Monday, March 31, 2025
Homeಇದೀಗ ಬಂದ ಸುದ್ದಿKarnataka Assembly : ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ಹೈಡ್ರಾಮಾ, ಕೈಕೈ ಮಿಲಾಯಿಸುವ ಮಟ್ಟಕ್ಕೆ ಉದ್ವಿಗ್ನ ವಾತಾವರಣ

Karnataka Assembly : ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ಹೈಡ್ರಾಮಾ, ಕೈಕೈ ಮಿಲಾಯಿಸುವ ಮಟ್ಟಕ್ಕೆ ಉದ್ವಿಗ್ನ ವಾತಾವರಣ

Honeytrap drama in the Assembly, creating a tense atmosphere

ಬೆಂಗಳೂರು,ಮಾ.21 – ಅಲ್ಪಸಂಖ್ಯಾತರಿಗೆ ಗುತ್ತಿಗೆಯಲ್ಲಿ ಶೇ.4ರಷ್ಟು ಮೀಸಲಾತಿ ನೀಡಿರುವುದನ್ನು ವಿರೋಧಿಸಿ, ಹನಿಟ್ರಾಪ್ ಪ್ರಕರಣವನ್ನು ಸಿಬಿಐ ಅಥವಾ ಹೈಕೋರ್ಟ್ ನ್ಯಾಯಾಧೀಶರಿಂದ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಒತ್ತಾಯಿಸಿ ವಿರೋಧ ಪಕ್ಷಗಳು ಸದನದಲ್ಲಿ ಪ್ರತಿಭಟನೆ ನಡೆಸಿದ್ದರಿಂದ ವಿಧಾನಸಭೆಯಲ್ಲಿ ಕೈ-ಕೈ ಮಿಲಾಯಿಸುವ ಮಟ್ಟಕ್ಕೆ ತಲುಪಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಬಜೆಟ್ ಮೇಲೆ ನಡೆದ ಸುಧೀರ್ಘ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಬೆಳಿಗ್ಗೆ ಉತ್ತರ ನೀಡಲು ಮುಂದಾದರು. ಈ ವೇಳೆ ಬಿಜೆಪಿ-ಜೆಡಿಎಸ್ ಶಾಸಕರು, ನಿನ್ನೆ ವಿಧಾನಸಭೆಯಲ್ಲಿ ಸಚಿವ ಕೆ.ಎನ್.ರಾಜಣ್ಣ ಬಹಿರಂಗಪಡಿಸಿದ ಹನಿಟ್ರ್ಯಾಪ್ ಪ್ರಕರಣವನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿಗಳಿಂದ ಸ್ಪಷ್ಟನೆ ಬಯಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕರಣದ ತನಿಖೆ ನಡೆಸುವುದಾಗಿ ಹೇಳಿದರು. ಅದರ ಹೊರತಾಗಿಯೂ ವಿರೋಧ ಪಕ್ಷಗಳ ಶಾಸಕರು ಸಭಾಧ್ಯಕ್ಷರ ಮುಂದಿನ ಬಾವಿಗಿಳಿದು ಧರಣಿ ಆರಂಭಿಸಿದರು.

ಮುಖ್ಯಮಂತ್ರಿಯವರು ಬಜೆಟ್ ಮೇಲಿನ ಚರ್ಚೆಗೆ ಉತ್ತರ ಓದಲು ಆರಂಭಿಸಿದಾಗ, ವಿರೋಧ ಪಕ್ಷಗಳ ಶಾಸಕರು ಧಿಕ್ಕಾರ. ಘೋಷಣೆಗಳನ್ನು ಕೂಗಿ ಉತ್ತರಕ್ಕೆ ಅಡ್ಡಿಪಡಿಸಲು ಮುಂದಾದರು. ಅದಕ್ಕೆ ಸೊಪ್ಪು ಹಾಕದ ಸಿದ್ದರಾಮಯ್ಯ ಉತ್ತರ ನೀಡುವುದನ್ನು ಮುಂದುವರೆಸಿದರು.

