ಬೆಂಗಳೂರು,ಮಾ.25– ಹನಿಟ್ರ್ಯಾಪ್ ಪ್ರಕರಣ ದಿನೇದಿನೇ ರಾಜ್ಯಸರ್ಕಾರದ ವರ್ಚಸ್ಸನ್ನು ಕುಗ್ಗಿಸುವ ನಿಟ್ಟಿನಲ್ಲಿ ಸಂಪುಟದ ಸಚಿವರ ನೈತಿಕತೆಯನ್ನು ಪ್ರಶ್ನಿಸುವಂತೆ ಮಾಡಿದೆ. 48 ಮಂದಿ ವಿರುದ್ಧ ಹನಿಟ್ರ್ಯಾಪ್‌ಗಳಾಗಿವೆ ಎಂದು ಕೆ.ಎನ್.ರಾಜಣ್ಣ ನೀಡಿದ ಹೇಳಿಕೆ ರಾಷ್ಟ್ರಮಟ್ಟದಲ್ಲೇ ಸದ್ದು ಮಾಡುತ್ತಿದೆ. ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನೆಗೆ ಬಂದು ಪ್ರಕರಣದ ಬಗ್ಗೆ ಚರ್ಚೆ ಮಾಡುವಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. ಮೂಲಗಳ ಪ್ರಕಾರ, ಅಧಿಕಾರ ಹಂಚಿಕೆಯ ಸೂತ್ರ ನವೆಂಬರ್ ವೇಳೆಗೆ ಜಾರಿಯಾಗಬೇಕಿದೆ. ಒಂದು ವೇಳೆ ದೆಹಲಿಯಲ್ಲಿ ನಡೆದ ಒಪ್ಪಂದ ದಂತೆ ನಡೆದುಕೊಳ್ಳಬೇಕಾದ ಪರಿಸ್ಥಿತಿ ಎದು ರಾದರೆ ಸಿದ್ದರಾಮಯ್ಯನವರು ಅಧಿಕಾರ ಬಿಟ್ಟುಕೊಡ ಬೇಕಾಗುತ್ತದೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ರೇಸ್‌ನಲ್ಲಿರುವ ಡಿ.ಕೆ.ಶಿವಕುಮಾರ್‌ರವರನ್ನು ಸಾರ್ವಜನಿಕವಾಗಿ ನಕಾರಾತ್ಮಕವಾಗಿ ಬಿಂಬಿಸುವ ಪ್ರಯತ್ನಗಳಾಗುತ್ತಿವೆ ಎಂಬ ಆಕ್ರೋಶ ಕೇಳಿಬಂದಿದೆ.
ಹನಿಟ್ರ್ಯಾಪ್ ಪ್ರಕರಣ ಕಾಂಗ್ರೆಸ್‌ನಲ್ಲೇ ಸ್ಪಷ್ಟವಾಗಿ 2 ಬಣಗಳನ್ನು ಸೃಷ್ಟಿಸಿದೆ. ಡಿ.ಕೆ.ಶಿವಕುಮಾರ್ ಬೆಂಬಲಿಗರು ಹನಿಯ ಹಿಂದೆ ಹೋಗಿದ್ದಕ್ಕಾಗಿಯೇ ಟ್ರ್ಯಾಪ್ ಆಗಿದ್ದಾರೆ ಎಂದು ತಿರುಗೇಟು ನೀಡುತ್ತಿದ್ದರೆ, ಸಿದ್ದರಾಮಯ್ಯ ಅವರ ಬಣ ಭಿನ್ನವಾದ ವಾದವನ್ನು ಮುಂದಿಟ್ಟಿದೆ. ಸ್ವಪಕ್ಷೀಯರ ವಿರುದ್ಧವೇ ಹನಿಟ್ರ್ಯಾಪ್ ಮಾಡಿ ಬ್ಲಾಕ್‌ಮೇಲ್ ಮಾಡುವ ಪ್ರಯತ್ನಗಳು ನಡೆದಿವೆ ಎಂದು ದೂರಲಾಗುತ್ತಿದೆ.
