Tuesday, April 29, 2025
Homeರಾಜ್ಯಪೊಲೀಸ್ ಅಧಿಕಾರಿಗೆ ವೇದಿಕೆ ಮೇಲೆ ಸಿಎಂ ಹೊಡೆಯಲು ಮುಂದಾಗಿದ್ದರ ಕುರಿತು ಗೃಹ ಸಚಿವರಿಗೆ ಮಾಹಿತಿಯೇ ಇಲ್ವಂತೆ

ಪೊಲೀಸ್ ಅಧಿಕಾರಿಗೆ ವೇದಿಕೆ ಮೇಲೆ ಸಿಎಂ ಹೊಡೆಯಲು ಮುಂದಾಗಿದ್ದರ ಕುರಿತು ಗೃಹ ಸಚಿವರಿಗೆ ಮಾಹಿತಿಯೇ ಇಲ್ವಂತೆ

Home Minister has no information about the CM try to beat Police officer

ಬೆಂಗಳೂರು,ಏ.29- ಭದ್ರತಾ ವೈಫಲ್ಯದ ಕಾರಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಬೆಳಗಾವಿ ಜಿಲ್ಲೆಯ ಹೆಚ್ಚುವರಿ ಪೊಲೀಸ್‌‍ ಮುಖ್ಯಾಧಿಕಾರಿ ಮೇಲೆ ಹಲ್ಲೆಗೆ ಮುಂದಾಗಿದ್ದ ಪ್ರಕರಣದ ಬಗ್ಗೆ ತಮಗೆ ಹೆಚ್ಚಿನ ಮಾಹಿತಿ ಇಲ್ಲ. ಮುಖ್ಯಮಂತ್ರಿಯವರು ಏಕೆ ಅಷ್ಟೊಂದು ಉದ್ವೇಗಕ್ಕೆ ಒಳಗಾದರು ಎಂಬುದು ಗೊತ್ತಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದಾರು ಮಂದಿ ಬಿಜೆಪಿ ಮಹಿಳಾಮೋರ್ಚಾದ ಕಾರ್ಯಕರ್ತರು ಕಾಂಗ್ರೆಸ್‌‍ನ ಶಾಲು ಹಾಕಿಕೊಂಡು ಒಳಗೆ ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುವಾಗ ಅಡ್ಡಿಪಡಿಸಲು ಯತ್ನಿಸಿದ್ದಾರೆ. ಇದರಲ್ಲಿ ಭದ್ರತಾ ಲೋಪವಾಗಿದೆಯೇ ಎಂಬುದನ್ನು ಮಾಹಿತಿ ನೀಡಲು ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌‍ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ ಎಂದರು.

ಕಾಂಗ್ರೆಸ್‌‍ ಶಾಲು ಹಾಕಿಕೊಂಡು ನಮ ಪಕ್ಷದ ಕಾರ್ಯಕ್ರಮಕ್ಕೆ ಬಂದು ಅಡ್ಡಿಪಡಿಸಿ ನಂತರ ಭದ್ರತಾ ವೈಫಲ್ಯ ಎಂದು ಬಿಜೆಪಿಯವರು ಟೀಕೆ ಮಾಡುತ್ತಿದ್ದಾರೆ. ಅವರು ಬಿಜೆಪಿಯ ಶಾಲು ಹಾಕಿಕೊಂಡು ಬಂದಿದ್ದರೆ ಅದು ಬೇರೆಯ ಮಾತು. ಕಾಂಗ್ರೆಸ್‌‍ ಶಾಲು ಹಾಕಿಕೊಳ್ಳಲು ಅವರಿಗೆ ಯಾವ ನೈತಿಕತೆ ಇದೆಯೋ? ಗೊತ್ತಿಲ್ಲ ಎಂದು ತಿಳಿಸಿದರು.

ಯುದ್ಧ ಬೇಡ ಎಂದು ಹೇಳಿದ್ದಕ್ಕೆ ಸಕಾರಣಗಳನ್ನು ಮುಖ್ಯಮಂತ್ರಿ ನೀಡಿದ್ದಾರೆ. ಅಗತ್ಯ ಸಂದರ್ಭ ಬಿದ್ದರೆ ಯುದ್ಧ ಮಾಡಲು ಯಾವುದೇ ಆಕ್ಷೇಪ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಹೀಗಾಗಿ ಪದೇಪದೇ ಅದಕ್ಕೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದರು.