ಲಿಖಿತ ಉತ್ತರ ಓದಿದ ಬಳಿಕ ಬಜೆಟ್‌ ಅಂಗೀಕಾರ ನೀಡುವಂತೆ ಸದನಕ್ಕೆ ಮನವಿ ಸಲ್ಲಿಸಿದರು.ಸಭಾಧ್ಯಕ್ಷ ಯು.ಟಿ.ಖಾದರ್ 2025-26ನೇ ಸಾಲಿನ ಬಜೆಟ್‌ನ ಹಣಕಾಸು ಮಸೂದೆ ಅಂಗೀಕರಿಸಲು ಮುಂದಾದಾಗ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ರಾಜ್ಯದ ತೆರಿಗೆದಾರರ ಹಣವನ್ನು ಕಾಂಗ್ರೆಸ್ ಸರ್ಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಮುಸ್ಲಿಮರಿಗೆ ಗುತ್ತಿಗೆ ಕಾಮಗಾರಿಯಲ್ಲಿ ಶೇ.4ರಷ್ಟು ಮೀಸಲಾಯಿತಿ ನೀಡುತ್ತಿರುವುದು ಸರಿಯಲ್ಲ, ಇದು ರಾಜ್ಯಕ್ಕೆ ಮಾಡಿರುವ ದ್ರೋಹ. ಈ ಅಪರಾಧವನ್ನು ಜನ ಕ್ಷಮಿಸುವುದಿಲ್ಲ. ಸಚಿವರು ಹನಿಟ್ರಾಪ್ ಬಗ್ಗೆ ಆರೋಪ ಮಾಡಿದ್ದಾಗ್ಯೂ ಸರ್ಕಾರ ಅದನ್ನು ಕಡೆಗಣಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಬಜೆಟ್‌ನ್ನೊಳಗೊಂಡ ವಿತ್ತೀಯ ವಿಧೇಯಕ ಅಂಗೀಕಾರವಾಗಿದೆ ಎಂದು ಸಭಾಧ್ಯಕ್ಷರು ಪ್ರಕಟಿಸುತ್ತಿದ್ದಂತೆ ಬಿಜೆಪಿಯ ವಿರೋಧ ಪಕ್ಷದ ಶಾಸಕರು ಕಾಗದಪತ್ರಗಳನ್ನು ಹರಿದು ತೂರಲಾರಂಭಿಸಿದರು.ಆರ್.ಅಶೋಕ್ ಅವರು ತಮ್ಮ ಪಕ್ಷದ ಶಾಸಕರಿಗೆ ಸಭಾಧ್ಯಕ್ಷರ ಪೀಠದ ಬಳಿ ಹೋಗಲು ಪ್ರಚೋದಿಸಿದರು. ಬಿಜೆಪಿಯ ಶಾಸಕರು ಸಭಾಧ್ಯಕ್ಷರ ಪೀಠದ ಬಳಿ ಧಾವಿಸಿ ಅಲ್ಲಿಯೇ ನಿಂತು ಕಾಗದಪತ್ರಗಳನ್ನು ಹರಿದು ತೂರಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ದಂಡನಾಯಕರು ಸ್ಪೀಕರ್ ರಕ್ಷಣೆಗೆ ಹತ್ತಿರ ಬರಲು ಪ್ರಯತ್ನಿಸಿದರು. ಆದರೆ ಸ್ಪೀಕರ್ ಅವರೇ ದಂಡ ನಾಯಕರನ್ನು ಮುಂದೆ ಬರದಂತೆ ಸೂಚನೆ ನೀಡಿದರು. ಬಿಜೆಪಿಯ ಸಿ.ಕೆ.ರಾಮಮೂರ್ತಿ ಸೇರಿದಂತೆ ಹಲವು ಶಾಸಕರು ಸಿಡಿಗಳನ್ನು ಹಿಡಿದು ಸಭಾಧ್ಯಕ್ಷರ ಬಳಿಯೇ ನಿಂತು ಘೋಷಣೆ ಕೂಗುತ್ತಿದ್ದರು.

