ಮೈಸೂರು,ಡಿ.29- ಮನೆ ಮಾಲೀಕನ ವಂಚನೆಯಿಂದಾಗಿ ಇತ್ತ ಭೋಗ್ಯಕ್ಕಾಗಿ ನೀಡಿದ ಹಣವೂ ಇಲ್ಲ; ವಾಸಕ್ಕೆ ಮನೆಯೂ ಇಲ್ಲದಂತಾಗಿ ಕುಟುಂಬವೊಂದು ಅತಂತ್ರ ಸ್ಥಿತಿಗೆ ಸಿಲುಕಿದೆ.
ಮಹಮದ್ ಷರೀಫ್ ವಂಚನೆಗೊಳಗಾದ ಭೋಗ್ಯದಾರ. ತಪನ್ ಅಡಾಕ್ ವಂಚಿಸಿರುವ ಮನೆ ಮಾಲೀಕ.
ಮಹಮದ್ ಷರೀಪ್ ಅವರು, ಮಂಡಿಮೊಹಲ್ಲಾದ ಸಾಜದ್ ಆಲಿ ರಸ್ತೆಯಲ್ಲಿರುವ ನಂ. 3001 ನ್ಯೂ ನಂ. ಎಂ-17/3004 ಎಂ.12 ವಿಳಾಸದ ಮನೆಯಲ್ಲಿ 2021ರಂದು 3 ವರ್ಷಗಳ ಅವಧಿಗಾಗಿ 8 ಲಕ್ಷ ಹಣ ಕೊಟ್ಟು ಭೋಗ್ಯಕ್ಕಾಗಿ ಅಗ್ರೀಮೆಂಟ್ ಮಾಡಿಸಿಕೊಂಡಿದ್ದರು.
2024ರ ಜನವರಿ 10ರಂದು ಕರಾರು ಅವಧಿ ಪೂರ್ಣಗೊಂಡಿದೆ. 8 ಲಕ್ಷ ಹಣ ಕೇಳಲು ಹೋದಾಗ ಮನೆ ಮಾಲೀಕ ತಪನ್ ಅಡಾಕ್ ಕುಟುಂಬ ಸಮೇತ ಪರಾರಿಯಾಗಿದ್ದಾನೆ.
ಅಗ್ರೀಮೆಂಟ್‌ಗೆ ಗ್ಯಾರಟಿ ಸಹಿ ಹಾಕಿದ್ದ ಮನೆ ಮಾಲೀಕನ ಸ್ನೇಹಿತ ವಿಜಯ್‌ಕುಮಾರ್ ಅವರನ್ನು ವಿಚಾರಿಸಿದಾಗ 8 ಲಕ್ಷ ತಾವೇ ಕೊಡುವುದಾಗಿ ಒಪ್ಪಿಕೊಂಡಿದ್ದರು. ಆದರೆ ಹಣ ನೀಡದೆ ವಿಜಯ್‌ಕುಮಾರ್ ಸತಾಯಿಸುತ್ತಿದ್ದಾರೆ ಎಂದು ದೂರಿನಲ್ಲಿ ಮೊಹಮದ್ ತಿಳಿಸಿದ್ದಾರೆ.
ಈ ಮಧ್ಯೆ ತಪನ್ ಅಡಾಕ್ ಸದರಿ ಮನೆಯ ಮೇಲೆ ಬ್ಯಾಂಕ್ ಆಫ್ ಬರೋಡಾದಲ್ಲಿ 36 ಲಕ್ಷ ಸಾಲ ಪಡೆದಿರುವುದಾಗಿ ತಿಳಿದುಬಂದಿದೆ.ಬ್ಯಾಂಕ್ ನವರು ಮಹಮದ್ ಷರೀಫ್ ಅವರನ್ನು ಖಾಲಿ ಮಾಡಿಸಿ, ಮನೆ ಸೀಜ್ ಮಾಡಿದ್ದಾರೆ.
ಈ ಬಗ್ಗೆ ವಿಜಯ್ ಕುಮಾರ್ ಅವರನ್ನು ಸಂಪರ್ಕಿಸಿ ಹಣ ಕೇಳಿದರೆ ಗತಿ ಕಾಣಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಭೋಗ್ಯದಾರ ಮೊಹಮದ್ ಅಳಲು ತೋಡಿಕೊಂಡಿದ್ದಾರೆ.
ಇದೀಗ ಭೋಗ್ಯಕ್ಕೆ ಕೊಟ್ಟ 8 ಲಕ್ಷವೂ ಇಲ್ಲ, ವಾಸ ಮಾಡಲು ಮನೆಯೂ ಇಲ್ಲದಂತಾಗಿ ಮಹಮದ್ ಷರೀಫ್ ಕುಟುಂಬ ಅತಂತ್ರ ಸ್ಥಿತಿಗೆ ಸಿಲುಕಿದ್ದು, ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಮಂಡಿ ಪೊಲೀಸ್ ಠಾಣೆಯಲ್ಲಿ ಮನೆ ಮಾಲೀಕ ತಪನ್ ಅಡಾಕ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.