ಮುಜಫರ್ನಗರ, ಸೆ. 29 (ಪಿಟಿಐ) ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲೊಂದು ಮರ್ಯಾದಾ ಹತ್ಯಾ ಪ್ರಕರಣ ನಡೆದಿದೆ.ಕುಟುಂಬದ ಹೆಸರಿಕೆ ಕಳಂಕ ತಂದ ಆರೋಪದ ಮೇಲೆ ಅಪ್ರಾಪ್ತ 17 ವರ್ಷದ ಬಾಲಕಿಯನ್ನು ಆಕೆಯ ತಂದೆ ಮತ್ತು ಸಹೋದರ ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕಂಧ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಅಂಬೆಹ್ತಾ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಎನ್ ಪಿ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
12 ನೇ ತರಗತಿಯ ವಿದ್ಯಾರ್ಥಿನಿ ಮುಸ್ಕಾನ್ ಎಂದು ಗುರುತಿಸಲಾದ ಸಂತ್ರಸ್ತೆಯನ್ನು ಆಕೆಯ ತಂದೆ ಜುಲ್ಫಾಮ್ ಮತ್ತು 15 ವರ್ಷದ ಸಹೋದರ ತಮ್ಮ ಮನೆಯ ಮೇಲಿನ ಮಹಡಿಗೆ ಕರೆದೊಯ್ದು, ಅಲ್ಲಿ ಆಕೆಯನ್ನು ಪಿಸ್ತೂಲಿನಿಂದ ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತಾದ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಜುಲ್ಫಾಮ್ ಮತ್ತು ಅವರ ಅಪ್ರಾಪ್ತ ಮಗನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಎಸ್ಪಿ ಹೇಳಿದರು.
ಇಬ್ಬರನ್ನೂ ಬಂಧಿಸಲಾಗಿದೆ ಮತ್ತು ಅಪರಾಧದಲ್ಲಿ ಬಳಸಲಾದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ.ಕುಟುಂಬದ ಹೆಸರಿಗೆ ಕಳಂಕ ತಂದಿದ್ದಕ್ಕಾಗಿ ತನ್ನ ಮಗಳನ್ನು ಕೊಂದಿದ್ದಾಗಿ ಆರೋಪಿ ತಂದೆ ಒಪ್ಪಿಕೊಂಡಿದ್ದಾನೆ ಎಂದು ಸಿಂಗ್ ಹೇಳಿದರು.
ಸ್ಥಳೀಯರ ಪ್ರಕಾರ, ಮುಸ್ಕಾನ್ ಆ ಪ್ರದೇಶದ ಹುಡುಗನೊಂದಿಗೆ ಸಂಬಂಧ ಹೊಂದಿದ್ದಳು, ಅದನ್ನು ಅವಳ ಕುಟುಂಬ ವಿರೋಧಿಸಿತು. ನಿನ್ನೆ ಸಂಜೆ, ಆಕೆಯ ತಂದೆ ಆಕೆ ಫೋನ್ನಲ್ಲಿ ಚಾಟ್ ಮಾಡುವುದನ್ನುನೋಡಿದಾಗ ಕೋಪಗೊಂಡು ಆಕೆಯ ಕೊಲೆ ಮಾಡಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಎಸ್ಪಿ ಹೇಳಿದರು.