ಬೆಂಗಳೂರು,ಫೆ.21- ರಾಜಕೀಯಕ್ಕೆ ಸಂಬಂಧಪಟ್ಟ ಯಾವುದೇ ಪ್ರಶ್ನೆ ಎದುರಾದರೂ ಸ್ಪಷ್ಟ ಉತ್ತರ ನೀಡಲು ಗೃಹಸಚಿವ ಡಾ.ಜಿ.ಪರಮೇಶ್ವರ್ ಮೌನಕ್ಕೆ ಶರಣಾಗುತ್ತಿದ್ದು, ಅದನ್ನು ಮೀರಿ ಹೆಚ್ಚಿನ ಬಲವಂತ ಮಾಡಿದರೆ ತಮಗೆ ಮಾಹಿತಿ ಇಲ್ಲ ಎಂದು ಜಾರಿಕೊಳ್ಳುವುದು ಕಂಡುಬಂದಿದೆ.
ಪರಮೇಶ್ವರ್ ಪ್ರತಿದಿನ ಸುದ್ದಿಗಾರರಿಗೆ ಮುಖಾಮುಖಿಯಾಗುತ್ತಿರುತ್ತಾರೆ. ಈ ಮೊದಲು ರಾಜಕೀಯ, ತಮ್ಮ ಗೃಹ ಇಲಾಖೆ, ರಾಜ್ಯ, ದೇಶದ ಯಾವುದೇ ವಿದ್ಯಮಾನಗಳಿದ್ದರೂ ಮುಲಾಜಿಲ್ಲದೆ ಪ್ರತಿಕ್ರಿಯೆ ನೀಡುತ್ತಿದ್ದರು.
ಇತ್ತೀಚೆಗೆ ನಡೆದ ಚರ್ಚೆಗಳಲ್ಲಿ ಹೆಚ್ಚುವರಿ ಉಪಮುಖ್ಯಮಂತ್ರಿ ಜೊತೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಪರ-ವಿರೋಧ ವಾತಾವರಣವನ್ನು ಸೃಷ್ಟಿಸಿತ್ತು. ಪಕ್ಷದಲ್ಲೇ ಇಂತಹ ವೈರುಧ್ಯಗಳು ಅನಗತ್ಯ ಎಂದು ಹೈಕಮಾಂಡ್ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಪರಮೇಶ್ವರ್ ತಣ್ಣಗಾಗಿರಲಿಲ್ಲ.
ಕೊನೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ಮಧ್ಯ ಪ್ರವೇಶ ಮಾಡಿ ತಾಕೀತು ಮಾಡಿದ್ದಲ್ಲದೆ, ಪರಮೇಶ್ವರ್ ಅವರನ್ನು ಮನೆಗೆ ಕರೆಸಿಕೊಂಡು ಬುದ್ಧಿವಾದ ಹೇಳಿದ್ದಾರೆ ಎನ್ನಲಾಗಿದೆ. ಎಐಸಿಸಿ ಅಧ್ಯಕ್ಷರು ನನ್ನ ಹಿರಿಯಣ್ಣ ಇದ್ದಂತೆ ಎಂದು ಹೇಳುವ ಪರಮೇಶ್ವರ್, ಅವರ ಸೂಚನೆ ಬಳಿಕ ಗಪ್ ಚುಪ್ ಆಗಿದ್ದಾರೆ.
ಸಂಪುಟ ಪುನರ್ ರಚನೆ ವಿಚಾರವಾಗಿ ಚರ್ಚೆ ನಡೆಯುತ್ತಿರುವುದರ ಬಗ್ಗೆ ಪ್ರಶ್ನೆ ಕೇಳಿದಾಗ, ಅದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಅವರನ್ನೇ ಕೇಳಿ ಎಂದು ಉತ್ತರಿಸಿದರು.
ದಲಿತ ಮುಖ್ಯಮಂತ್ರಿಯಾಗಬೇಕೆಂದು ಸಂಘಟನೆಗಳು ಒತ್ತಾಯಿಸಿರುವುದನ್ನು ನೆನಪಿಸಿದಾಗ, ಇಂತಹ ವಿಚಾರಗಳನ್ನು ಬಿಟ್ಟು ಬೇರೆ ಏನಾದರೂ ಇದೆಯೇ? ಎಂದು ಮರು ಪ್ರಶ್ನಿಸಿದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ನೀಡಿರುವ ಬಗ್ಗೆ ನನಗೆ ಗೊತ್ತಿಲ್ಲ. ನಾನು ಪೇಪರ್‌ನಲ್ಲಿ ಓದಿದ್ದೇನೆ. ನಾವು ಅಂತಹ ಯಾವುದೇ ಹೇಳಿಕೆಗಳನ್ನೂ ಕೊಟ್ಟಿಲ್ಲ. ಹಾಗಾಗಿ ನಮಗೆ ಯಾರೂ ಎಚ್ಚರಿಕೆ ಎಚ್ಚರಿಕೆ ಕೊಟ್ಟಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಈ ಮೊದಲು ದಲಿತ ಮುಖ್ಯಮಂತ್ರಿ ವಿಚಾರ ಬರುತ್ತಿದ್ದಂತೆ ಸಾಮಾಜಿಕ ನ್ಯಾಯದ ಬಗ್ಗೆ ಮಾರುದ್ದ ಮಾತನಾಡುತ್ತಿದ್ದ ಪರಮೇಶ್ವರ್ ಇದ್ದಕ್ಕಿದ್ದಂತೆ ಮೌನವ್ರತಕ್ಕೆ ಜಾರಿದ್ದಾರೆ. ಮುಖ್ಯಮಂತ್ರಿ ಜೊತೆಯಾಗಲೀ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆಯಾಗಲೀ ಯಾವುದಕ್ಕೂ ಪರಮೇಶ್ವರ್ ಬಾಯಿಬಿಟ್ಟಿಲ್ಲ. ರಾಜಕೀಯದ ವಿಚಾರ ಬರುತ್ತಿದ್ದಂತೆ ಮುಖ ತಿರುಗಿಸಿ ತಮ್ಮ ಪಾಡಿಗೆ ತಾವು ನಡೆದುಹೋಗುತ್ತಿದ್ದಾರೆ.