Friday, October 3, 2025
Homeರಾಜ್ಯಧರ್ಮಸ್ಥಳ ಪ್ರಕರಣ ಕುರಿತು ಗೃಹ ಸಚಿವ ಪರಮೇಶ್ವರ್‌-ಪ್ರಣಬ್‌ ಮೊಹಾಂತಿ ಚರ್ಚೆ

ಧರ್ಮಸ್ಥಳ ಪ್ರಕರಣ ಕುರಿತು ಗೃಹ ಸಚಿವ ಪರಮೇಶ್ವರ್‌-ಪ್ರಣಬ್‌ ಮೊಹಾಂತಿ ಚರ್ಚೆ

Home Minister Parameshwar-Pranab Mohanty discuss Dharmasthala case

ಬೆಂಗಳೂರು, ಸೆ.26- ಧರ್ಮಸ್ಥಳದ ಪ್ರಕರಣಗಳ ತನಿಖೆ ನಡೆಸುತ್ತಿರುವ ಎಸ್‌‍ಐಟಿ ಮುಖ್ಯಸ್ಥ ಪ್ರಣಬ್‌ ಮೊಹಾಂತಿ ಇಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದ್ದಾರೆ.ಧರ್ಮಸ್ಥಳದಲ್ಲಿನ ಪ್ರಕರಣಗಳ ತನಿಖೆಗೆ ಚಿನ್ನಯ್ಯ ಮತ್ತು ಸಂಗಡಿಗರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮೇ 5ರಂದೇ ವಜಾಗೊಳಿಸಿ, ಕಠಿಣ ಶಬ್ಧಗಳಲ್ಲಿ ತರಾಟೆಗೆ ತೆಗೆದುಕೊಂಡಿತ್ತು. ಆ ಬಳಿಕ ಚಿನ್ನಯ್ಯ ತಲೆ ಬುರುಡೆಯೊಂದನ್ನು ತಂದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ, ಸ್ವಯಂ ಪ್ರೇರಿತ ಹೇಳಿಕೆ ದಾಖಲಿಸಿದ್ದು, ಮಾಧ್ಯಮಗಳಲ್ಲೂ ಭಾರೀ ಸುದ್ದಿಯಾಗಿತ್ತು.

ಬಳಿಕ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು, ಮುಖ್ಯಮಂತ್ರಿಯವರಿಗೆ ಪತ್ರ ಬರೆದು, ನೂರಾರು ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಹೂತು ಹಾಕಿರುವ ಪ್ರಕರಣಗಳನ್ನು ತನಿಖೆ ನಡೆಸಲು ಎಸ್‌‍ಐಟಿ ರಚಿಸುವಂತೆ ಪತ್ರ ಬರೆದಿದ್ದರು. ಅದರ ಆಧಾರದ ಮೇಲೆ ಮುಖ್ಯಮಂತ್ರಿ ಅವರು ಪ್ರಣಬ್‌ ಮೊಹಾಂತಿ ನೇತೃತ್ವದಲ್ಲಿ ಎಸ್‌‍ಐಟಿ ರಚಿಸಿದ್ದರು.

ಎಸ್‌‍ಐಟಿ ಹಲವಾರು ಸ್ಥಳಗಳಲ್ಲಿ ಉತ್ಖನನ ಮಾಡಿದೆ. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿದವರ ವಿರುದ್ಧವೂ ತನಿಖೆ ನಡೆಸಿದೆ. ಈಗ ಮೇ 5ರಂದು ಸಾರ್ವಜನಿಕ ಹಿತಾಸಕ್ತಿ ವಜಾಗೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ದೇಶದ ಸರ್ವೋಚ್ಚ ನ್ಯಾಯಾಲಯವೇ ತನಿಖೆ ಅಗತ್ಯವಿಲ್ಲ ಎಂದು ಸಾರ್ವಜನಿಕ ಹಿತಾಸಕ್ತಿಯನ್ನು ವಜಾಗೊಳಿಸಿದ ಬಳಿಕ ರಚಿಸಲಾಗಿರುವ ಎಸ್‌‍ಐಟಿಯ ಔಚಿತ್ಯದ ಬಗ್ಗೆ ನಾನಾ ರೀತಿಯ ಪ್ರಶ್ನೆಗಳು ಉದ್ಭವಿಸಿವೆ. ಈ ಹಿನ್ನೆಲೆಯಲ್ಲಿ ಪ್ರಣಬ್‌ ಮೊಹಾಂತಿ ಅವರು ಗೃಹ ಸಚಿವರ ಮನೆಗೆ ಭೇಟಿ ನೀಡಿ ದಾಖಲೆಗಳ ಸಹಿತವಾಗಿ ವಿವರಣೆ ನೀಡಿದ್ದಾರೆ.

ಹಿರಿಯ ವಕೀಲರಾದ ಕೆ.ವಿ. ಧನಂಜಯ ಅವರು, ಚಿನ್ನಯ್ಯ ಹೆಸರಿನಲ್ಲಿ ಸುಪ್ರೀಂಕೋರ್ಟ್‌ನಲ್ಲಿ ದಾಖಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್‌)ಯಲ್ಲಿ 1995ರಿಂದ 98ರ ನಡುವೆ ಹಲವಾರು ಶವಗಳು ನೇತ್ರಾವತಿ ನದಿಯಲ್ಲಿ ತೇಲಿಕೊಂಡು ಬಂದಿವೆ. ಅವುಗಳನ್ನು ಧರ್ಮಸ್ಥಳದ ಮೇಲ್ವಿಚಾರಕ ನನ್ನಿಂದ ಬಲವಂತವಾಗಿ ಸಂಸ್ಕಾರ ಮಾಡಿಸಿದ್ದಾರೆ. ಈ ರೀತಿ ತೇಲಿ ಬಂದ ಶವಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೆ ತುತ್ತಾದ ಶವಗಳೂ ಇದ್ದವು ಎಂದು ಪಿಐಎಲ್‌ನಲ್ಲಿ ಉಲ್ಲೇಖಿಸಲಾಗಿತ್ತು.