ಈ ಹಿಂದೆ ಬಿಜೆಪಿಯಲ್ಲಿ ಮುನಿರತ್ನ ವಿರುದ್ಧ ಈ ರೀತಿಯ ಆರೋಪಗಳು ಕೇಳಿಬಂದಿದ್ದವು. ಬಿಜೆಪಿಯ ನಾಯಕರ ವಿರುದ್ಧವೇ ಹನಿಟ್ರ್ಯಾಪ್ ಪ್ರಯತ್ನ ಹಾಗೂ ಎಚ್‌ಐವಿ ಸೋಂಕಿತರನ್ನು ಬಳಸಿಕೊಂಡು ಜೈವಿಕ ಯುದ್ಧ ಮಾದರಿಯ ಕಾರ್ಯಾಚರಣೆಗಳು ನಡೆದಿದ್ದವು ಎಂಬ ಆರೋಪಗಳಿವೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಪರಸ್ಪರ ಕೆಸರೆರಚಾಟ ನಡೆಯುತ್ತಿದೆ. ಕಾಂಗ್ರೆಸ್‌ನಲ್ಲಿ ಅನುಮಾನ, ಅಸಮಾಧಾನ, ಆಕ್ರೋಶಗಳು ತೀವ್ರ ಮಟ್ಟಕ್ಕೆ ತಲುಪಿವೆ.
ಸಿದ್ದರಾಮಯ್ಯ ಅವರ ಬಣದಲ್ಲಿನ ಸಚಿವರು ಪ್ರತ್ಯೇಕ ಸಭೆ ನಡೆಸಿ ಉಪಮುಖ್ಯಮಂತ್ರಿ ಹುದ್ದೆಗಳಿಗೆ ಪ್ರತ್ಯೇಕ ಕಾರ್ಯಾಚರಣೆ ನಡೆಸಿದೆ. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಯ ಸೂತ್ರಗಳು ಚರ್ಚೆಯಾದವು. ಆರೋಪಗಳು-ಪ್ರತ್ಯಾರೋಪಗಳು ತೀವ್ರವಾದಾಗ ಹೈಕಮಾಂಡ್ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿತು.
ಮುಂದುವರೆದ ಬೆಳವಣಿಗೆಯಲ್ಲಿ ಕೆ.ಎನ್.ರಾಜಣ್ಣ ಅವರು ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಬದಲಾಯಿಸಬೇಕು ಎಂದು ಲಾಬಿ ನಡೆಸಿದ್ದರು. ಸತೀಶ್ ಜಾರಕಿಹೊಳಿ ಸೇರಿದಂತೆ ಹಲವಾರು ಮಂದಿ ಇದಕ್ಕೆ ಬೆಂಬಲವಾಗಿದ್ದರು. ಆದರೆ ಹೈಕಮಾಂಡ್ ಇವರ ಮಾತಿಗೆ ಸೊಪ್ಪು ಹಾಕಿಲ್ಲ.ಕಾಲಾನಂತರ ಈಗ ಹನಿಟ್ರ್ಯಾಪ್ ಪ್ರಕರಣ ಡಿ.ಕೆ.ಶಿವಕುಮಾರ್‌ರವರನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.
ಮೂಲಗಳ ಪ್ರಕಾರ, ಅಧಿಕಾರ ಹಂಚಿಕೆಯ ಸೂತ್ರದ ಪ್ರಸ್ತಾಪ ಬರುವ ವೇಳೆಗೆ ನೈತಿಕತೆಯ ಪ್ರಶ್ನೆಯನ್ನು ಮುಂದಿಡಲು ಹನಿಟ್ರ್ಯಾಪ್ ಪ್ರಕರಣ ಬಳಕೆಯಾಗುತ್ತಿದೆ ಎಂಬ ಆರೋಪಗಳಿವೆ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ದೆಹಲಿಗೆ ಭೇಟಿ ನೀಡಿದ್ದು ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಿಗೆ ಸುದೀರ್ಘ ವಿವರಣೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಒಬ್ಬರನ್ನೊಬ್ಬರು ಕಾಲೆಳೆಯುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೈಕಮಾಂಡ್ ನಾಯಕರೂ ಕೂಡ ಅಸಹಾಯಕ ಸ್ಥಿತಿ ತಲುಪಿದ್ದಾರೆ. ಯಾರ ಮಾತನ್ನು ಯಾರೂ ಕೇಳದಂತೆ ಒಟ್ಟಾರೆ ತಮ ಅಸ್ತಿತ್ವಕ್ಕಾಗಿ ಸಂಘರ್ಷಗಳ ಮೊರೆ ಹೋಗಿದ್ದಾರೆ.ಜನ 135 ಸ್ಥಾನಗಳನ್ನು ಗೆಲ್ಲಿಸಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ನಡೆಸಲು ಅವಕಾಶ ನೀಡಿದ ಹೊರತಾಗಿಯೂ ಒಳಜಗಳಗಳು ಪಕ್ಷವನ್ನು ಸಾರ್ವಜನಿಕವಾಗಿ ಅನುಮಾನದಿಂದ ನೋಡುವಂತಹ ಪರಿಸ್ಥಿತಿ ತಂದಿಟ್ಟಿವೆ.