೆ ನಾಳೆ ನಡೆಯುವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿಲ್ಲ ಎಂದು ಹೇಳಿದರು.ಕಾಂಗ್ರೆಸಿಗರನ್ನು ದುರುಳರು ಎಂದು ಬಿಜೆಪಿಯವರು ಟೀಕಿಸುವುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ತಿರುಗೇಟು ನೀಡಿದರು.

RELATED ARTICLES

Latest News