ಬೆಂಗಳೂರು, ಆ.30- ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಪಾಲನೆಯಲ್ಲಿ ಪೊಲೀಸ್ ವ್ಯವಸ್ಥೆ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದು, ಶೇ. 99ರಷ್ಟು ಕೊಲೆ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.
ವಿಶಿಷ್ಠ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ರಾಜಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕದ ಪೊಲೀಸರಿಗೆ ದೇಶ ದಲ್ಲೇ ಉತ್ತಮ ವ್ಯವಸ್ಥೆ ಎಂಬ ಕೀರ್ತಿ ಇದೆ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಮಾಜದಲ್ಲಿ ಶಾಂತಿ ಪಾಲನೆಯಲ್ಲಿ ಕಾನ್‌ಸ್ಟೇಬಲ್‌ಗಳಿಂದ ಡಿಜಿಪಿಯವರೆಗೂ ಎಲ್ಲರೂ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು ಎಂದರು.
ಇತ್ತೀಚೆಗೆ ನಡೆದ ಜಾಗತಿಕ ಬಂಡವಾಳ ಹೂಡಿಕೆ ದಾರರ ಸಮಾವೇಶದಲ್ಲಿ 10.5ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಗೆ ವಿವಿಧ ದೇಶಗಳ ಉದ್ಯಮಿಗಳು ಮುಂದೆ ಬಂದಿದ್ದಾರೆ. ಯಾವುದೇ ದೇಶ ಅಥವಾ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದರೆ ಮಾತ್ರ ಬಂಡವಾಳ ಹೂಡಿಕೆ ಆಸಕ್ತಿಗಳು ಬರುತ್ತವೆ. ಇದಕ್ಕೆ ಪೊಲೀಸ್ ವ್ಯವಸ್ಥೆಯೇ ಕಾರಣ ಎಂದರು.
ಇತ್ತೇಚಿಗೆ ಸಮಾಜದಲ್ಲಿ ಧಾರ್ಮಿಕವಾಗಿ, ರಾಜಕೀಯವಾಗಿ ಶಾಂತಿ ಕದಡುವ ಪ್ರಯತ್ನಗಳಾಗುತ್ತಿವೆ. ಪ್ರತಿ ಬಾರಿ ಅಂತಹ ಯತ್ನಗಳನ್ನು ಪೊಲೀಸರು ಯಶಸ್ವಿಯಾಗಿ ಹತ್ತಿಕ್ಕಿದ್ದಾರೆ. ಮುಖ್ಯಮಂತ್ರಿಯವರೇ ಗೃಹ ಇಲಾಖೆಯ ಬಗ್ಗೆ ಆಸಕ್ತಿವಹಿಸಿರುವುದರಿಂದ ಶೇ. 99 ರಷ್ಟು ಕೊಲೆ ಪ್ರಕರಣಗಳನ್ನು ಭೇದಿಸಲಾಗಿದೆ. ಸಾರ್ವಜನಿಕರ ನಿರೀಕ್ಷೆಗಳನ್ನು ಮೀರಿ ಪೊಲೀಸರು ಕೆಲಸ ಮಾಡಿದ್ದಾರೆ. ಟೀಕೆ ಟಿಪ್ಪಣಿಗಳನ್ನು ಸಕಾರಾತಕವಾಗಿ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.
ಸೈಬರ್ ಅಪರಾಧಗಳನ್ನು ಕಡೆಗಣಿಸಿದರೆ, ಕೋಟ್ಯಂತರ ಜನರಿಗೆ ನಷ್ಟವಾಗಲಿದೆ. ಈ ನಿಟ್ಟಿನಲ್ಲಿ ಯಾವುದೇ ಠಾಣೆಯಲ್ಲಾದರೂ ಸೈಬರ್ ಅಪರಾಧಗಳನ್ನು ದಾಖಲಿಸುವ ಅವಕಾಶಗಳನ್ನು ಕಲ್ಪಿಸಲಾಗಿದ್ದು, ನಂತರ ಅವುಗಳನ್ನು ಸಂಬಂಧಪಟ್ಟ ಠಾಣೆಗಳಿಗೆ ವರ್ಗಾವಣೆ ಮಾಡಬಹುದಾಗಿದೆ ಎಂದರು.
