ಬೆಂಗಳೂರು,ಸೆ.3- ಅರ್ಜಿ ಕೊಡಲು ಅಥವಾ ದೂರು ದುಮಾನ ಹೇಳಿಕೊಳ್ಳಲು ಬರುವವರೊಂದಿಗೆ ಒರಟಾಗಿ ನಡೆದುಕೊಳ್ಳದಂತೆ ಗೃಹಸಚಿವ ಡಾ.ಜಿ.ಪರಮೇಶ್ವರ್ ಪೊಲೀಸ್ ಅಧಿಕಾರಿ ಗಳಿಗೆ ತಾಕೀತು ಮಾಡಿದರು.
ಇಂದು ಬೆಳಿಗ್ಗೆ ಪರಮೇಶ್ವರ್ ಅವರ ನಿವಾಸದೆದುರು ಆಗಮಿಸಿದ ಪಿಎಎಸ್ಐ ಹುದ್ದೆಯ ಆಕಾಂಕ್ಷಿಗಳು ಹಾಗೂ ಪೊಲೀಸ್ ಪೇದೆ ಹುದ್ದೆ ನೇಮಕಾತಿಗೆ ವಯೋಮಿತಿ ಸಡಿಲಿಕೆಗೆ ಮನವಿ ಸಲ್ಲಿಸಲು ಆಗಮಿಸಿದವರನ್ನು ಕೆಲವು ಪೊಲೀಸ್ ಅಧಿಕಾರಿಗಳು ಬಲವಂತವಾಗಿ ವಶಕ್ಕೆ ಪಡೆದು ಕರೆದೊಯ್ದರು. ಈ ವೇಳೆ ಕೆಲವರ ಮೇಲೆ ಹಲ್ಲೆ ನಡೆಸಿದ್ದೂ ಕಂಡುಬಂದಿತು.
ಈ ಕುರಿತು ಮಾಧ್ಯಮದವರು ಖಾರವಾಗ ಪ್ರಶ್ನಿಸಿದಾಗ ಗೃಹಸಚಿವರು ತಬ್ಬಿಬ್ಬಾದರು. ಯಾವುದೇ ಅರ್ಜಿಗಳನ್ನು ನೀಡಲು ಬಂದವರೊಂದಿಗೆ ನಾನೇ ಮಾತನಾಡುತ್ತೇನೆ, ಅರ್ಜಿಗಳನ್ನು ಪಡೆದುಕೊಂಡು ಸಮಯವಿದ್ದರೆ ಅದರ ಮೇಲೆ ಸೂಕ್ತ ನಿರ್ದೇಶನಗಳನ್ನು ಬರೆದು ರವಾನೆ ಮಾಡುತ್ತೇನೆ. ಸಮಯ ಇಲ್ಲದೇ ಇದ್ದರೆ ಅರ್ಜಿ ಪಡೆದು ನಂತರ ಪರಿಶೀಲಿಸಲಾಗುವುದು ಎಂದು ಹೇಳಿದರು.
ಇಂದು ಬೆಳಗಿನ ಪ್ರಕರಣ ನನ್ನ ಗಮನಕ್ಕೆ ಬಂದಿಲ್ಲ. ಇನ್ನು ಮುಂದೆ ಅರ್ಜಿಗಳನ್ನು ನೀಡಲು ಬಂದವರೊಂದಿಗೆ ಯಾರೂ ಅನುಚಿತವಾಗಿ ವರ್ತಿಸಬಾರದು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.