ಪಹಲ್ಗಾಮ್‌ ವಿಚಾರದಲ್ಲಿ ಕಾಂಗ್ರೆಸ್‌‍ ನಾಯಕರು ಯಾವುದೇ ಮೃದು ಧೋರಣೆ ಹೊಂದಿಲ್ಲ. ದೇಶದ ಭದ್ರತೆ ದೃಷ್ಟಿಯಿಂದ ಕಾಂಗ್ರೆಸ್‌‍ನಷ್ಟು ತ್ಯಾಗ ಬಲಿದಾನಗಳನ್ನು ಬೇರೆ ಇನ್ನ್ಯಾರೂ ಮಾಡಲು ಸಾಧ್ಯವಿಲ್ಲ. ಬೇರೆಯವರಿಂದ ನಾವು ಪಾಠ ಹೇಳಿಸಿಕೊಳ್ಳಬೇಕಿಲ್ಲ ಎಂದರು. ರಾಷ್ಟ್ರೀಯ ಭದ್ರತೆಗೆ ಎಲ್ಲರೂ ಜವಾಬ್ದಾರಿ. ಆಡಳಿತ ಪಕ್ಷದವರು ನಿರ್ಣಯ ಕೈಗೊಳ್ಳುವ ಸ್ಥಾನದಲ್ಲಿದ್ದು, ಅವರ ಜವಾಬ್ದಾರಿ ಹೆಚ್ಚಿರುತ್ತದೆ. ಕಾಂಗ್ರೆಸ್‌‍ ಸರ್ವಪಕ್ಷ ಸಭೆಯಲ್ಲಿ ತನ್ನ ನಿಲುವನ್ನು ಸ್ಪಷ್ಟವಾಗಿ ತಿಳಿಸಿದೆ ಎಂದು ಹೇಳಿದರು.

ಪಹಲ್ಗಾಮ್‌ ದಾಳಿಯಲ್ಲಿ ಧರ್ಮದ ವಿಚಾರ ಕುರಿತು ಹೆಚ್ಚು ವ್ಯಾಖ್ಯಾನ ಮಾಡುವುದು, ಬಾಯಿಗೆ ಬಂದಂತೆ ಮಾತನಾಡುವುದು ಸೂಕ್ತವಲ್ಲ. ಎಲ್ಲರೂ ಇಂತಹ ವಿಚಾರಗಳಲ್ಲಿ ಎಚ್ಚರಿಕೆಯಿಂದ ಮಾತನಾಡಬೇಕಿದೆ. ಪಕ್ಷಾತೀತವಾಗಿ ಭಯೋತ್ಪಾದಕ ಘಟನೆಗಳನ್ನು ನೋಡಬೇಕಿದೆ. ರಾಜಕೀಯ ಮರೆತು ಒಟ್ಟಾಗಿ ನಾವು ಈ ಪಿಡುಗಿನ ವಿರುದ್ಧ ನಿಲ್ಲಬೇಕು ಎಂದು ಆಗ್ರಹಿಸಿದರು. ಪಾಕಿಸ್ತಾನದ ಪ್ರಜೆಗಳು ದೇಶದಲ್ಲಿ 400 ಜನ ಇದ್ದರು. ಅವರನ್ನು ವಾಪಸ್‌‍ ಕಳುಹಿಸಲಾಗಿದೆ. ಲಾಂಗ್‌ಟರ್ಮ್‌ ವೀಸಾ ಹಾಗೂ ಇಲ್ಲಿಯವರನ್ನು ಮದುವೆಯಾಗಿ ವಾಸಿಸುವವರಿಗೆ ಕೇಂದ್ರ ಸರ್ಕಾರ ವಿನಾಯಿತಿ ನೀಡಿದೆ ಎಂದರು.

ಭದ್ರತೆಯ ದೃಷ್ಟಿಯಿಂದ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳಿಗೆ ಕಾಂಗ್ರೆಸ್‌‍ ಪಕ್ಷ ಬೆಂಬಲ ವ್ಯಕ್ತಪಡಿಸಿದೆ ಎಂದು ಪುನರುಚ್ಚರಿಸಿದರು.ಸಿಡಿ ಪ್ರಕರಣದಲ್ಲಿ ಸಚಿವ ಕೆ.ಎನ್‌.ರಾಜಣ್ಣ ತಮ ಹೇಳಿಕೆಯನ್ನು ದಾಖಲಿಸಿದ್ದಾರೆ. ತನಿಖೆಯ ಪೂರ್ಣ ವರದಿ ಬಂದ ನಂತರ ಅದರ ಬಗ್ಗೆ ನಾವು ಪ್ರತಿಕ್ರಿಯಿಸುವುದು ಸೂಕ್ತ ಎಂದರು.

RELATED ARTICLES

Latest News