ಪೊಲೀಸರು ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ. ಅಪರಾಧದ ವಿರುದ್ಧ ಕಾರ್ಯಾಚರಣೆ ವೇಳೆ ಆರೋಪಿಗಳು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂದು ಗೊತ್ತಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಪ್ರಾಣಹಾನಿಯಾಗುವ ಸಾಧ್ಯತೆಯೂ ಇದೆ. ಕರ್ತವ್ಯ ನಿರ್ವಹಣೆಯಲ್ಲಿ ಜೀವ ಕಳೆದುಕೊಂಡ ಕುಟುಂಬಗಳಿಗೆ ಸಾಂತ್ವಾನ ಹೇಳುವುದಾಗಿ ತಿಳಿಸಿದರು.
ಇತ್ತೀಚೆಗೆ ಮೈಸೂರು ರಸ್ತೆಯಲ್ಲಿ ಸಂಚಾರಿ ಠಾಣೆ ಪೇದೆಯೊಬ್ಬರು ಕೆಲಸ ನಿರ್ವಹಿಸುವಾಗ ತುಂಬು ಗರ್ಭಿಣಿಯೊಬ್ಬರು ರಸ್ತೆ ದಾಟಲು ಬಂದಿದ್ದರು. ಹೆರಿಗೆ ನೋವು ಆರಂಭವಾಯಿತು. ಹತ್ತಿರದಲ್ಲಿ ಆಸ್ಪತ್ರೆ ಇಲ್ಲದಿದ್ದಾಗ ಆಕೆಯನ್ನು ಪಕ್ಕದ ಮನೆಗೆ ಕರೆದುಕೊಂಡು ಹೋಗಿ ಹೆರಿಗೆ ಮಾಡಿಸಿ ತಾಯಿ-ಮಗುವನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ ಉದಾಹರಣೆ ಇದೆ. ಈ ರೀತಿಯ ಅನೇಕ ಘಟನೆಗಳು ನಮ ಕಣ್ಣ ಮುಂದಿವೆ ಎಂದರು.
ಪ್ರಶಸ್ತಿ ಪುರಸ್ಕೃತರು ಮುಂದಿನ ಪೀಳಿಗೆಗೆ ಆದರ್ಶ ಪ್ರಾಯರು. ಇದು ಕೇವಲ ಪದಕ ಅಲ್ಲ. ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಪ್ರಾಮಾಣಿಕತೆ, ಸಮಾಜ ಸೇವೆಗೆ ಸಂದ ಗೌರವ ಎಂದು ಕೊಂಡಾಡಿದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪದಕಗಳನ್ನು ಪ್ರದಾನ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಪೊಲೀಸ್ ಮಹಾನಿರ್ದೇಶಕ ಎಂ.ಎ. ಸಲೀಮ್, ಗೃಹ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ತುಷಾರ್ ಗಿರಿನಾಥ್ ಮತ್ತಿತರರು ಉಪಸ್ಥಿತರಿದ್ದರು.
- ನೆರೆ ರಾಜ್ಯಗಳ ದರಗಳೊಂದಿಗೆ ಸಮೀಕರಿಸಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪರಿಷ್ಕರಣೆ
- ರಾಜ್ಯದಲ್ಲಿ ಶೇ.99ರಷ್ಟು ಕೊಲೆ ಪ್ರಕರಣಗಳನ್ನು ಪೊಲೀಸರು ಬೇಧಿಸಿದ್ದಾರೆ : ಪರಮೇಶ್ವರ್
- ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿಯಲ್ಲಿ 5 ಪಾಲಿಕೆಗಳಿಗೆ 10 ವಲಯ ಕಚೇರಿ
- ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಅಶೋಕ್ ವಾಗ್ದಾಳಿ
- ಗಣೇಶ ಮೂರ್ತಿ ಮೆರವಣಿಗೆ ವೇಳೆ ಪಟಾಕಿ ಸ್ಫೋಟ, ಬಾಲಕ ದುರ್ಮರಣ, ಹಲವರಿಗೆ ಗಾಯ