ಬೆಂಗಳೂರು : ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಎಂದರೆ ನಿರ್ಲಕ್ಷ್ಯ ತೋರುವ ಸಮೀಕ್ಷಾದಾರರನ್ನು ಅವಹೇಳನ ಮಾಡಿ ಟೀಕಿಸಿ ವ್ಯಂಗ್ಯವಾಡುವ ಸನ್ನಿವೇಶಗಳೇ ಹೆಚ್ಚಾಗಿರುವ ಸಂದರ್ಭದಲ್ಲಿ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಂದಿನಿ ಬಡಾವಣೆಯಲ್ಲಿ ಸಮೀಕ್ಷೆಗೆ ಬಂದ ಶಿಕ್ಷಕಿಯ ಕುಶಲೋಪರಿ ವಿಚಾರಿಸಿ ಬಾಗಿನ ನೀಡಿ ಮಡಿಲು ತುಂಬಿ ಸತ್ಕರಿಸಿ ಮಾದರಿಯಾದ ಪ್ರಸಂಗ ನಡೆದಿದೆ.
ರಾಜಧಾನಿ ಬೆಂಗಳೂರಿನಲ್ಲಿ ಸಮೀಕ್ಷೆ ನಿಗದಿತ ಪ್ರಮಾಣದಲ್ಲಿ ನಡೆದಿಲ್ಲ. ಸಮೀಕ್ಷಾದಾರರ ಬಗ್ಗೆ ಕುಹಕವಾಡುವ, ಅವರನ್ನು ಕಾಂಪೌಂಡ್ ಒಳಗೂ ಬಿಟ್ಟುಕೊಳ್ಳದಿರುವ, ಈಗ ಬನ್ನಿ, ಆಗ ಬನ್ನಿ ಎಂದು ಹೇಳುವ ಉದಾಹರಣೆಗಳು ಕಣ್ಣಮುಂದೆ ಇದೆ. ಸಮೀಕ್ಷಾದಾರರು ಮನೆಯ ಕಾಲಿಂಗ್ ಬೆಲ್ ಒತ್ತಿದರೆ ಯಾರೂ ಇಲ್ಲ ಎಂದು ಹೇಳಿ ಸಾಗು ಹಾಕುತ್ತಿದ್ದಾರೆ. ಅಪಾರ್ಟ್‌ಮೆಂಟ್‌ಗಳಲ್ಲಂತೂ ಸಮೀಕ್ಷಾದಾರರಿಗೆ ಸರಿಯಾಗಿ ಪ್ರತಿಕ್ರಿಯೆಯನ್ನೇ ನೀಡುತ್ತಿಲ್ಲ.
ಕೆಲವೆಡೆ ನಾಯಿಗಳ ಕಾಟದಿಂದ ಸಮೀಕ್ಷೆಗೆ ಬಂದವರು ಆತಂಕಕ್ಕೆ ಒಳಗಾಗಿದ್ದಾರೆ. ಎಲ್ಲಾ ಸಂಕಷ್ಟ, ಸವಾಲುಗಳ ನಡುವೆಯೇ ಶಿಕ್ಷಕರು, ನೌಕರರು ಸರ್ಕಾರದ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಕೆಲವರು ಸಮೀಕ್ಷೆಗೆ ಸಹಕರಿಸುತ್ತಾರೆ. ಮತ್ತೆ ಕೆಲವರು ಬೇಕಾಬಿಟ್ಟಿಯಾಗಿ ವರ್ತಿಸುತ್ತಾರೆ. ಮಾಹಿತಿ ನೀಡದೆ ಸತಾಯಿಸುತ್ತಾರೆ. ಈ ರೀತಿಯಾದರೆ ಸರ್ಕಾರಿ ನೌಕರರ ಪಾಡೇನು?
ಈ ಎಲ್ಲಾ ಬೆಳವಣಿಗೆಗಳ ನಡುವೆ ನಂದಿನಿ ಲೇಔಟ್‌ನ ಮನೆಯೊಂದರಲ್ಲಿ ಸಮೀಕ್ಷೆಗೆ ಬಂದ ಶಿಕ್ಷಕಿಗೆ ಆದರದ ಸತ್ಕಾರವೇ ದೊರೆಯಿತು. ಈ ರೀತಿಯ ಸತ್ಕಾರ ಸಿಗುತ್ತದೆ ಎಂದು ಆ ಶಿಕ್ಷಕಿ ಊಹಿಸಿರಲಿಲ್ಲ. ಸಮೀಕ್ಷೆಗೆ ಬಂದಾಗ ಮನೆಯವರು ಅವರನ್ನು ಸ್ವಾಗತಿಸಿ ಅಗತ್ಯ ಮಾಹಿತಿಗಳನ್ನು, ದಾಖಲೆಗಳನ್ನು ನೀಡಿ ಸಹಕರಿಸಿದರು. ಅವರ ಕುಶಲೋಪರಿಯನ್ನು ವಿಚಾರಿಸಿ ಕುಡಿಯಲು ತಂಪು ಪಾನೀಯ ನೀಡಿದರು. ಅಲ್ಲದೆ ಊಟಕ್ಕೂ ಆಹ್ವಾನಿಸಿದರು.
ಆದರೆ ಅವರ ಊಟವಾಗಿತ್ತು. ಸಮೀಕ್ಷೆ ಮುಗಿಸಿ ಹೊರಡಲು ಸಿದ್ಧವಾದಾಗ ಮನೆಯವರು ಅವರಿಗೆ ಬಾಗಿನ ಅರ್ಪಿಸಿ ಹಣ್ಣುಹಂಪಲು ನೀಡಿ ಸತ್ಕರಿಸಿದರು. ಇದರಿಂದ ಆ ಶಿಕ್ಷಕಿ ಭಾವುಕರಾದರು. ಈ ರೀತಿ ಎಲ್ಲರೂ ಪ್ರತಿಕ್ರಿಯಿಸಿದರೆ ನಮ ಕರ್ತವ್ಯಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ. ದೊಡ್ಡ ದೊಡ್ಡವರೆಂದರೆ ಭಯವಿರುತ್ತದೆ. ಆದರೆ ದೊಡ್ಡವರು ಇಷ್ಟು ಸೌಜನ್ಯದಿಂದ ವರ್ತಿಸಿ ಸತ್ಕರಿಸಿದ್ದನ್ನು ಕಂಡು ಆ ಶಿಕ್ಷಕಿಗೆ ಆನಂದಬಾಷ್ಪ ಬಂದಿತ್ತು. ಏನೇ ಆಗಲಿ ಈ ಪ್ರಸಂಗ ಮಾದರಿಯಾಗಲಿ. ಯಾವುದೇ ಸರ್ಕಾರಿ ಕರ್ತವ್ಯ ನಿಭಾಯಿಸುವವರಿಗೆ ಸಾರ್ವಜನಿಕರು ಮೃದುವಾಗಿ ಸಹಕರಿಸಲಿ ಎಂಬುದು ನಮ ಆಶಯ.