ಬೆಂಗಳೂರು,ಏ.8- ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಾವು ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಿ ವ್ಯಾಖ್ಯಾನಿಸಲಾಗುತ್ತಿದೆ. ನಮ ಸರ್ಕಾರ ಮಹಿಳೆಯರ ರಕ್ಷಣೆಗೆ ಬದ್ಧವಾಗಿದ್ದು, ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಕ್ಷಮೆ ಕೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯಕ್ಕಾಗಿ ಪ್ರತಿಭಟನೆ ಮಾಡುವ ಬಿಜೆಪಿಯವರ ಬಗ್ಗೆ ನಾನು ಹೇಳುತ್ತಿಲ್ಲ. ಮಹಿಳೆಯರು ಮತ್ತು ಸಹೋದರಿಯರ ಬಳಿ ವಿಷಾದ ವ್ಯಕ್ತಪಡಿಸುತ್ತೇನೆ. ಬೆಂಗಳೂರಿನಂತಹ ದೊಡ್ಡ ಪಟ್ಟಣದಲ್ಲಿ ಸಣ್ಣಪುಟ್ಟ ಪ್ರಕರಣಗಳು ನಡೆಯುತ್ತವೆ ಎಂದು ಹೇಳಿದ್ದನ್ನು ಬೇರೆ ರೀತಿ ಅರ್ಥೈಸಿ ಹಲವು ವೇದಿಕೆಗಳಲ್ಲಿ ನನ್ನ ವಿರುದ್ಧ ಟೀಕೆಗಳು ಕೇಳಿಬರುತ್ತಿವೆ. ನಾವು ಮಹಿಳೆಯರ ಪರವಾಗಿರುವವರು. ನಿರ್ಭಯ ಯೋಜನೆಯಡಿ ದೇಶದಲ್ಲೇ ಅತೀ ಹೆಚ್ಚು ಹಣ ಸದ್ಬಳಕೆ ಮಾಡಿದವರು ನಾವು. ಈ ಬಗ್ಗೆ ಪ್ರತ್ಯೇಕ ವಿವರಣೆ ನೀಡುತ್ತೇನೆ ಎಂದರು.
ನನ್ನ ಬಗ್ಗೆ ಅನಗತ್ಯವಾದ ಟೀಕೆಗಳು ಕೇಳಿಬರುತ್ತವೆ. ಒಂದು ಹೇಳಿಕೆಯನ್ನು ಮುಂದಿಟ್ಟುಕೊಂಡು ನಾವು ಮಾಡಿದ ಕೆಲಸಗಳನ್ನು ಅಲ್ಲಗಳೆಯುವುದು ಸರಿಯಲ್ಲ. ಪ್ರತಿದಿನ ಮಹಿಳೆಯರ ರಕ್ಷಣೆಗಾಗಿಯೇ ಆದ್ಯತೆ ನೀಡುತ್ತೇವೆ. ಪೊಲೀಸ್ ಆಯುಕ್ತರಿಗೆ ಮತ್ತು ಅಧಿಕಾರಿಗಳಿಗೆ ದಿನನಿತ್ಯ ಸೂಚನೆಗಳನ್ನು ನೀಡುತ್ತಲೇ ಇರುತ್ತೇವೆ. ಒಂದು ವೇಳೆ ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದರು.
ಜಿಲ್ಲಾವಾರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅತ್ಯಾಚಾರ, ಫೋಕ್ಸೋ ಪ್ರಕರಣವನ್ನು ಗಮನವಿಟ್ಟು ಪರಿಶೀಲಿಸುತ್ತೇನೆ. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡುತ್ತೇನೆ. ಹೇಳಿಕೆಯಲ್ಲಿ ಕೆಲಸ ಮಾಡುವುದಿಲ್ಲ. ಕ್ರಮವನ್ನು ಮುಲಾಜಿಲ್ಲದೆ ತೆಗೆದುಕೊಳ್ಳುವುದಾಗಿ ಹೇಳಿದರು.ಬಿಜೆಪಿ ಅಧಿಕಾರದಲ್ಲಿದ್ದಾಗ ಮಹಿಳೆಯರ ದೌರ್ಜನ್ಯ ಪ್ರಕರಣಗಳು ಎಷ್ಟು ನಡೆದಿವೆ ಎಂಬ ಅಂಕಿ ಅಂಶಗಳನ್ನು ಈಗಾಗಲೇ ನಾನು ಸದನದಲ್ಲಿ ನೀಡಿದ್ದೇನೆ. ನಮ ಅವಧಿಯಲ್ಲಿ ಏನೂ ಆಗಿಯೇ ಇರಲಿಲ್ಲ ಎಂದು ಬಿಜೆಪಿಯವರು ಹೇಳಿಕೊಂಡರೆ ಅದು ಹಾಸ್ಯಾಸ್ಪದ ಎಂದರು. ಬೆಲೆ ಏರಿಕೆ ಬಗ್ಗೆ ಬಿಜೆಪಿಯವರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಮುಂದಾಗಿದ್ದರು.
