Wednesday, March 26, 2025
Homeರಾಜ್ಯರಾಜಣ್ಣ ದೂರು ನೀಡಿದರಷ್ಟೇ ಹನಿಟ್ರ್ಯಾಪ್‌ ತನಿಖೆ : ಗೃಹಸಚಿವ ಪರಮೇಶ್ವರ್‌

ರಾಜಣ್ಣ ದೂರು ನೀಡಿದರಷ್ಟೇ ಹನಿಟ್ರ್ಯಾಪ್‌ ತನಿಖೆ : ಗೃಹಸಚಿವ ಪರಮೇಶ್ವರ್‌

Honeytrap investigation as soon as Rajanna files complaint:

ಬೆಂಗಳೂರು,ಮಾ.25– ಹನಿಟ್ರ್ಯಾಪ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವ ಕೆ.ಎನ್‌.ರಾಜಣ್ಣ ಈವರೆಗೂ ದೂರು ನೀಡಿಲ್ಲ. ದೂರು ನೀಡಿದ ಬಳಿಕ ಅಗತ್ಯ ತನಿಖೆ ನಡೆಸಲು ನಮ ಸರ್ಕಾರ ಸಿದ್ಧವಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನಿಟ್ರ್ಯಾಪ್‌ಗೆ ಸಂಬಂಧಪಟ್ಟಂತೆ ಕೆೆ.ಎನ್‌.ರಾಜಣ್ಣ ಇನ್ನೂ ದೂರು ಕೊಟ್ಟಿಲ್ಲ. ದೂರು ಕೊಟ್ಟ ಬಳಿಕ ನಮ ಇಲಾಖೆ ಕೆಲಸ ಆರಂಭಿಸುತ್ತದೆ. ದೂರು ನೀಡದ ಮುನ್ನ ನಾವು ಏನೂ ಮಾಡಲಾಗುವುದಿಲ್ಲ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನನ್ನ ಮೇಲೆ ಯಾವುದೇ ಒತ್ತಡಗಳಿಲ್ಲ. ದೂರು ನೀಡದಿರುವ ಬಗ್ಗೆ ರಾಜಣ್ಣ ಅವರೇ ಉತ್ತರ ನೀಡಬೇಕು. ನಾನು ಅವರಿಂದ ಬಲವಂತವಾಗಿ ದೂರು ಕೊಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಪ್ರಕರಣದ ತನಿಖೆ ನಡೆಸುವುದಾಗಿ ಈಗಾಗಲೇ ತಾವು ಹೇಳಿಕೆ ನೀಡಿದ್ದು, ಮುಖ್ಯಮಂತ್ರಿಯವರೂ ಅದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ದೂರು ಬಂದ ಬಳಿಕ ಯಾವ ರೀತಿಯ ತನಿಖೆ ಮಾಡಬೇಕೆಂದು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು. ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ದೆಹಲಿಗೆ ಭೇಟಿ ನೀಡಿರುವ ಹಾಗೂ ಹೈಕಮಾಂಡ್‌ಗೆ ದೂರು ಕೊಟ್ಟಿರುವ ಬಗ್ಗೆಯೂ ತಮಗೆ ಮಾಹಿತಿ ಇಲ್ಲ ಎಂದರು.

ಮೇಕೆದಾಟು ಯೋಜನೆಗೆ ಅನುಮತಿ ನೀಡುತ್ತಿಲ್ಲ ಎಂದು ತಮಿಳುನಾಡಿನ ಜಲಸಂಪನೂಲ ಸಚಿವರು ಹೇಳಿರುವ ಬಗ್ಗೆ ನಾನು ಪ್ರತಿಕ್ರಿಯಿಸಲಾಗುವುದಿಲ್ಲ. ಎಲ್ಲಾ ಇಲಾಖೆಗಳಿಗೆ ಸಂಬಂಧಪಟ್ಟಂತಹ ವಿಚಾರಗಳಿಗೆ ಪ್ರತಿಕ್ರಿಯಿಸುವ ಅರ್ಹತೆ ತಮಗಿದೆಯೇ?, ಬೇರೆ ಸಚಿವರು ತಮ ಇಲಾಖೆ ಬಗ್ಗೆ ಪ್ರತಿಕ್ರಿಯಿಸಿದರೆ ಅದರ ಪರಿಸ್ಥಿತಿ ಹೇಗಿರುತ್ತದೆ ಎಂದು ಮರು ಪ್ರಶ್ನಿಸಿದರು. ಜಲಸಂಪನೂಲ ಇಲಾಖೆಗೆ ಸಚಿವರಿದ್ದಾರೆ. ಅವರು ಪ್ರತಿಕ್ರಿಯೆ ನೀಡಬೇಕು. ಸಭೆ ಅಥವಾ ವಿಚಾರ ವಿನಿಮಯ ನಡೆದಾಗ ನಾನು ನನ್ನ ಅಭಿಪ್ರಾಯವನ್ನು ಹೇಳುತ್ತೇನೆ. ಬಹಿರಂಗವಾಗಿ ಇದರ ಬಗ್ಗೆ ಮಾತನಾಡಲು ಸಾಧ್ಯವಿಲ್ಲ ಎಂದರು.

