Thursday, July 4, 2024
Homeರಾಜ್ಯಗೃಹಸಚಿವ ಡಾ.ಜಿ.ಪರಮೇಶ್ವರ್‌ ಅವರ ಖಾತೆ ಬದಲಾವಣೆ ಬಗ್ಗೆ ಚರ್ಚೆ

ಗೃಹಸಚಿವ ಡಾ.ಜಿ.ಪರಮೇಶ್ವರ್‌ ಅವರ ಖಾತೆ ಬದಲಾವಣೆ ಬಗ್ಗೆ ಚರ್ಚೆ

ಬೆಂಗಳೂರು, ಮೇ 24– ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವಿಚಾರವಾಗಿ ಪ್ರಶ್ನೆಗಳು ಉದ್ಭವಿಸಿದ್ದು, ಗೃಹಸಚಿವ ಡಾ.ಜಿ.ಪರಮೇಶ್ವರ್‌ ಅವರ ಖಾತೆ ಬದಲಾವಣೆ ಬಗ್ಗೆ ಚರ್ಚೆಗಳು ಶುರುವಾಗಿವೆ. ಕಳೆದ ಒಂದು ವರ್ಷದಿಂದಲೂ ಒಂದರ ಮೇಲೊಂದರಂತೆ ಅಹಿತಕರ ಘಟನೆಗಳು ನಡೆಯುತ್ತಲೇ ಇವೆ. ಸರ್ಕಾರ ರಚನೆಯಾದ ಆರಂಭದಲ್ಲೇ ಬೆಳಗಾವಿಯಲ್ಲಿ ಅಂತರ್ಜಾತಿ ಪ್ರೇಮ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯುವಕನ ಕುಟುಂಬದ ಮಹಿಳೆಯನ್ನು ಬೆತ್ತಲೆ ಮಾಡಿ ಹಲ್ಲೆ ನಡೆಸಿದ್ದು ಭಾರಿ ಚರ್ಚೆಗೆ ಗ್ರಾಸವಾಗಿತ್ತು.

ಅನಂತರ ಕರಾವಳಿ ಸೇರಿದಂತೆ ಕೆಲವೆಡೆ ಅಲ್ಲಲ್ಲಿ ಕೆಲವು ಗಲಾಟೆ ಪ್ರಕರಣಗಳು ವರದಿಯಾದವಾದರೂ ಹೆಚ್ಚಿನ ಸಮಸ್ಯೆಯಾಗಲಿಲ್ಲ. ಮಂಗಳೂರಿನಲ್ಲಿ ಶಾಸಕ ಹರೀಶ್‌ ಪೂಂಜಾ ಈ ಮೊದಲು ಅರಣ್ಯಾಧಿಕಾರಿಗಳೊಂದಿಗೆ ಬಹಿರಂಗವಾಗಿ ಗಲಾಟೆ ಮಾಡಿಕೊಂಡಿದ್ದರು. ಇತ್ತೀಚೆಗೆ ಪೊಲೀಸ್‌‍ ಠಾಣೆಗೆ ನುಗ್ಗಿ ಧಮ್ಕಿ ಹಾಕುವ ಮೂಲಕ ತಮ ಪಕ್ಷದ ಕಾರ್ಯಕರ್ತ ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ಭಾಗಿಯಾಗಿರುವುದನ್ನು ಸಮರ್ಥಿಸಿಕೊಳ್ಳಲೆತ್ನಿಸಿದರು.

ಹಾಸನದ ಪೆನ್‌ಡ್ರೈವ್‌ ಪ್ರಕರಣ ಸರ್ಕಾರದ ಸಾಮರ್ಥ್ಯಕ್ಕೆ ಸವಾಲಾಗಿ ನಿಂತಿದೆ. ವಿದೇಶದಲ್ಲಿರುವ ಪ್ರಜ್ವಲ್‌ ರೇವಣ್ಣ ಅವರನ್ನು ನಿಯಮಾವಳಿಗಳ ನೆಪದಲ್ಲಿ ಉದ್ದೇಶಪೂರ್ವಕವಾಗಿಯೇ ರಕ್ಷಿಸಲಾಗುತ್ತಿದೆ ಎಂಬ ಭಾವನೆ ಸಾರ್ವತ್ರಿಕವಾಗಿ ಕೇಳಿಬರುತ್ತಿದೆ.

ಈ ಹಿಂದೆ ರಾಜ್ಯದ ಪೊಲೀಸರು ವಿದೇಶದಲ್ಲಿ ಅಡಗಿ ಕುಳಿತಿದ್ದ ಭೂಗತ ಪಾತಕಿಯನ್ನು ಬಂಧಿಸಿ ಕರೆತಂದಿರುವ ಉದಾಹರಣೆ ಇದೆ. ಅದೇ ಪೆನ್‌ಡ್ರೈವ್‌ ಪ್ರಕರಣದಲ್ಲಿ ಎಸ್‌‍ಐಟಿ ಅಧಿಕಾರಿಗಳು ವಿದೇಶಕ್ಕೆ ಹೋಗಲು ಅವಕಾಶ ಇಲ್ಲ ಎಂದು ಹೇಳುವ ಮೂಲಕ ಗೃಹಸಚಿವರು ಅಸಹಾಯಕತೆ ಹೊರಹಾಕಿದ್ದರು.

ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ್‌ ಮತ್ತು ಅಂಜಲಿ ಹಾಗೂ ಕೊಡಗಿನಲ್ಲಿ ಎಸ್‌‍ಎಸ್‌‍ಎಲ್‌ಸಿ ವಿದ್ಯಾರ್ಥಿನಿ ಮೀನಾ ಅವರ ಕೊಲೆ ಪ್ರಕರಣಗಳು ನಾಗರಿಕ ಸಮಾಜವನ್ನು ಬೆಚ್ಚಿಬೀಳುವಂತೆ ಮಾಡಿವೆ. ಆರೋಪಿಗಳಿಗೆ ಗರಿಷ್ಠ ಪ್ರಮಾಣದ ಶಿಕ್ಷೆಯಾಗಬೇಕು ಎಂಬ ಸಾರ್ವಜನಿಕರು ಮನೋ ಇಚ್ಛೆಗೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಇದರ ಜೊತೆಗೆ ಹಲವು ಆತಹತ್ಯೆ ಪ್ರಕರಣಗಳು ಕೂಡ ಚರ್ಚೆಗೆ ಗ್ರಾಸವಾಗಿವೆ.

ಮೈಸೂರಿನಲ್ಲಿ ನಟಿ ಹಾಗೂ ಕಾಂಗ್ರೆಸ್‌‍ ಕಾರ್ಯಕರ್ತೆ ವಿದ್ಯಾ ಅವರು ತಮ ಪತಿಯಿಂದಲೇ ಭೀಕರವಾಗಿ ಕೊಲೆಯಾದರು. ಹಿರಿಯ ವಕೀಲೆಯೊಬ್ಬರು ಆತಹತ್ಯೆ ಮಾಡಿಕೊಂಡರು. ಶಿವಮೊಗ್ಗ ಗಲಭೆ, ಕೋಲಾರದಲ್ಲಿ ತಲವಾರ್‌ ಪ್ರತಿಕೃತಿ ಪ್ರದರ್ಶನಗಳು ಗಲಿಬಿಲಿ ಸೃಷ್ಟಿಸಿದ್ದವು.

ಮಾದಕವ್ಯಸನ ಮುಕ್ತ ಕರ್ನಾಟಕ ನಿರ್ಮಿಸುವುದಾಗಿ ಸರ್ಕಾರ ಹೇಳುತ್ತಿದೆ. ಇದನ್ನು ಅಣಕಿಸುವಂತೆ ಬೆಂಗಳೂರಿನ ಎಲೆಕ್ಟ್ರಾನಿಕ್‌ಸಿಟಿಯಲ್ಲಿ ಹುಟ್ಟುಹಬ್ಬದ ಪಾರ್ಟಿ ಹೆಸರಿನಲ್ಲಿ ಸಿಂಥೆಟಿಕ್‌ ಡ್ರಗ್‌್ಸ ಬಳಸುವ ರೇವು ಪಾರ್ಟಿ ನಡೆದಿದೆ.

ನಿನ್ನೆ ದಾಬಸ್‌‍ಪೇಟೆಯಲ್ಲಿ ಟ್ಯಾಂಕರ್‌ ಚಾಲಕನೊಬ್ಬ ಕೆಎಸ್‌‍ಆರ್‌ಟಿಸಿ ಚಾಲಕನಿಗೆ ಚಾಕು ಹಾಕಿದ್ದಾನೆ. ರಾಜ್ಯದಲ್ಲಿ ಚಾಕು, ಚೂರಿಗಳನ್ನು ಇಟ್ಟುಕೊಳ್ಳುವುದು ಮತ್ತು ಬಳಕೆ ಮಾಡುವುದು ಅತ್ಯಂತ ಸುಲಭ ಎಂಬಂತಹ ವಾತಾವರಣ ನಿರ್ಮಾಣವಾಗಿದೆ.
ಬೆಳಗಾವಿಯಲ್ಲಿ ಕ್ರಿಕೆಟ್‌ ಗಲಾಟೆಯ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಸಂಘರ್ಷ ಶುರುವಾಗಿದ್ದು, ಕಲ್ಲು ತೂರಾಟ, ತಲವಾರುಗಳ ಪ್ರದರ್ಶನ ರಾಜಾರೋಷವಾಗಿ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್‌ ಹಾಗೂ ಸಿಸಿಟಿವಿ ದೃಶ್ಯಾವಳಿಗಳು ಸುಲಭವಾಗಿ ದೊರೆಯುವುದರಿಂದ ಗಲಭೆ ಪ್ರಕರಣಗಳು ವೈಭವೀಕರಣಗೊಳ್ಳುತ್ತಿವೆ. ಜನರಲ್ಲಿ ಆತಂಕ ಸೃಷ್ಟಿಸುತ್ತಿವೆ.

