Saturday, January 18, 2025
Homeರಾಜ್ಯಚಿಕ್ಕಮಗಳೂರು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಧಾರ್ಮಿಕ ಮುಖಂಡರೊಂದಿಗೆ ಗೃಹ ಸಚಿವರ ಸಭೆ

ಚಿಕ್ಕಮಗಳೂರು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಧಾರ್ಮಿಕ ಮುಖಂಡರೊಂದಿಗೆ ಗೃಹ ಸಚಿವರ ಸಭೆ

Home Minister holds meeting with Chikkamagaluru district representatives and religious leaders

ಬೆಂಗಳೂರು, ಜ.17- ಚಿಕ್ಕಮಗಳೂರು ಇನಾಂ ದತ್ತಾತ್ರೇಯ ಪೀಠ ಬಾಬಾ ಬುಡನ್ಗಿರಿ ದರ್ಗಾ ಸಂಬಂಧಿಸಿದಂತೆ ಸರ್ವೋಚ್ಚನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಎಸ್ಎಲ್ಪಿ ಕುರಿತು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಚಿಕ್ಕಮಗಳೂರು ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಹಾಗೂ ಧಾರ್ಮಿಕ ಮುಖಂಡರುಗಳೊಂದಿಗೆ ವಿಧಾನಸೌಧದ ಸಮೇಳನ ಸಭಾಂಗಣದಲ್ಲಿ ಸಮಾಲೋಚನೆ ಸಭೆ ನಡೆಸಿದರು.

ಸಭೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಮುಖಂಡರುಗಳ ಸಲಹೆಗಳನ್ನು ಪಡೆದು ಮಾತನಾಡಿದ ಗೃಹ ಸಚಿವರು, ದಾಖಲೆಗಳು ಶಾಶ್ವತವಾಗಿ ಇರುವಂತಹವು. ಈ ವಿಚಾರದಲ್ಲಿ ಕಾನೂನಿನ ಸಲಹೆ ಪಡೆಯಬೇಕಾಗುತ್ತದೆ. ಕರ್ನಾಟಕಕ್ಕೆ ದೇಶದಲ್ಲಿ ಒಳ್ಳೆಯ ಹೆಸರಿದೆ.

ಈ ಸಮಸ್ಯೆಯನ್ನು ಹೆಚ್ಚು ದಿನ ಮುಂದಕ್ಕೆ ತೆಗೆದುಕೊಂಡು ಹೋಗುವುದಿಲ್ಲ. ಶಾಂತಿ, ಸಾಮರಸ್ಯ ನೆಲೆಸುವಂತೆ ಮಾಡಬೇಕು. ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕು ಎಂದು ಸರ್ಕಾರ ತೀರ್ಮಾನ ಮಾಡಿದೆ ಎಂದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂದ್ರದ್ರೋಣ ಪರ್ವತದಲ್ಲಿರುವ ದತ್ತಾತ್ರೇಯ ಬಾಬಾ ಬುಡನ್ಗಿರಿ ದರ್ಗಾ ಕರ್ನಾಟಕದಲ್ಲಿ ಭಾವೈಕ್ಯತೋರಿಸುವ ಸ್ಥಳ. 1975ರವರೆಗೆ ಒಂದು ರೀತಿಯ ಕಾರ್ಯಕ್ರಮಗಳು ನಡೆದರೆ, ತದನಂತರದ ದಿನಗಳಲ್ಲಿ ಅನೇಕ ಗೊಂದಲಗಳನ್ನು ಕಂಡಿದ್ದೇವೆ ಎಂದು ಹೇಳಿದರು.

ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಪ್ರಯತ್ನಗಳನ್ನು ಮಾಡಿದೆ. ಹಿಂದು, ಮುಸ್ಲಿಂ ಸಮುದಾಯದವರು ಕೋರ್ಟ್ ಮೊರೆ ಹೋಗಿರುವುದನ್ನು ನೋಡಿದ್ದೇವೆ. ಸಮಿತಿ, ಸಚಿವ ಸಂಪುಟದ ಉಪ ಸಮಿತಿಗಳನ್ನು ರಚಿಸಿ ದಾಖಲೆಗಳನ್ನು ಪರಿಶೀಲಿಸಿ ಕೋರ್ಟ್ಗೆ ತಿಳಿಸಲಾಗಿದ್ದು, ತೀರ್ಪುಗಳು ಬಂದಿವೆ. ಕೆಲವರು ಸರ್ವೋಚ್ಚನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ಅವರು ತಿಳಿಸಿದರು.

ನಮ ಸರ್ಕಾರವು ದತ್ತಾತ್ರೇಯ ಬಾಬಾ ಬುಡನ್ಗಿರಿ ದರ್ಗಾ ಗೊಂದಲವನ್ನು ಬಗೆಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟ ಉಪ ಸಮಿತಿ ರಚಿಸಿದ್ದಾರೆ. ಈವರೆಗೆ ನಾಲ್ಕು ಸಭೆಗಳನ್ನು ನಡೆಸಿ, ಅನೇಕ ದಾಖಲೆಗಳನ್ನು ಪರಿಶೀಲಿಸಿ ದಾವೆಗೆ ಬೇಕಾದ ಮಾಹಿತಿಗಳನ್ನು ಕೋರ್ಟ್ಗೆ ನೀಡಲಾಗಿದೆ ಎಂದರು.

ಮಾರ್ಚ್ 24ರೊಳಗೆ ಸರ್ಕಾರದ ಅಭಿಪ್ರಾಯ ತಿಳಿಸುವಂತೆ ಜನವರಿ 7ರಂದು ಸುಪ್ರಿಂ ಕೋರ್ಟ್ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ, ಎಲ್ಲರ ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆದುಕೊಳ್ಳಲಾಗಿದೆ. ಮುಂದಿನ ವಾರ ಸಚಿವ ಸಂಪುಟ ಉಪಸಮಿತಿ ಸಭೆ ಕರೆದು ಜನಪ್ರತಿನಿಧಿಗಳು ಹಾಗೂ ಧಾರ್ಮಿಕ ಮುಖಂಡರು ತಿಳಿಸಿರುವ ಸಲಹೆಗಳನ್ನು ಮತ್ತು ದಾಖಲೆಗಳನ್ನು ಪರಿಶೀಲಿಸಿ ಕೋರ್ಟ್ಗೆ ತಿಳಿಸುತ್ತೇವೆ. ಅದಾದ ನಂತರ ಕೋರ್ಟ್ನಿಂದ ಬರುವ ತೀರ್ಮಾನದಂತೆ ನಡೆದುಕೊಳ್ಳೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಇಂಧನ ಸಚಿವ ಕೆ.ಜೆ.ಜಾರ್ಜ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹದ್ ಖಾನ್, ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ, ಶಾಸಕರಾದ ಹೆಚ್.ಡಿ.ತಮಯ್ಯ, ನಯನಾ ಮೋಟಮ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹಾಗೂ ಧಾರ್ಮಿಕ ಮುಖಂಡರು, ಚಿಕ್ಕಮಗಳೂರು ಜಿಲ್ಲೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

RELATED ARTICLES

Latest News