2010ರಲ್ಲಿ ಬಾಲಕಿಯೊಬ್ಬಳ ಶವವನ್ನು ಸಂಸ್ಕಾರ ಮಾಡಲಾಗಿದೆ. ಆ ಶವದಲ್ಲಿ ಲೈಂಗಿಕ ದೌರ್ಜನ್ಯದ ಗುರುತುಗಳು ಇದ್ದವು ಎಂದು ದೂರಲಾಗಿದೆ. 2008ರಿಂದ 2014ರ ನಡುವೆ ಹಲವಾರು ಸಾವುಗಳಾಗಿದ್ದು, ಅವು ಕೊಲೆ ಮತ್ತು ಅತ್ಯಾಚಾರಕ್ಕೊಳಗಾಗಿದ್ದವು ಎಂದು ಉಲ್ಲೇಖಿಸಿಲಾಗಿತ್ತು. ಆದರೆ ಪಿಐಎಲ್‌ ಅನ್ನು ವಜಾಗೊಳಿಸಿದ ಸುಪ್ರೀಂಕೊರ್ಟ್‌ ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅಲ್ಲ, ಪಬ್ಲಿಸಿಟಿ ಇಂಟ್ರೆಸ್ಟ್‌ ಲಿಟಿಗೇಷನ್‌, ಪೈಸಾ ಇಂಟ್ರೆಸ್ಟ್‌ ಲಿಟಿಗೇಷನ್‌, ಪ್ರೈವೆಟ್‌ ಇಂಟ್ರೆಸ್ಟ್‌ ಲಿಟಿಗೇಷನ್‌, ಪೊಲಿಟಿಕಲ್‌ ಇಂಟ್ರೆಸ್ಟ್‌ ಲಿಟಿಗೇಷನ್‌ ಎಂದು ಕಟು ಶಬ್ಧಗಳಲ್ಲಿ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ, ಸತೀಶ್‌ ಚಂದ್ರಶರ್ಮ ಅವರ ವಿಭಾಗೀಯ ಪೀಠ ಆಕ್ಷೇಪಿಸಿ, ಪಿಐಎಲ್‌ಅನ್ನು ವಜಾಗೊಳಿಸಿತ್ತು.

ಈ ಮಾಹಿತಿಯನ್ನು ಬುರುಡೆ ಗ್ಯಾಂಗ್‌ ಮುಚ್ಚಿಟ್ಟು, ಸರ್ಕಾರವನ್ನು ದಿಕ್ಕು ತಪ್ಪಿಸಿ ಎಸ್‌‍ಐಟಿ ರಚಿಸುವಂತೆ ಮಾಡಿರುವ ಬಗ್ಗೆ ಚರ್ಚೆಗಳು ಈಗ ನಡೆದಿವೆ. ಎಸ್‌‍ಐಟಿಯನ್ನು ರದ್ದು ಮಾಡಿ, ಸ್ಥಳೀಯ ಪೊಲೀಸರಿಂದಲೇ ಪ್ರಕರಣಗಳ ತನಿಖೆಯನ್ನು ಮುಂದುವರೆಸುವ ಬಗ್ಗೆಯೂ ಪ್ರಸ್ತಾಪಗಳಿವೆ.

ಗೃಹ ಸಚಿವ ಪರಮೇಶ್ವರ್‌ ಅವರು ಇಂದು ಮುಖ್ಯಮಂತ್ರಿಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು, ಪಿಐಎಲ್‌ ವಜಾ, ಎಸ್‌‍ಐಟಿ ಯೋಜನೆ ಹಾಗೂ ತನಿಖೆಯ ಪ್ರಗತಿಯ ಬಗ್ಗೆ ಸಮಗ್ರ ವಿವರಣೆ ನೀಡಿದ್ದಾರೆ.

ಮುಖ್ಯಮಂತ್ರಿ ಹಾಗೂ ಗೃಹಸಚಿವರ ಭೇಟಿಗೂ ಮುನ್ನ ಪೂರ್ವಭಾವಿಯಾಗಿ ಪ್ರಣಬ್‌ ಮೊಹಾಂತಿ ಅವರು ದಾಖಲೆಗಳ ಸಹಿತ ಗೃಹ ಸಚಿವರಿಗೆ ವಿವರಣೆ ನೀಡಿದ್ದರು. ಈ ಸಂದರ್ಭದಲ್ಲಿ ತನಿಖೆಯ ಪ್ರಗತಿ ಬಗ್ಗೆಯೂ ಮಾಹಿತಿ ನೀಡಿದ್ದಾರೆ.ಅತ್ತ ಶಿವಮೊಗ್ಗ ಜೈಲಿನಲ್ಲಿರುವ ದೂರುದಾರ ಚಿನ್ನಯ್ಯ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ಹೊರ ಬರುವಾಗ ಕಣ್ಣೀರು ಹಾಕಿರುವುದು ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ.

ಚಿನ್ನಯ್ಯನ ಹೇಳಿಕೆಯನ್ನು ಕಳೆದ ನಾಲ್ಕು ದಿನಗಳಿಂದಲೂ ನಿರಂತರವಾಗಿ ದಾಖಲಿಸುತ್ತಿರುವ ನ್ಯಾಯಾಲಯ ನಾಳೆ ಕೂಡ ಹಾಜರಾಗಲು ಚಿನ್ನಯ್ಯನಿಗೆ ಸೂಚನೆ ನೀಡಿದೆ.

RELATED ARTICLES

Latest News