ಬೆಂಗಳೂರಿನ ಚಿಕ್ಕಪೇಟೆಯಲ್ಲಿ ನಡೆದ ಹಲ್ಲೆ ಪ್ರಕರಣ, ಗದಗ್‌ನಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ಸೇರಿದಂತೆ ಹಲವಾರು ಪ್ರಕರಣಗಳು ಜನಸಾಮಾನ್ಯರಲ್ಲಿ ಭಯದ ವಾತಾವರಣ ನಿರ್ಮಿಸಿವೆ.

ಎಲ್ಲದಕ್ಕೂ ಕಾನೂನು ನಿಯಮಾವಳಿಗಳ ಪಾಠ ಹೇಳುತ್ತಾ ಸರ್ಕಾರ ಕಾಲ ಕಳೆಯುತ್ತಿದೆ, ಪೊಲೀಸರು ಮಾನವ ಹಕ್ಕುಗಳ ಪಾಲನೆಯ ನೆಪದಲ್ಲಿ ಮೃದು ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಟೀಕೆಗಳು ಕೇಳಿಬಂದಿವೆ.

ಸರ್ಕಾರ ರಚನೆಯಾದ ಆರಂಭದಲ್ಲಿ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿಯ ಪೊಲೀಸ್‌‍ ಅಧಿಕಾರಿಗಳ ಸಭೆ ನಡೆಸಿ ಕೆಲವು ನಿರ್ದೇಶನಗಳನ್ನು ನೀಡಿದ್ದರು. ಅದರ ಬಳಿಕ ಕಾನೂನು ಸುವ್ಯವಸ್ಥೆ ಸದೃಢಗೊಳ್ಳುವ ಬದಲು ದುರ್ಬಲಗೊಳ್ಳುತ್ತಿವೆ ಎಂಬ ಆರೋಪಗಳಿವೆ.

ಪೊಲೀಸ್‌‍ ಅಧಿಕಾರಿಗಳ ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಗೃಹಸಚಿವರಿಗೇ ಮಾಹಿತಿ ಇಲ್ಲದೆ ಅನಪೇಕ್ಷಣೀಯ ವ್ಯಕ್ತಿಗಳು ಹಸ್ತಕ್ಷೇಪ ನಡೆಸುತ್ತಿದ್ದಾರೆ. ಹಣ ನೀಡಿ ಹುದ್ದೆಗೆ ಬಂದ ಪೊಲೀಸರು ಅದನ್ನು ಮರು ವಸೂಲಿ ಮಾಡಿಕೊಳ್ಳುವತ್ತ ಆದ್ಯತೆ ನೀಡುತ್ತಿದ್ದಾರೆಯೇ ಹೊರತು ಕಾನೂನು ಸುವ್ಯವಸ್ಥೆಯ ಪಾಲನೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ವಿಪಕ್ಷಗಳು ಟೀಕೆ ಮಾಡುತ್ತಿವೆ.

ಒಂದರ ಮೇಲೊಂದರಂತೆ ನಡೆಯುತ್ತಿರುವ ಪ್ರಕರಣಗಳು ವಿಪಕ್ಷಗಳ ಆರೋಪಕ್ಕೆ ಪುಷ್ಟಿ ನೀಡುವಂತಿದೆ. ಅಪರಾಧ ಕೃತ್ಯಗಳು ಈ ಮೊದಲೂ ಕೂಡ ನಡೆಯುತ್ತಿದ್ದವು. ಆದರೆ ಅವುಗಳು ದಾಖಲಾಗುತ್ತಿರಲಿಲ್ಲ. ನಮ ಸರ್ಕಾರ ಪ್ರತಿ ದಾಖಲಾತಿಯ ವ್ಯವಸ್ಥೆಯನ್ನು ಸರಳೀಕರಣಗೊಳಿಸಿದೆ. ಹೀಗಾಗಿ ಅಪರಾಧಗಳು ಹೆಚ್ಚಾದಂತೆ ಭಾಸವಾಗುತ್ತಿದೆ ಎಂದು ಸಚಿವರು ಸಮರ್ಥಿಸಿಕೊಳ್ಳುತ್ತಿದ್ದಾರೆ.

ತಾಂತ್ರಿಕವಾಗಿ ಯಾವುದೇ ಸಮರ್ಥನೆಗಳಿದ್ದರೂ ವಾಸ್ತವವಾಗಿ ಜನರಲ್ಲಿನ ಆತಂಕ ಮಾತ್ರ ಕಡಿಮೆಯಾಗುತ್ತಿಲ್ಲ. ಹೀಗಾಗಿ ಪರಮೇಶ್ವರ್‌ ಅವರಿಗೆ ಗೃಹಖಾತೆ ಬದಲಾಗಿ ಬೇರೆ ಜವಾಬ್ದಾರಿ ವಹಿಸಿ ಗೃಹಖಾತೆಗೆ ಖಡಕ್‌ ಸಚಿವರನ್ನು ನಿಯೋಜಿಸುವಂತೆ ಕಾಂಗ್ರೆಸ್‌‍ ಹೊರವಲಯದಲ್ಲಿ ಆಗ್ರಹಗಳು ಕೇಳಿಬರುತ್ತಿವೆ.

RELATED ARTICLES

Latest News