ಹಾವೇರಿ, ಡಿ.25- ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬಾಲಕ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸಾವಿಗೀಡಾಗಿರುವ ದಾರುಣ ಘಟನೆ ಶಿಗ್ಗಾಂವಿ ಬಳಿಯ ತಡಸ ಕ್ರಾಸ್‌ನ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಮೃತರನ್ನು ಬೆಂಗಳೂರಿನ ಚಾಮರಾಜಪೇಟೆ ನಿವಾಸಿ ಚಂದ್ರಮ (59) ಮತ್ತು ರಾಜರಾಜೇಶ್ವರಿ ನಗರದಲ್ಲಿ ವಾಸವಾಗಿದ್ದ ಅವರ ಮಗಳು ಮೀನಾ (38), ಅಳಿಯ ಮಹೇಶ್ ಕುಮಾರ್ (41) ಹಾಗೂ ಮೊಮಗ ಧನ್ವೀರ್ (11) ಎಂದು ಗುರುತಿಸಲಾಗಿದೆ.
ಬೆಂಗಳೂರು-ಪುಣೆ ಹೆದ್ದಾರಿಯ ತಿಮಾಪುರ ಗ್ರಾಮದ ಬಳಿ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಎಸ್‌ಯುವಿ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕವನ್ನು ಹಾರಿ ಹುಬ್ಬಳ್ಳಿಯಿಂದ ಹಾವೇರಿ ಕಡೆಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಒಂದು ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಮತ್ತಿಬ್ಬರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮತ್ತೊಂದು ಕಾರಿನಲ್ಲಿದ್ದ ಚಾಲಕ ಹಾಗೂ ಮತ್ತೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅಪಘಾತದಲ್ಲಿ ಒಂದು ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮತ್ತೊಂದು ಕಾರಿನ ಮುಂಭಾಗ ಜಖಂಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಇತ್ತೀಚೆಗೆ ಸಾಫ್ಟ್ ವೇರ್ ಕಂಪೆನಿ ಮಾಲೀಕರು ಕಾರಿನಲ್ಲಿ ಕುಟುಂಬದೊಂದಿಗೆ ಹೋಗುತ್ತಿದ್ದಾಗ ಬೆಂಗಳೂರಿನ ನೆಲಮಂಗಲ ಬಳಿ ಕ್ಯಾಂಟರ್ ವಾಹನ ಕಾರಿನ ಮೇಲೆ ಉರುಳಿಬಿದ್ದು ಒಂದೇ ಕುಟುಂಬದ ಆರು ಮಂದಿ ಮೃತಪಟ್ಟ ಘಟನೆ ಮಾಸುವ ಮುನ್ನವೇ ಇಂದು ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವುದು ದುರ್ದೈವ. ತಡದ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.