ಅದಕ್ಕೆ ಜನಾಕ್ರೋಶ ರ್ಯಾಲಿ ಎಂದು ಹೆಸರಿಟ್ಟಿದ್ದರು. ಅದು ಜನರ ಆಕ್ರೋಶವಲ್ಲ. ಬಿಜೆಪಿಯವರ ಕಾರ್ಯಕ್ರಮ. ಈಗ ಕೇಂದ್ರ ಸರ್ಕಾರವೇ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ಮೇಲೆ ಅಬಕಾರಿ ಸುಂಕವನ್ನು ಹೆಚ್ಚಿಸಿದೆ. ಈಗ ಬಿಜೆಪಿಯವರು ಯಾವ ರೀತಿ ಉತ್ತರ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಪ್ರತಿಕ್ರಿಯಿಸಿದರು.ಗುಜರಾತ್‌ನ ಅಹಮದಾಬಾದ್‌ನಲ್ಲಿ ಎಐಸಿಸಿಯ ಕಾರ್ಯಕಾರಿ ಸಮಿತಿ ಸಭೆ ನಡೆಯುತ್ತಿದೆ. ಅಲ್ಲಿ ಪಕ್ಷ ಸಂಘಟನೆಗೆ ಸಂಬಂಧಪಟ್ಟಂತೆ ಯಾವ ರೀತಿಯ ಮಾರ್ಗದರ್ಶನ ನೀಡುತ್ತಾರೆ ಎಂಬುದನ್ನು ಕಾದು ನೋಡುತ್ತೇವೆ ಎಂದರು.ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕಾಗಿ ನೆಲಮಂಗಲ ಅಥವಾ ಬಿಡದಿಯನ್ನು ಗುರುತಿಸಲಾಗಿತ್ತು. ತಾಂತ್ರಿಕ ಸಮಿತಿ ನೀಡುವ ಶಿಫಾರಸ್ಸನ್ನು ನಿರೀಕ್ಷಿಸುತ್ತಿದ್ದೇವೆ.
ಈ ಹಿಂದೆ ಬಿಡದಿಯ ಹೆಸರು ಪ್ರಸ್ತಾಪವಾದಾಗ ತಾಂತ್ರಿಕವಾಗಿ ಕಾರ್ಯಸಾಧುವಲ್ಲ ಎಂದು ಆಗಿನ ಸಮಿತಿ ವರದಿ ನೀಡಿತ್ತು. ಆ ಕಾರಣಕ್ಕಾಗಿಯೇ ದೇವನಹಳ್ಳಿಯಲ್ಲಿ ವಿಮಾನನಿಲ್ದಾಣ ನಿರ್ಮಾಣವಾಗಿದೆ. ಈಗ ಯಾವ ರೀತಿಯ ವರದಿ ನೀಡುತ್ತದೆ ಎಂದು ನೋಡುತ್ತೇನೆ. ಏರ್‌ವೆಲಾಸಿಟಿ, ಜಾಗ, ಬೆಟ್ಟ ಗುಡ್ಡಗಳು ಸೇರಿದಂತೆ ಎಲ್ಲ ಅಂಶವನ್ನೂ ಪರಿಗಣಿಸಲಾಗುತ್ತದೆ. ನನಗೆ ಹೆಚ್ಚಿನ ಮಾಹಿತಿ ಇಲ್ಲ. ತಾಂತ್ರಿಕ ವರದಿಯನ್ನು ಪ್ರಭಾವ ಬೀರಿ ಬದಲಾಯಿಸಲೂ ಸಾಧ್ಯವಿಲ್ಲ ಎಂದರು.
- ಧರ್ಮ ಒಡೆಯುವ ಕೆಲಸ ಮಾಡಬೇಡಿ ಬಿವೈವಿ ಎಚ್ಚರಿಕೆ
- ಸುಪ್ರೀಂ ಕೋರ್ಟ್ ಮಾರ್ಗಸೂಚಿ ತಪ್ಪದೇ ಪಾಲನೆ – ಶಶಿಕುಮಾರ್
- ಎರಡನೇ ದಿನಕ್ಕೆ ಕಾಲಿಟ್ಟ ಲಾರಿ ಮುಷ್ಕರ
- ಬಿಗಿ ಕ್ರಮಗಳ ನಡುವೆ ಸಿಇಟಿ ಆರಂಭ
- ಹಿಂದುಳಿದ ವರ್ಗಗಳ ಆಯೋಗದ ವರದಿಗೆ ಸಂಪೂರ್ಣ ಅನುಮತಿಯಿದೆ : ದಿನೇಶ್ ಗುಂಡುರಾವ್