ಬೆಂಗಳೂರು, ಅ.9- ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಮುನಿರತ್ನ ಅವರು ರಾಜ್ಯದ ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಹನಿಟ್ರ್ಯಾಪ್ ನಡೆಸಿದ್ದು, ಭದ್ರತೆ ಒದಗಿಸಿದರೆ ವಿಡಿಯೋ ಬಿಡುಗಡೆ ಮಾಡುವುದಾಗಿ ಸಂತ್ರಸ್ತೆ ಸೋಟಕ ಹೇಳಿಕೆ ನೀಡಿದ್ದಾರೆ.
ಈ ಇಬ್ಬರು ಯಾರು ಮಾಜಿ ಸಿ.ಎಂ ಗಳು ಎಂಬುದನ್ನು ಬಹಿರಂಗಪಡಿಸಿಲ್ಲವಾದರೂ ನನಗೆ ರಾಜ್ಯ ಸರ್ಕಾರ ಸೂಕ್ತವಾದ ಭದ್ರತೆ ನೀಡಿದರೆ ವಿಡಿಯೋ ಮತ್ತು ಸಂಬಂದಿಸಿದ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಅಚ್ಚರಿಯ ಹೇಳಿಕೆಯನ್ನು ಕೊಟ್ಟಿದ್ದಾರೆ.
ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿರುವ ಅವರು, ನನ್ನ ಮೇಲೆ ಅತ್ಯಾಚಾರ ನಡೆಸಿರುವ ಮುನಿರತ್ನ, ರಾಜ್ಯದ ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಹನಿಟ್ರ್ಯಾಪ್ ನಡೆಸಿಯೇ ಸಚಿವರಾಗಿದ್ದರು. ನನಗೆ ಜೀವ ಬೆದರಿಕೆ ಇರುವ ಕಾರಣ ಮಾಜಿ ಸಿಎಂಗಳ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನನ್ನ ಬಳಿ ಸೂಕ್ತವಾದ ದಾಖಲೆಗಳಿವೆ. ಇದನ್ನು ಎಸ್‌ಐಟಿಗೆ ಕೊಡಲು ನಾನು ಸಿದ್ಧನಿದ್ದೇನೆ. ಆದರೆ ಸರ್ಕಾರ ಭದ್ರತೆ ನೀಡುವ ವಿಷಯದಲ್ಲಿ ಸ್ಪಷ್ಟನೆ ಕೊಟ್ಟಿಲ್ಲ ಎಂದು ಹೇಳಿದರು. ನನಗೆ ಮುನಿರತ್ನ ಅವರೇ ತಮ್ಮ ಮೊಬೈಲ್ ಕೊಟ್ಟು ಕಳುಹಿಸಿದ್ದರು. ಅವರ ಸಂಭಂದಿಕ ಸುಧಾಕರ್ ಎಂಬುವರ ಮೂಲಕ ಹನಿಟ್ರ್ಯಾಪ್ ಮಾಡಿಸಿದ್ದಾರೆ.
ಇದರ ದತ್ತಾಂಶವನ್ನು ನಾನು ಸಂಗ್ರಹಿಸಿಟ್ಟುಕೊಂಡಿದ್ದೇನೆ . ನನ್ನ ವೈಯಕ್ತಿಕ ಮೊಬೈಲ್ ಬಳಸಲು ಸಾಧ್ಯವಾಗುತ್ತಿಲ್ಲ. ನನಗೆ ಹೆದರಿಸಿ, ಬೆದರಿಸಿ ಹನಿಟ್ರ್ಯಾಪ್ ಮಾಡಿಸಿರುವ ಸಾಕ್ಷ್ಯಾಧಾರಗಳಿವೆ. ನಾನಾಗಿಯೇ ಹನಿಟ್ರ್ಯಾಪ್ ಮಾಡಿಸಿಲ್ಲ. ನನ್ನ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು ಎಂದು ಅಲ್ಲಗೆಳೆದರು.
