Sunday, February 23, 2025
Homeರಾಜ್ಯರಾಜೀನಾಮೆ ಕೊಡುವ ಮಾತುಗಳನ್ನಾಡಿದ ಗೃಹಸಚಿವ ಪರಮೇಶ್ವರ್‌

ರಾಜೀನಾಮೆ ಕೊಡುವ ಮಾತುಗಳನ್ನಾಡಿದ ಗೃಹಸಚಿವ ಪರಮೇಶ್ವರ್‌

Home Minister Parameshwara talks about resigning

ಬೆಂಗಳೂರು,ಫೆ.23– ಸ್ವಕ್ಷೇತ್ರ ಕೊರಟ ಗೆರೆಯ ಮತದಾರರು ದೊಡ್ಡ ಮನಸ್ಸು ಮಾಡಿ ಒಂದೇ ಮಾತಿನಲ್ಲಿ ಹೇಳಿದರೆ ನಾಳೆಯೇ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ನಿಮ್ಮ ಜೊತೆ ಇದ್ದುಬಿಡುತ್ತೇನೆ ಎಂದು ಡಾ.ಜಿ.ಪರಮೇಶ್ವರ್‌ ನೀಡಿರುವ ಹೇಳಿಕೆ ರಾಜಕೀಯ ವಿಮರ್ಶೆಗೆ ಗುರಿಯಾಗಿದೆ.

ಕೊರಟಗೆರೆಯ ರಾಜೀವ ಭವನದಲ್ಲಿ ಬ್ಲಾಕ್‌ ಕಾಂಗ್ರೆಸ್‌‍ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ವೇಳೆ ಪರಮೇಶ್ವರ್‌, ನನಗೆ ನಿಮ ಜೊತೆ ಹೆಚ್ಚು ಸಮಯ ಇರಬೇಕು ಎಂಬ ಅಭಿಲಾಷೆ ಇದೆ. ಆದರೆ ಸಮಯ ನನ್ನ ಕೈಲಿಲ್ಲ ಎಂದಿದ್ದಾರೆ.
ಕ್ಷೇತ್ರದ ಜನರಿಗೆ ಒಂದಷ್ಟು ನಿರಾಶೆಗಳಾಗಿರಬಹುದು. ಕೈಗೆ ಸಿಗುವುದಿಲ್ಲ, ಪಂಚಾಯಿತಿಗೆ ಬರುವುದಿಲ್ಲ, ನನ್ನನ್ನು ಮಾತನಾಡಿಸುತ್ತಿಲ್ಲ… ಎಂದೆಲ್ಲಾ ಅನಿಸಬಹುದು. ನನಗೂ ಈ ರೀತಿಯ ತುಂಬಾ ಅನಿಸಿಕೆಗಳಿವೆ. ಕ್ಷೇತ್ರದಲ್ಲಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು, ನಾಟಕದಲ್ಲಿ ಹಾಡು ಹೇಳಬೇಕು, ಜಾತ್ರೆಗೆ ಹೋಗಬೇಕಿತ್ತು ಎಂದೆಲ್ಲಾ ಅನಿಸುತ್ತದೆ. ಆದರೆ ಸಮಯವಿಲ್ಲ ಎಂದಿದ್ದಾರೆ.

ನೀವೆಲ್ಲಾ ದೊಡ್ಡ ಮನಸ್ಸು ಮಾಡಿ ಹೇಳಿದರೆ ನಾಳೆಯೇ ರಾಜೀನಾಮೆ ನೀಡುತ್ತೇನೆ, ಮತ್ತೆ ನಿಮ ಜೊತೆ ಇರುತ್ತೇನೆ ಎಂದಿದ್ದಾರೆ. ತಕ್ಷಣವೇ ಕಾರ್ಯಕರ್ತರು ಬೇಡ, ಬೇಡ, ನೀವಿನ್ನೂ ಮುಖ್ಯಮಂತ್ರಿಯಾಗಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.