ಸಭಾಧ್ಯಕ್ಷರ ಪೀಠ ಬಿಟ್ಟು ಕೆಳಗಿಳಿಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ಭಾರೀ ಸೂಚನೆ ನೀಡಿದರು. ವಿಧಾನಸಭೆಯ ಜಂಟಿ ಕಾರ್ಯದರ್ಶಿಯವರು ಸಭಾಧ್ಯಕ್ಷರ ಬಳಿ ಬಂದು ಶಾಸಕರನ್ನು ಕೆಳಗಿಳಿಸುವಂತೆ ಸ್ಪೀಕರ್ ಅವರಿಗೆ ಸಭಾಧ್ಯಕ್ಷ ಸೂಚನೆ ಹೊರತಾಗಿಯೂ ಶಾಸಕರು ಕೆಳಗಿಳಿಯದೆ ಅಲ್ಲೇ ನಿಂತಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಶಾಸಕರು ಕೆಳಗೆ ಬರಬೇಕು. ಇಲ್ಲವಾದರೆ ಮಾರ್ಷಗಳು ತಳ್ಳುತ್ತಾರೆ. ನಿಮಗೆ ತಳ್ಳಿಸಿಕೊಳ್ಳಲು ಆಸೆಯೇ? ಎಂದು ಈ ಹಂತದಲ್ಲಿ ಸಭಾಧ್ಯಕ್ಷರು ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡುವುದಾಗಿ ಪ್ರಕಟಿಸಿದರು. ಆದರೆ ಬಾಕಿ ಇರುವ ವಿಧೇಯಕಗಳ ಅಂಗೀಕಾರವನ್ನು ಪೂರ್ಣಗೊಳಿಸಿದ ನಂತರ ಕಲಾಪ ಮುಂದೂಡುವಂತೆ ಮುಖ್ಯಮಂತ್ರಿ ಹಾಗೂ ಸಚಿವರು ಸಲಹೆ ನೀಡಿದರು.ಇತರೆ ಹಣಕಾಸು ವಿಧೇಯಕಗಳನ್ನು ಮುಖ್ಯಮಂತ್ರಿ ಮಂಡಿಸಿ, ಅಂಗೀಕಾರಕ್ಕೆ ಮನವಿ ಮಾಡಿದಾಗ ವಿರೋಧ ಪಕ್ಷಗಳಿಂದ ವ್ಯಾಪಕ ಆಕ್ರೋಶ ಕೇಳಿಬಂತು. ಕಾಗದಪತ್ರಗಳನ್ನು ಎತ್ತಂದರತ್ತ ತೂರಲಾರಂಭಿಸಿದರು.

ಕೆಲವು ಶಾಸಕರು ಸಭಾಧ್ಯಕ್ಷರ ಪೀಠದ ಕಡೆಗೆ ಹಾಗೂ ಅಡಳಿತ ಪಕ್ಷದವರ ಕಡೆಗೆ ಕಾಗದಪತ್ರಗಳನ್ನು ಎಸೆಯುತ್ತಿದ್ದರು. ಮುಖ್ಯಮಂತ್ರಿಯವರಿಗೆ ಕೆಲವು ಕಾಗದಪತ್ರಗಳು ತಗುಲಿದವು.ಆಗ ಸಚಿವರಾದ ಭೈರತಿ ಸುರೇಶ್, ಶಾಸಕರಾದ ರಂಗನಾಥ್, ಕೆ.ಎಂ.ಶಿವಲಿಂಗೇಗೌಡ ಸೇರಿದಂತೆ ಹಲವರು ಮುಖ್ಯಮಂತ್ರಿಯವರ ಸುತ್ತಲೂ ಕಾವಲಿಗೆ ನಿಂತರು. ಕಾಂಗ್ರೆಸ್‌ನ ಇತರ ಶಾಸಕರು ಮುಖ್ಯಮಂತ್ರಿಯವರ ಹಿಂಭಾಗದ ಸಾಲುಗಳಲ್ಲಿ ಬಂದು ಜಮಾಯಿಸಿದರು. ಇನ್ನು ಕೆಲವು ಶಾಸಕರು ತಮ್ಮ ಸ್ಥಾನದಲ್ಲೇ ಕುಳಿತು ಮೂಕ ಪ್ರೇಕ್ಷಕರಂತೆ ಎಲ್ಲವೂ ನೋಡುತ್ತಿದ್ದರು.ಮುಖ್ಯಮಂತ್ರಿಯವರ ಬಳಿ ನಿಂತಿದ್ದ ಕಾಂಗ್ರೆಸ್‌ ಸಚಿವರು, ಶಾಸಕರು ಹಾಗೂ ವಿರೋಧಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ನೀವೇನೂ ರೌಡಿಗಳೇ? ಹೊಡೆಯುತ್ತೀರಾ ಬನ್ನಿ ನೋಡೋಣ ಎಂದೆಲ್ಲಾ ವಾಗ್ವಾದಗಳು ವಿನಿಮಯವಾದವು. ಪರಸ್ಪರ ತೋಳೇರಿಸಿರುವ ಪರಿಸ್ಥಿತಿ ನಿರ್ಮಾಣವಾಯಿತು. ಅತ್ತ ಸ್ಪೀಕರ್ ಅವರ ಮುಖಕ್ಕೆ ಕಾಗದಪತ್ರಗಳು ಬಡಿಯದಂತೆ ಮಾರ್ಷಲ್‌ಗಳು ಕೈ ಅಡ್ಡ ಇಟ್ಟು ತಡೆಯುತ್ತಿದ್ದರು.

