ಬೆಂಗಳೂರು,ಜೂ.18– ನಟ ದರ್ಶನ್ ಜೊತೆ ಸಂಪರ್ಕದಲ್ಲಿದ್ದವರೆಲ್ಲಾ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಲಭ್ಯವಿರುವ ಸಾಕ್ಷಿಗಳ ಆಧಾರದ ಮೇಲೆ ತನಿಖೆ ಮುಂದುವರೆಯಲಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರ್ಶನ್ ನಟರಾಗಿರುವುದರಿಂದಾಗಿ ಬಹಳಷ್ಟು ಮಂದಿ ಒಂದಲ್ಲಾ ಒಂದು ರೀತಿ ಸಂಪರ್ಕದಲ್ಲಿರುತ್ತಾರೆ. ಅಂದ ಮಾತ್ರಕ್ಕೆ ಕೊಲೆಗೆ ಸಂಪರ್ಕವಿದೆ, ಭಾಗಿಯಾಗಿದ್ದಾರೆ ಎಂದು ಹೇಳಲು ಬರುವುದಿಲ್ಲ. ತನಿಖೆಯ ಹಂತದಲ್ಲಿ ದೊರೆಯುವ ಸಾಕ್ಷ್ಯಗಳನ್ನು ಮುಂದಿಟ್ಟುಕೊಂಡು ವಿಚಾರಣೆ ಮುಂದುವರೆಸುತ್ತಾರೆ. ಅಗತ್ಯವಾದರೆ ಸಂಪರ್ಕದಲ್ಲಿದ್ದವರನ್ನು ವಿಚಾರಣೆಗೊಳಪಡಿಸಲಾಗುವುದು ಎಂದು ಹೇಳಿದರು.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಸಂಬಂಧಪಟ್ಟಂತೆ ಪ್ರತಿಭಟನೆ ನಡೆಸುವುದು ಪ್ರತಿಪಕ್ಷ ಬಿಜೆಪಿಯವರ ಹಕ್ಕು. ಆಡಳಿತ ನಡೆಸುವುದು ನಮ ಹಕ್ಕು. ನಮಗೂ ಅವರಿಗೂ ಇಷ್ಟೇ ವ್ಯತ್ಯಾಸ ಎಂದರು.
ಪೆಟ್ರೋಲ್, ಡೀಸೆಲ್ ಮಾರಾಟ ತೆರಿಗೆ ಹೆಚ್ಚಳದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿಯವರು ಇತ್ತೀಚೆಗೆ ಪ್ರತಿಯೊಂದರಲ್ಲೂ ರಾಜಕಾರಣ ಮಾಡುತ್ತಾರೆ. ದೇಶದಲ್ಲಿ 14 ಬಾರಿ ಪೆಟ್ರೋಲ್, ಡೀಸೆಲ್ ದರವನ್ನು ಹೆಚ್ಚಿಸಿದರೂ ಅದನ್ನು ಮರೆತು ಹೋದಂತಿದೆ. ಕಚ್ಚಾತೈಲದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಡಿಮೆಯಿದ್ದಾಗಲೂ ಬೆಲೆ ಹೆಚ್ಚಿಸಿ ಸಂಗ್ರಹಿಸಿದ ಹಣ ಎಲ್ಲಿ ಹೋಯಿತು ಎಂದು ಹೇಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಿಎಸ್‌ಐ ನೇಮಕಾತಿ ವಿಷಯವಾಗಿ ಇನ್ನೆರೆಡು ವಾರಗಳಲ್ಲಿ ಅಂತಿಮ ಘಟ್ಟ ತಲುಪಲಾಗುವುದು, ಈಗಾಗಲೇ ಎರಡು-ಮೂರು ಸಭೆಗಳನ್ನು ನಡೆಸಲಾಗಿದೆ. ಕೆಲವು ತಾಂತ್ರಿಕ ಸಮಸ್ಯೆಗಳನ್ನು ಪ್ರಸ್ತಾಪಿಸಲಾಗಿದ್ದು, ಅದನ್ನು ಬಗೆಹರಿಸಲಾಗುವುದು ಎಂದು ಹೇಳಿದರು.
ನಟ ದರ್ಶನ್ ಮತ್ತು ಅವರ ಗ್ಯಾಂಗ್‌ನಿಂದ ಹತ್ಯೆಯಾಗಿದ್ದಾರೆ ಎಂದು ಹೇಳಲಾದ ಚಿತ್ರದುರ್ಗದ ರೇಣುಕಾಸ್ವಾಮಿ ಅವರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳುತ್ತೇನೆ ಹಾಗೂ ಕಲುಷಿತ ನೀರಿನ ಪ್ರಕರಣದಿಂದ ಸಂಕಷ್ಟಕ್ಕೊಳಗಾದ ಮಧುಗಿರಿ ತಾಲ್ಲೂಕಿನ ಚಿನ್ನೇನಹಳ್ಳಿ ಗ್ರಾಮಕ್ಕೂ ಭೇಟಿ ನೀಡುತ್ತೇನೆ ಎಂದು ತಿಳಿಸಿದರು.
ರಾಹುಲ್‌ಗಾಂಧಿ ವಯನಾಡು ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟು ರಾಯ್‌ಬರೇಲಿ ಕ್ಷೇತ್ರವನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ. ಆ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಭಾರತ್ ಜೋಡೊದಂತಹ ಪಾದಯಾತ್ರೆ ನಡೆಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಜೊತೆ ಪಕ್ಷವನ್ನು ಕಟ್ಟಿ ಹೊಸತನವನ್ನು ತಂದುಕೊಟ್ಟಿದ್ದಾರೆ.
ಈಗ ಅವರು ಲೋಕಸಭೆಯ ವಿರೋಧಪಕ್ಷದ ನಾಯಕರಾಗಬೇಕು ಎಂಬುದು ನಮೆಲ್ಲರ ನಿರೀಕ್ಷೆ. ಇದರಿಂದ ಪಕ್ಷಕ್ಕೆ ಮತ್ತಷ್ಟು ಬಲ ಬರಲಿದೆ ಎಂದು ಹೇಳಿದರು.ರಾಹುಲ್‌ಗಾಂಧಿಯವರು ವಿರೋಧಪಕ್ಷದ ನಾಯಕರಾಗಿ ಅವರ ವ್ಯಕ್ತಿತ್ವಕ್ಕೆ ಮತ್ತಷ್ಟು ಶಕ್ತಿ ಬರಲಿದೆ ಎಂದರು.