ಕೆಲವರು ಎದ್ದುನಿಂತು ರಾಜೀನಾಮೆ ನೀಡಬೇಡಿ ಎಂದು ಒತ್ತಾಯಿಸಿದ್ದಾರೆ. ಈ ವೇಳೆ ಗರಂ ಆದ ಪರಮೇಶ್ವರ್‌, ನನಗೆ ಎಲ್ಲರ ಬಂಡವಾಳವೂ ಗೊತ್ತಿದೆ. ಸುಮನೆ ಮಾತನಾಡಬೇಡಿ. ನಾನು ಮಾತನಾಡಬೇಕಾಗುತ್ತದೆ. ಸುಮನೆ ಇದ್ದುಬಿಡಿ. ಯಾರ್ಯಾರು, ಎಷ್ಟೆಷ್ಟು ಮೀಸೆ ತಿರುವಿದ್ದೀರ ಎಂದು ನನಗೆ ಗೊತ್ತಿಲ್ಲವೇ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಇದರಿಂದ ಪರಮೇಶ್ವರ್‌ಗೆ ಬೆಂಬಲ ವ್ಯಕ್ತಪಡಿಸಿದವರೇ ಕಕ್ಕಾಬಿಕ್ಕಿಯಾಗುವಂತಹ ವಾತಾವರಣ ನಿರ್ಮಾಣವಾಯಿತು.

ಕಾರ್ಯಕರ್ತರ ಆಕ್ಷೇಪ :
ಕೊರಟಗೆರೆ ಕ್ಷೇತ್ರದಿಂದ ಆಯ್ಕೆಯಾಗಿರುವ ಸಚಿವ ಪರಮೇಶ್ವರ್‌ ನಂತರ ಕ್ಷೇತ್ರದ ಜನರಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳು ವ್ಯಾಪಕವಾಗಿವೆ. ತಾಲ್ಲೂಕಿನಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಆಡಳಿತ ವ್ಯವಸ್ಥೆ ಕೂಡ ಹಳ್ಳ ಹಿಡಿದಿದೆ. ಅಧಿಕಾರಿಗಳ ದರ್ಬಾರ್‌ ತೀವ್ರವಾಗಿದೆ. ಕೆಲವು ಬೆಂಬಲಿಗರು ಕ್ಷೇತ್ರದಲ್ಲೇ ದರ್ಪ ಪ್ರದರ್ಶನ ಮಾಡುತ್ತಿದ್ದಾರೆ ಎಂಬೆಲ್ಲಾ ಟೀಕೆಗಳಿವೆ. ಈ ಕಾರಣಕ್ಕೆ ಕ್ಷೇತ್ರದ ಜನರಲ್ಲಿ ಅಸಮಾಧಾನ ಮಡುಗಟ್ಟಿದೆ.

ಈ ಮೊದಲು ಪರಮೇಶ್ವರ್‌ ಅವರ ಇದೇ ರೀತಿಯ ವರ್ತನೆಗಾಗಿ 2013 ರ ಚುನಾವಣೆಯಲ್ಲಿ ಜನ ಸೋಲಿಸಿದ್ದರು. ಆ ವೇಳೆ ಕೆಪಿಸಿಸಿ ಅಧ್ಯಕ್ಷರಾಗಿದ್ದು ಮುಖ್ಯಮಂತ್ರಿ ರೇಸ್‌‍ನಲ್ಲಿದ್ದ ಪರಮೇಶ್ವರ್‌ ಸೋಲಿನಿಂದ ಅವಕಾಶ ವಂಚಿತರಾಗಿ ರಾಜಕೀಯವಾಗಿ ತೀವ್ರ ಹಿನ್ನಡೆ ಅನುಭವಿಸಿದ್ದರು. ನಂತರ 2018 ರ ಚುನಾವಣೆಯಲ್ಲಿ ರಾಜ್ಯದ ಉಸಾಬರಿಗೆ ತಲೆಕೆಡಿಸಿಕೊಳ್ಳದೆ ಚುನಾವಣೆ ಸಂದರ್ಭದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರ ಸುತ್ತಿ ಪ್ರತಿಯೊಬ್ಬರನ್ನೂ ವಿಶ್ವಾಸದಿಂದ ಮಾತನಾಡಿಸಿ ಮುಖ್ಯಮಂತ್ರಿಯಾಗುತ್ತಾರೆ ಎಂಬ ಭರವಸೆ ಮೂಡಿಸಿ ಗೆಲುವು ಕಂಡಿದ್ದರು.

2023ರಲ್ಲೂ ಇದೇ ರೀತಿಯ ಪ್ರಚಾರ ನಡೆದಿತ್ತು. ಶಾಸಕರಾಗಿ, ಸಚಿವರಾಗಿ ಅಧಿಕಾರ ಅನುಭವಿಸುವವರ ಜೊತೆ ಪರಮೇಶ್ವರ್‌ ತಮ ಕಚೇರಿ ಮತ್ತು ಮನೆ ಬಳಿ ಬರುವ ಕ್ಷೇತ್ರದವರನ್ನು ಸರಿಯಾಗಿ ಗಮನಿಸುವುದಿಲ್ಲ ಎಂಬ ಟೀಕೆಗಳು ವ್ಯಾಪಕವಾಗಿವೆ. ಹಾಗಾಗಿಯೂ ಮುಖ್ಯಮಂತ್ರಿಯಾಗುತ್ತಾರೆ ಎಂಬ ಕಾರಣಕ್ಕೆ ಜನ ಕೈಹಿಡಿಯುತ್ತಾ ಬಂದಿದ್ದಾರೆ.