ಗದ್ದಲ ಜೋರಾದಾಗ ವಿರೋಧ ಪಕ್ಷಗಳ ಎಲ್ಲಾ ಶಾಸಕರು ಸದನದ ಬಾವಿಯಲ್ಲಿ ಜಮಾಯಿಸಿ ಜೋರ್ ಗಲಾಟೆ ಮಾಡಿದರು. ಸದನದ ಹೊರಗಿದ್ದ ಎಲ್ಲಾ ಮಾರ್ಷಗಳು ಒಳಗೆ ಧಾವಿಸಿ ರಕ್ಷಣೆಗೆ ನಿಂತರು.ಇತ್ತ ಮುಖ್ಯಮಂತ್ರಿಗಳ ಬಳಿಯೂ ಗದ್ದಲ ಹೆಚ್ಚಾದಾಗ ಒಂದು ಹಂತದಲ್ಲಿ ಮುಖ್ಯಮಂತ್ರಿ ಬಳಿ ನಿಂತಿದ್ದ ಸಚಿವ ಭೈರತಿ ಸುರೇಶ್ ಸಿಟ್ಟಿನಿಂದ ಕಿರುಪುಸ್ತಕವನ್ನು ವಿರೋಧ ಪಕ್ಷಗಳತ್ತ ಎಸೆದು ಆಕ್ರೋಶ ಹೊರಹಾಕಿದರು.

ಕಾಲುನೋವಿನಿಂದ ಕುಳಿತುಕೊಂಡೇ ವಿಧೇಯಕಗಳ ಅಂಗೀಕಾರಕ್ಕೆ ಮನವಿ ಮಾಡುತ್ತಿದ್ದ ಮುಖ್ಯಮಂತ್ರಿಯವರು ವಿರೋಧ ಪಕ್ಷಗಳ ನಡವಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ವಿಧಾನಸಭೆ ಸಚಿವಾಲಯದ ಮಹಿಳಾ ಸಿಬ್ಬಂದಿಗಳು ಗದ್ದಲದಲ್ಲಿ ಕುಳಿತುಕೊಳ್ಳಲಾಗದೆ ತಮ್ಮ ಕುರ್ಚಿಗಳಿಂದ ಎದ್ದು ಹೊರಬಂದರು. ಮಹಿಳಾ ಶಾಸಕರಿಯರೂ ಕೂಡ ಆತಂಕಕ್ಕೆ ಒಳಗಾಗಿ ನಿಂತಿದ್ದು ಕಂಡುಬಂತು.

ಆಡಳಿತ ಪಕ್ಷದ ಎಲ್ಲಾ ಶಾಸಕರು ಸಭಾಧ್ಯಕ್ಷರ ಮುಂದಿನ ಬಾವಿಯ ಸುತ್ತಲೂ ಜಮಾಯಿಸಿದರು. ಗದ್ದಲದ ನಡುವೆಯೂ ಇಂಧನ ಸಚಿವರ ಬಳಿ ಚರ್ಚೆ ನಡೆಸುತ್ತಿದ್ದ ಹಿರಿಯ ಶಾಸಕ ಎಚ್.ಡಿ.ರೇವಣ್ಣ ತಮ್ಮ ಸ್ವಸ್ಥಾನಕ್ಕೆ ಬರಬೇಕಾಯಿತು. ಗದ್ದಲದ ನಡುವೆಯೂ ಹಣಕಾಸು ವಿಧೇಯಕ ಹಾಗೂ ಇತರ ಮಸೂದೆಗಳು ಧ್ವನಿ ಮತದ ಮೂಲಕ ಅಂಗೀಕಾರಗೊಂಡವು. ಗದ್ದಲ ಮಿತಿಮೀರಿದಾಗ ಅನಿವಾರ್ಯವಾಗಿ ಕಲಾಪವನ್ನು ಸಭಾಧ್ಯಕ್ಷರು ಮುಂದೂಡಿದರು.

RELATED ARTICLES

Latest News