ನವದೆಹಲಿ,ಮೇ 7- ಪಾಕಿಸ್ತಾನದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ನಡೆಸುತ್ತಿರುವ ದಾಳಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ. ಈ ದಾಳಿಯ ಕುರಿತು ನನಗೆ ಈ ಮೊದಲೇ ತಿಳಿದಿತ್ತು. ಭಾರತ ಮತ್ತು ಪಾಕಿಸ್ತಾನಗಳು ಈ ಸಂಘರ್ಷವನ್ನು ಆದಷ್ಟು ಬೇಗನೇ ಕೊನೆಗೊಳಿಸಲಿವೆ ಎಂಬ ಭರವಸೆ ನನಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ದೀರ್ಘಕಾಲದ ಘರ್ಷಣೆಯ ಬಗ್ಗೆ ಅವರು ಉಲ್ಲೇಖಿಸಿದರು. ಆದರೆ ಈ ದಾಳಿಯಿಂದ ಭಯೋತ್ಪಾದನೆ ವಿರುದ್ಧ ಭಾರತದ ಕಠಿಣ ನಿಲುವು ಜಗತ್ತಿಗೆ ಮತ್ತೊಮೆ ಸ್ಪಷ್ಟವಾಯಿತು ಎಂದು ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಪರಿಸ್ಥಿತಿಯನ್ನು ಅಮೆರಿಕ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರುಬಿಯೊ ಹೇಳಿದ್ದಾರೆ. ಜೊತೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳಿಗೆ ರುಬಿಯೊ ಪ್ರತಿಧ್ವನಿಸಿದ್ದು, ಪರಿಸ್ಥಿತಿ ಬೇಗನೆ ಕೊನೆಗೊಳ್ಳುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದರು. ಜೊತೆಗೆ ಶೀಘ್ರದಲ್ಲೇ ಶಾಂತಿಯುತ ಪರಿಹಾರ ಕಂಡುಕೊಳ್ಳುವ ಬಗ್ಗೆ ಒತ್ತಾಯ ಮಾಡಿದರು.
ಭಯೋತ್ಪಾದನೆ ವಿರುದ್ಧ ಹೋರಾಡಲು ಇಡೀ ವಿಶ್ವ ನಾಯಕರು ಭಾರತದ ಬೆಂಬಲಕ್ಕೆ ನಿಂತಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಭಯೋತ್ಪಾದನೆ ವಿರುದ್ಧ ಹೋರಾಡಲು ನಾವು ಸದಾ ಸಿದ್ಧ ಎಂದು ಪ್ರತಿಜ್ಞೆ ಮಾಡಿದ್ದರು. ಇದೀಗ ಭಾರತ ಯುದ್ಧ ಸಾರಿದ್ದು, ಅಮೆರಿಕ ಸೂಕ್ಷ್ಮವಾಗಿ ಪರಿಸ್ಥಿತಿಯನ್ನು ಗಮನಿಸುತ್ತಿದೆ. ಜೊತೆಗೆ ಎಲ್ಲವೂ ಬೇಗ ಕೊನೆಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.