ನನ್ನ ಜೀವಕ್ಕೆ ಏನಾದರೂ ತೊಂದರೆಯಾದರೆ ಅದಕ್ಕೆ ನೇರವಾಗಿ ಮುನಿರತ್ನ ಅವರೇ ಕಾರಣಕರ್ತರು. ದೂರು ವಾಪಸ್ ತೆಗೆದುಕೊಳ್ಳಲು ಜೀವಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ನಾನು ಪೊಲೀಸ್ ಠಾಣೆಯಲ್ಲೂ ದೂರು ಕೊಟ್ಟಿದ್ದೇನೆ ಎಂದು ಹೇಳಿದರು.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿ ಮಾಡಲು 10 ನಿಮಿಷಗಳ ಕಾಲ ಸಮಯಾವಕಾಶ ಕೇಳಿದ್ದೇನೆ. ಅವರ ಬಳಿ ಕೆಲವು ಮಾಹಿತಿಗಳನ್ನು ಹಂಚಿಕೊಳ್ಳಬೇಕು. ಇದಕ್ಕೆ ಅವಕಾಶ ಮಾಡಿಕೊಡುತ್ತಾರೆಂಬ ನಂಬಿಕೆ ಇದೆ. ಮುನಿರತ್ನ ಇಷ್ಟೆಲ್ಲ ಮಾಡಬಾರದ್ದನ್ನು ಮಾಡಿದರು ಇನ್ನು ಮುಂದಾದರೂ ಅವರನ್ನು ದೂರ ಇಡಬೇಕಲ್ಲವೇ ಎಂದು ಸಂತ್ರಸ್ತೆ ಪ್ರಶ್ನೆ ಮಾಡಿದರು.
ನಮ್ಮಂಥವರ ಅಸಹಾಯಕತೆ ಬಳಸಿಕೊಂಡು ಮಾಜಿ ಸಿಎಂ, ಸಚಿವರು, ಮಾಜಿ ಸಿಎಂ, ಶಾಸಕರು ಹನಿಟ್ರ್ಯಾಪ್ ವೀಡಿಯೋ ಮಾಡಿಸಿದ್ದಾರೆ. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹನಿಟ್ರ್ಯಾಪ್ ಮಾಡಿಸಿದ್ದಾರೆ. ಎಸಿಪಿ, ಸಿಪಿಐ ಅಧಿಕಾರಿಗಳ ಹನಿಟ್ರ್ಯಾಪ್ ಮಾಡಿಸಿದ್ದಾರೆ. ನನ್ನ ಹಾಗೂ ಮುನಿರತ್ನ ಬ್ರೈನ್ ಮ್ಯಾಪಿಂಗ್ ಮಾಡಿಸಲಿ ಎಂದು ಅಶ್ವತ್ಥ ನಾರಾಯಣ, ಅಶೋಕ್ ಅವರಿಗೆ ಸವಾಲು ಹಾಕಿದರು.
ಮುನಿರತ್ನ ಅವರು ಹೆಚ್‌ಐವಿ ಯುವತಿ ಬಳಸಿ ರಾಜಕಾರಣಿಗಳ ಹನಿಟ್ರ್ಯಾಪಿಂಗ್ ಮಾಡಿಸಿದ್ದಾರೆ. ರೂಮ್‌ನಲ್ಲಿ ಕ್ಯಾಮರಾ ಅಳವಡಿಸಿಕೊಳ್ಳುತ್ತಾರೆ. ನನ್ನಂಥ ಹಲವರನ್ನು ಬಳಸಿಕೊಂಡು ಹನಿಟ್ರ್ಯಾಪ್ ಮಾಡಿದ್ದಾರೆ. ಮುನಿರತ್ನ ಅತ್ಯಂತ ಪ್ರಭಾವಶಾಲಿ ಎಂದು ದೂರಿದರು.
ಮುನಿರತ್ನ ಅವರ ಬಳಿ ಯಾವುದೇ ಮಾಧ್ಯಮಗಳ ಬಳಿಯೂ ಇಲ್ಲದಂತಹ ತುಂಬಾ ಅಡ್ವಾನ್ಸ್ ಕ್ಯಾಮೆರಾಗಳಿವೆ. ಆ ಕ್ಯಾಮೆರಾಗಳನ್ನು ಬಳಸಿ ಬೇರೆ ಮಹಿಳೆಯರನ್ನು ಬಳಸಿಕೊಂಡು ಇಬ್ಬರು ಮಾಜಿ ಮುಖ್ಯಮಂತ್ರಿಗಳ ಹನಿಟ್ರ್ಯಾಪ್ ಮಾಡಿ ಪೆನ್ ಡ್ರೈವ್ ಅನ್ನು ಇಟ್ಟುಕೊಂಡಿದ್ದಾರೆ. ಆದರೆ ಹನಿಟ್ರ್ಯಾಪ್ ಮಾಡುವುದಕ್ಕೆ ನನ್ನನ್ನು ಬಳಕೆ ಮಾಡಿಕೊಂಡಿಲ್ಲ. ಬೇರೆ ಮಹಿಳೆಯರನ್ನು ಬಳಸಿಕೊಂಡಿದ್ದಾರೆ ಎಂದು ತಿಳಿಸಿದರು.
