ನವದೆಹಲಿ, ಮಾ.21 – ಹನಿಟ್ರ್ಯಾಪ್ ಪ್ರಕರಣ ಇಡೀ ದೇಶದಲ್ಲಿ ಕರ್ನಾಟಕದ ಮರ್ಯಾದೆಯನ್ನು ಹಾಳು ಮಾಡಿದೆ. ರಾಜ್ಯದಲ್ಲಿ ನೈತಿಕತೆ ಕಳೆದುಕೊಂಡಿರುವ ಕ್ರಿಮಿನಲ್ ಕ್ಯಾಬಿನೆಟ್ ರಾಜ್ಯದಲ್ಲಿದೆ. ಈ ಪ್ರಕರಣ ಮುಖ್ಯಮಂತ್ರಿಗಳ ಮೂಗಿನ ನೇರಕ್ಕೆ ನಡೆದಿರುವುದರಿಂದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿಕಾರದ ಲಾಲಸೆಯಿಂದ ಕಾಂಗ್ರೆಸ್ ಪಕ್ಷ ಆಡಳಿತವನ್ನು ನೈತಿಕ ಅಧಪತನಕ್ಕೆ ತೆಗೆದುಕೊಂಡು ಹೋಗಿದೆ. ಈ ಸರ್ಕಾರದ ಅವಧಿಯಲ್ಲಿ ಎರಡು ವರ್ಷದಲ್ಲಿ ಸುಮಾರು ಹತ್ತು ಹಗರಣಗಳು ಹೊರಗೆ ಬಂದಿವೆ. ಎಲ್ಲಿ ಕೈ ಹಾಕಿದರೂ ಅಲ್ಲಿ ಹಗರಣ ಸಿಗುತ್ತವೆ. ಹೀಗಾಗಿ ವಿಧಾನಸಭೆಯಲ್ಲಿ ನೈತಿಕ ಅಧಪತನ ನೋಡುತ್ತಿದ್ದೇವೆ.
ಇದುವರೆಗೂ ರಾಜ್ಯದಲ್ಲಿ ಮನಿ ಕ್ರೈಸಿಸ್ ಇತ್ತು ಈಗ ಹನಿ ಕ್ರೈಸಿಸ್ ಶುರುವಾಗಿದೆ. ರಾಜ್ಯ ಸರ್ಕಾರ ಆರ್ಥಿಕವಾಗಿಯೂ ದಿವಾಳಿಯಾಗಿದೆ. ನೈತಿಕವಾಗಿಯೂ ದಿವಾಳಿಯಾಗಿದೆ. ಒಬ್ಬ ಸಂಪುಟ ಸಚಿವರು ವಿಧಾನಸಭೆಯಲ್ಲಿ ತಮ್ಮ ಮೇಲೆ ಹನಿ ಟ್ರ್ಯಾಪ್ ಮಾಡುವ ಪ್ರಯತ್ನ ನಡೆದಿತ್ತು ಎಂದು ಹೇಳುವ ಸ್ಥಿತಿಗೆ ಬಂದಿದ್ದಾರೆ. ಕಳೆದ ಹದಿನೈದು ದಿನಗಳಿಂದ ವಿಧಾನಸಭೆಯ ಮೊಗಸಾಲೆಯಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಮುಖ್ಯಮಂತ್ರಿಗಳು ಸುಮ್ಮನೆ ನೋಡುತ್ತ ಕೂತಿದ್ದಾರೆ. ಇವತ್ತು ಅದು ಸ್ಪೋಟಗೊಂಡಿದೆ. ಸಚಿವ ಸಂಪುಟದಲ್ಲಿಯೇ ಈ ರೀತಿ ನಡೆಯುತ್ತಿರುವಾಗ ಈ ಸಚಿವ ಸಂಪುಟವನ್ನು ಏನೆಂದು ಕರೆಯಬೇಕು. ರಾಜ್ಯವನ್ನು ಆಳುವ ನೈತಿಕತೆ ಕಳೆದುಕೊಂಡಿರುವ ಕ್ರಿಮಿನಲ್ ಕ್ಯಾಬಿನೆಟ್ ರಾಜ್ಯದಲ್ಲಿದೆ ಎಂದು ಹೇಳಿದರು.