ಬೆಂಗಳೂರು,ಜ.16- ಸಮುದಾಯದ ಕಷ್ಟಸುಖಗಳನ್ನು ಚರ್ಚೆ ಮಾಡಲು ಸಭೆ ಕರೆಯುವುದನ್ನು ಗಮನಿಸುವ ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಕೇಳಿಬರುತ್ತಿರುವ ಕೂಗುಗಳನ್ನು ಗಮನಿಸಿರುತ್ತದೆ ಎಂದು ಹೇಳುವ ಮೂಲಕ ಗೃಹಸಚಿವ ಡಾ.ಜಿ.ಪರಮೇಶ್ವರ್ ಪಕ್ಷದ ಹೈಕಮಾಂಡ್ ವಿರುದ್ಧ ಸಿಡಿಮಿಡಿ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಬಹುದಿನಗಳಿಂದ ತಮಲ್ಲೇ ಅಡಗಿಸಿಟ್ಟುಕೊಂಡಿದ್ದ ಅಸಹನೆ ಯನ್ನು ಅವಕಾಶ ಸಿಕ್ಕ ತಕ್ಷಣಕ್ಕೆ ಹೊರಹಾಕುವಂತೆ ಪರಮೇಶ್ವರ್ ತಮ ಸಿಟ್ಟನ್ನು ಹೇಳಿಕೊಂಡಂತೆ ಕಂಡುಬರುತ್ತಿದೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ನೀಡಿದ್ದ ಹೇಳಿಕೆಗೆ ಪರೋಕ್ಷ ಬೆಂಬಲ ನೀಡುವಂತೆ ಮಾತನಾಡಿರುವ ಪರಮೇಶ್ವರ್, ಉಪಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್ ಬಳಿ 2 ಪ್ರಬಲ ಖಾತೆಗಳಿವೆ. ಪಕ್ಷದ ಅಧ್ಯಕ್ಷ ಸ್ಥಾನವೂ ಇದೆ. ಹೀಗಾಗಿ ಕಾರ್ಯಭಾರ ಹೆಚ್ಚಿರುತ್ತದೆ. ಬದಲಾವಣೆ ಮಾಡಿ ಎಂಬ ಹೇಳಿಕೆ ಸಹಜವಾಗಿ ಕೇಳಿಬರುತ್ತದೆ ಎಂದಿದ್ದಾರೆ.
ಈ ಮೊದಲು ನಾನು ಅಧ್ಯಕ್ಷನಾಗಿದ್ದಾಗಲೂ ಇದೇ ಪರಿಸ್ಥಿತಿ ಉದ್ಭವಿಸಿತ್ತು. ಸಚಿವ ಸ್ಥಾನ ಅಥವಾ ಅಧ್ಯಕ್ಷ ಸ್ಥಾನ ಎರಡರಲ್ಲಿ ಒಂದನ್ನು ಉಳಿಸಿಕೊಳ್ಳಿ ಎಂದು ನಮ ಮುಂದೆ ಆಯ್ಕೆ ಇಡಲಾಗಿತ್ತು. ನಾನು ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಂಡು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಈಗಲೂ ಅದನ್ನೇ ಬಯಸುತ್ತಿದ್ದಾರೆ ಎಂದು ಹೇಳುವ ಮೂಲಕ ಡಿ.ಕೆ.ಶಿವಕುಮಾರ್ ಅವರಿಗೆ ಪರೋಕ್ಷವಾದ ಟಾಂಗ್ ನೀಡಿದ್ದಾರೆ.
ಡಿ.ಕೆ.ಶಿವಕುಮಾರ್ ಅವರ ಬದಲಾವಣೆ ಯಾಗ ಬೇಕು ಎಂದು ಹಲವಾರು ನಾಯಕರು ಹೇಳುತ್ತಿರುವುದನ್ನು ಹೈಕಮಾಂಡ್ ಗಮನಿಸಿರುತ್ತದೆ. ನಾವು ಸಮುದಾಯದ ಸಭೆ ನಡೆಸುವುದನ್ನು ಗಮನಿಸಿದ್ದ ಪಕ್ಷ ಕಾರ್ಯಕರ್ತರ, ನಾಯಕರ ಅಭಿಪ್ರಾಯಗಳನ್ನು ಗಮನಿಸಿರುವುದಿಲ್ಲವೇ?, ಸೂಕ್ತ ಸಂದರ್ಭದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಜಾತಿ ಜನಗಣತಿ ಸಂಪುಟದಲ್ಲಿ ಮಂಡನೆಯಾಗಬೇಕಿತ್ತು. ಆದರೆ ಮುಂದೂಡಿಕೆಯಾಗಿದೆ ಎಂದು ಮುಖ್ಯಮಂತ್ರಿ ಹೇಳಿರುವುದನ್ನು ನಾನು ಗಮನಿಸಿದ್ದೇನೆ. ಅನೇಕ ಸಂದರ್ಭದಲ್ಲಿ ಈ ರೀತಿ ಆಗುವುದು ಸಹಜ. ಸಂಪುಟದಲ್ಲಿ ವಿಷಯ ಮಂಡನೆಯಾಗಿದ್ದರೂ ಸರಿಯಾದ ಮಾಹಿತಿ ಇಲ್ಲ ಎಂಬ ಕಾರಣಕ್ಕೆ ಮುಂದೂ ಡಿಕೆ ಯಾಗುವುದೂ ಇದೆ ಎಂದರು.