ಒಳಮೀಸಲಾತಿ ವಿಚಾರ ಕುರಿತಂತೆ ನ್ಯಾ. ನಾಗಮೋಹನದಾಸ್‌‍ ಅವರನ್ನೊಳಗೊಂಡ ಆಯೋಗ ಮಧ್ಯಂತರ ವರದಿ ನೀಡಿ ನಿರ್ದಿಷ್ಟವಾದ ಸಲಹೆ ನೀಡಿದರೆ ಅದನ್ನು ಅನುಷ್ಠಾನಗೊಳಿಸಲು ಸಾಧ್ಯವಿದೆ ಎಂದು ತಿಳಿಸಿದರು.ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾಕಷ್ಟು ಚರ್ಚೆಗಳಾಗಿವೆ. ನ್ಯಾ. ನಾಗಮೋಹನದಾಸ್‌‍ ಸುದೀರ್ಘ ವಿವರಣೆ ನೀಡಿದ್ದಾರೆ.

2011 ರ ಜನಗಣತಿ ಉಪಯೋಗವಾಗಲಿದೆಯೇ ಎಂಬುದನ್ನು ಪರಿಶೀಲಿಸಿದ್ದಾರೆ. ಯಾರಾದರೂ ಒಳಮೀಸಲಾತಿಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಹೋದರೆ ಆಗ ಎಂಪ್ಯಾರಿಕಲ್‌ ಡಾಟಾ ಎಂಬ ಪ್ರಶ್ನೆ ಮೂಡುತ್ತದೆ. ಆ ಸಂದರ್ಭದಲ್ಲಿ ಎದುರಾಗಬಹುದಾದ ಹಿನ್ನಡೆಯನ್ನು ಅಂದಾಜಿಸಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಸಂಘಟನಾಕಾರರು ಹಾಗೂ ಹೋರಾಟಗಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಬಳಿಕವೇ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಮಧ್ಯಂತರ ವರದಿ ಆಧರಿಸಿ ಒಳ ಮೀಸಲಾತಿ ಜಾರಿಗೊಳಿಸಲು ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ಹೇಳಿದರು.ನಟಿ ರನ್ಯಾ ರಾವ್‌ ಚಿನ್ನಸಾಗಾಣಿಕೆ ಪ್ರಕರಣದಲ್ಲಿ ಶಿಷ್ಟಾಚಾರ ಉಲ್ಲಂಘನೆ ಕುರಿತು ವಿಚಾರಣೆ ನಡೆಸಿ ವರದಿ ನೀಡಲು ಹಿರಿಯ ಐಎಎಸ್‌‍ ಅಧಿಕಾರಿ ಗೌರವ್‌ಗುಪ್ತ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿ ವರದಿ ನೀಡಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದರು.

ಪ್ರಮುಖರ ದೂರವಾಣಿಗಳ ಕದ್ದಾಲಿಕೆ ಅಥವಾ ಅವರ ಚಲನವಲನಗಳ ಮೇಲೆ ನಿಗಾ ಇಟ್ಟಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ. ಗುಪ್ತಚರ ಇಲಾಖೆ ನನ್ನ ಬಳಿ ಇಲ್ಲ. ಮುಖ್ಯಮಂತ್ರಿಯವರ ಬಳಿ ಇಲಾಖೆಯಿದೆ. ಬೇಹುಗಾರಿಕೆ ನಡೆಸಿದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದರು. ಸಚಿವ ಮಹದೇವಪ್ಪ ಅವರ ಮನೆಯಲ್ಲಿ ನಾವು ಸಭೆ ಸೇರಿ ಒಳಮೀಸಲಾತಿ ಬಗ್ಗೆ ಚರ್ಚೆ ಮಾಡಿದ್ದೇವೆ. ಅದರಲ್ಲಿ ಯಾವುದೇ ಒಳ ರಾಜಕೀಯ ಇಲ್ಲ. ನಾವು ಕದ್ದುಮುಚ್ಚಿಯೂ ಊಟ ಮಾಡಿಲ್ಲ ಎಂದು ಹೇಳಿದರು.

RELATED ARTICLES

Latest News