ವಿಪಕ್ಷಗಳ ಟೀಕೆ :
ಗೃಹಸಚಿವರಾಗಿ ಪರಮೇಶ್ವರ್‌ ವೈಫಲ್ಯ ಅನುಭವಿಸಿದ್ದಾರೆ. ರಾಜ್ಯದಲ್ಲಿ ಸರಣಿ ಅಪರಾಧ ಕೃತ್ಯಗಳು ಜನರ ನೆಮದಿ ಕೆಡಿಸುತ್ತಿದೆ. ಪುಂಡರ ಹಾವಳಿ ತೀವ್ರವಾಗಿದೆ. ಗೃಹಸಚಿವರು ಪೊಲೀಸ್‌‍ ಇಲಾಖೆಗೆ ಸೂಕ್ತ ಮಾರ್ಗದರ್ಶನ ನೀಡಿ ಪರಿಸ್ಥಿತಿ ನಿಯಂತ್ರಿಸುವ ಬದಲು ಯಾವುದೇ ಘಟನೆಗಳಾದರೂ ಸ್ಥಳೀಯ ಪೊಲೀಸರು ನಿರ್ಧಾರ ತೆಗೆದುಕೊಳ್ಳುತ್ತಾರೆ, ಎಲ್ಲಾ ಅವರೇ ನೋಡಿಕೊಳ್ಳುತ್ತಾರೆ ಎಂಬ ಉಡಾಫೆಯ ಉತ್ತರ ನೀಡುತ್ತಿರುವುದು ಕಂಡುಬರುತ್ತಿದೆ.

ಕಾನೂನು ಸುವ್ಯವಸ್ಥೆ ಹದಗೆಡಲು ಗೃಹಸಚಿವರ ನಿರಾಸಕ್ತಿಯೇ ಕಾರಣ ಎಂಬ ಟೀಕೆಗಳು ವ್ಯಾಪಕವಾಗಿವೆ. ಇಂತಹ ಸಂದರ್ಭದಲ್ಲಿ ಪರಮೇಶ್ವರ್‌ ರಾಜೀನಾಮೆಯ ಮಾತನಾಡಿರುವುದು ರಾಜಕೀಯವಾಗಿ ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ.

ಕ್ಷೇತ್ರದ ಜನರ ಅಸಮಾಧಾನಕ್ಕೆ ಉತ್ತರ ನೀಡುವ ನೆಪದಲ್ಲಿ ತಮ ಇಲಾಖೆಯ ವೈಫಲ್ಯವನ್ನು ಮರೆಮಾಚುವ ಪ್ರಯತ್ನವಾಗಿ ರಾಜೀನಾಮೆ ಅಸ್ತ್ರ ಬಿಟ್ಟಿದ್ದಾರೆಯೇ? ಎಂಬ ಚರ್ಚೆಗಳು ಕೇಳಿಬರುತ್ತಿವೆ.

ಉಪಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಪರಮೇಶ್ವರ್‌, ದಲಿತ ಶಾಸಕರು ಮತ್ತು ಸಚಿವರ ಪ್ರತ್ಯೇಕ ಸಭೆಯ ಮೂಲಕ ರಾಜಕೀಯ ಆಧಿಪತ್ಯ ಸಾಧಿಸಲು ಮುಂದಾಗಿದ್ದರು. ಅದಕ್ಕೆ ಹೈಕಮಾಂಡ್‌ ಬ್ರೇಕ್‌ ಹಾಕಿದೆ. ದೆಹಲಿಗೆ ಭೇಟಿ ನೀಡಿದರೂ ಹೈಕಮಾಂಡ್‌ ಪರಮೇಶ್ವರ್‌ ಅವರಿಗೆ ಯಾವುದೇ ರಿಯಾಯಿತಿ ನೀಡಿಲ್ಲ. ಈ ಕಾರಣಕ್ಕಾಗಿ ರಾಜೀನಾಮೆ ಹೆಸರಿನಲ್ಲಿ ಹೈಕಮಾಂಡ್‌ಗೆ ಸಂದೇಶ ರವಾನಿಸಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ.

RELATED ARTICLES

Latest News