ಕೇಂದ್ರ ಸಚಿವ ಕುಮಾರಸ್ವಾಮಿಯವರು ಹೇಳಿದಂತೆ ಒಕ್ಕಲಿಗ ಸಮುದಾಯ ಅಥವಾ ಲಿಂಗಾಯತ ಸಮುದಾಯವನ್ನು ಕಡೆಗಣಿಸುವ ಉದ್ದೇಶ ಸರ್ಕಾರಕ್ಕಿಲ್ಲ. ಕುಮಾರಸ್ವಾಮಿ, ಅಶೋಕ್ ಸೇರಿದಂತೆ ಹಲವಾರು ಮಂದಿ ನಾನಾ ರೀತಿ ಹೇಳಿಕೆಗಳನ್ನು ನೀಡುತ್ತಾರೆ. ಆದರೆ ಸರ್ಕಾರ ತನ್ನ ಉದ್ದೇಶಕ್ಕನುಗುಣವಾಗಿ ಕೆಲಸ ಮಾಡುತ್ತದೆ.
ಈ ಸಂದರ್ಭದಲ್ಲಿ ವರದಿ ವಿಚಾರವಾಗಿ ಯಾವುದೇ ಒತ್ತಡಗಳು ಕಂಡುಬಂದಿಲ್ಲ. ಒತ್ತಡ ಕಾರಣಕ್ಕಾಗಿಯೂ ಸಂಪುಟದಲ್ಲಿ ವರದಿ ಮಂಡಿಸುವುದನ್ನು ಮುಂದೂಡಿದಂತಿಲ್ಲ ಎಂದು ಹೇಳಿದರು.
ವರದಿ ವಿಳಂಬಕ್ಕೆ ಅನೇಕ ಕಾರಣಗಳಿವೆ. ಅವುಗಳನ್ನು ಸಮರ್ಥಿಸಿ ಕೊಳ್ಳುವುದಿಲ್ಲ. ಅಂತಿಮವಾಗಿ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಅದನ್ನು ಚರ್ಚೆ ಮಾಡಿ ಪರಿಶೀಲಿಸಲು ನಮ ಸರ್ಕಾರ ನಿರ್ಧರಿಸಿದೆ ಎಂದು ಸ್ಪಷ್ಟಪಡಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜು ನಾಥ್ ಭಂಡಾರಿ ಸಚಿವರನ್ನುದ್ದೇಶಿಸಿ ಪತ್ರ ಬರೆದಿರುವುದು, ವರದಿ ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ವರದಿ ಕೇಳುವ ಸ್ಥಾನದಲ್ಲಿ ಇವರಿದ್ದಾರೆ, ವರದಿ ನೀಡುವ ಸ್ಥಾನದಲ್ಲಿ ಸಚಿವರಿದ್ದಾರೆ. ವರದಿ ಪಡೆದುಕೊಳ್ಳಲಿ ಎಂದು ಮಾರ್ಮಿಕವಾಗಿ ಹೇಳಿದರು.
ವರದಿ ಪಡೆದ ಬಳಿಕ ಕಳಪೆ ಸಾಧನೆ ಮಾಡಿದ ಸಚಿವರನ್ನು ಸಂಪುಟದಿಂದ ಕೈಬಿಡಲಾಗುತ್ತಿದೆ ಎಂಬ ಮಾಹಿತಿ ತಮಗಿಲ್ಲ ಎಂದರು.ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರ ಸಮಾಜದಲ್ಲಿ ಮನಸ್ಥಿತಿ ಬದಲಾಗುತ್ತಿರುವುದು ಹಾಗೂ ಸಾಮಾಜಿಕ ಸಮಸ್ಯೆಯಾಗಿರುವುದರ ಸಂಕೇತ. ಇದಕ್ಕೆ ದೊಡ್ಡ ಪ್ರಮಾಣದಲ್ಲಿ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಅತ್ಯಾಚಾರದ ಆರೋಪಿಗಳಿಗೆ ಗುಂಡೇಟಿನ ಬಗ್ಗೆ ಪ್ರತಿಕ್ರಿಯಿಸಿದರು.
ದೀರ್ಘಗಾಮಿ ಕ್ರಮಗಳಾಗಿ ವಿಶ್ವವಿದ್ಯಾಲಯ ಮತ್ತು ಶಾಲಾ- ಕಾಲೇಜುಗಳ ಪಠ್ಯದಲ್ಲಿ ಇಂತಹ ವಿಚಾರಗಳನ್ನು ಅಳವಡಿಸಬೇಕು. ಅತ್ಯಾಚಾರ ನಡೆದಾಗ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಸಮಾಜ ಬದಲಾಗಬೇಕು ಎಂದು ಹೇಳಿದರು.