ಇದರಲ್ಲಿ ಯಾವುದೇ ಸಿನಿಮಾ ನಟಿಯರು ಇಲ್ಲ. ಇನ್ನು ಹನಿಟ್ರ್ಯಾಪ್ ಗೆ ಬಳಸಿಕೊಳ್ಳಲಾದ ಸುಮಾರು ಐದಾರು ಸಂತ್ರಸ್ತ ಮಹಿಳೆಯರು ಹೆದರಿಕೊಂಡು ಸುಮ್ಮನಾಗಿದ್ದಾರೆ. ಅವರು ಕೂಡ ನನ್ನಂತೆಯೇ ಹೊರಗೆ ಬಂದರೆ ಎಲ್ಲ ಸತ್ಯಗಳೂ ಹೊರಗೆ ಬರಲಿವೆ. ಅನೇಕ ಮಹಿಳೆಯರನ್ನು ಹಲವು ರಾಜಕೀಯ ನಾಯಕರ ಮೇಲೆ ಹನಿಟ್ರ್ಯಾಪ್ ಮಾಡಲು ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
6 ಮಂದಿಗೆ ಏಡ್ಸ್ ರೋಗಿಗಳಿಂದ ಹನಿಟ್ರ್ಯಾಪ್ :
ಮುನಿರತ್ನ ಅವರು ಬರೋಬ್ಬರಿ 6 ಮಂದಿ ಏಡ್ಸ್ ರೋಗವುಳ್ಳ ಮಹಿಳೆಯರನ್ನು ಬಳಸಿಕೊಂಡು ಹನಿಟ್ರ್ಯಾಪ್ ಮಾಡಿಸಿದ್ದಾರೆ. ಅದರಲ್ಲಿ ಶಾಸಕರು, ಪೊಲೀಸ್ ಅಧಿಕಾರಿಗಳು, ಸರ್ಕಾರದ ಉನ್ನತ ಅಧಿಕಾರಿಗಳು ಕೂಡ ಇದ್ದಾರೆ. ಇನ್ನು ಸುಮಾರು 20 ರಿಂದ 30 ರಾಜಕೀಯ ಮುಖಂಡರನ್ನು ಹನಿಟ್ರ್ಯಾಪ್ ಮಾಡಿ ಪೆನ್ ಡ್ರೈವ್ ಇಟ್ಟುಕೊಂಡಿದ್ದಾರೆ ಎಂದು ಸಂತ್ರಸ್ತೆ ತಿಳಿಸಿದರು.
ಈ ಕೇಸಿನ ತನಿಖೆಗೆ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿದೆ. ಆದರೆ ಎಸ್‌ಐಟಿ ಅವರು ಯಾರ‍್ಯಾರ ಮೇಲೆ ಹನಿಟ್ರ್ಯಾಪ್ ಆಗಿದೆ ಎಂಬ ಮಾಹಿತಿ ಕೇಳಿಲ್ಲ. ಸರ್ಕಾರದಿಂದ ಭದ್ರತೆ ಸಿಕ್ಕಲ್ಲಿ ಹಾಗೂ ಎಸ್‌ಐಟಿಯವರು ಮಾಜಿ ಸಿಎಂಗಳ ಹನಿಟ್ರ್ಯಾಪ್ ವಿಡಿಯೋ ಕೇಳಿದರೆ ಅದನ್ನು ಅವರ ಮುಂದಿಡುತ್ತೇನೆ ಎಂದರು.
ಹನಿಟ್ರ್ಯಾಪಿಗೆ ಬಳಸಲಾದ ಮೊಬೈಲ್‌ಗಳನ್ನು ಹಾಗೂ ಕ್ಯಾಮೆರಾಗಳನ್ನು ಅವರ ಸೋದರ ಸಂಭದಿಯೇ ಹ್ಯಾಂಡಲ್ ಮಾಡುತ್ತಿದ್ದರು ಎಂದು ಸಂತ್ರಸ್ತೆ ದೂರಿದರು.