ವಿಜಯಪುರ, ಮೇ 21 – ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಇಂದು ಬೆಳಗ್ಗಿನ ಜಾವ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿ ಆರು ಮಂದಿ ಮೃತಪಟ್ಟಿರುವ ಧಾರುಣ ಘಟನೆ ನಡೆದಿದೆ.
ಮೃತರನ್ನು ಮಹೀಂದ್ರ ಎಕ್ಸ್ ಯುವಿ 300 ಕಾರಿನಲ್ಲಿ ಪ್ರಯಾಣಿಸುತ್ತಿದ್ದ ತೆಲಂಗಾಣ ರಾಜ್ಯದವರಾದ ವಿಜಯಪುರದ ಇಂಡಿ ಕೆನರಾ ಬ್ಯಾಂಕ್ ಶಾಖೆ ಮ್ಯಾನೇಜರ್ ಪಿ.ಬಾಸ್ಕರನ್ ಮಲಿಕಂಠ, ಅವರ ಪತ್ನಿ ಪವಿತ್ರ, ಮಗ ಅಭಿರಾಮ, ಮಗಳು ಜೋಸ್ನಾ ಹಾಗೂ ಕಾರು ಚಾಲಕ ಹೊರ್ತಿ ಗ್ರಾಮದ ವಿಕಾಸ್ ಮಣಿ ಹಾಗೂ ವಿಆರ್‌ಎಲ್ ಬಸ್ ಚಾಲಕ ಬಸವರಾಜ ರಾಠೋಡ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಬಾಸ್ಕರನ್ ಅವರ ಮತ್ತೊಬ್ಬ ಪುತ್ರ ಪ್ರವೀಣ್ ತೇಜ (10) ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಭಾಸ್ಕರನ್ ರವರು ವಿಜಯಪುರದ ಇಂಡಿಯಿಂದ ತೆಲಂಗಾಣಕ್ಕೆ ವರ್ಗಾವಣೆಯಾಗಿದ್ದರು. ಆಗಾಗಿ ರಜೆ ಹಾಕಿ ಕುಟುಂಬ ಸಮೇತ ಕಾರಿನಲ್ಲಿ ಧರ್ಮಸ್ಥಳ, ಮುರುಡೇಶ್ವರ ಸೇರಿದಂತೆ ಹಲವು ಧಾರ್ಮಿಕ ಪ್ರವಾಸಿ ತಾಣಗಳಿಗೆ ಕಾರಿನಲ್ಲಿ ತೆರಳಿ ಇಂದು ಬೆಳಗಿನ ಜಾವ 6.20 ರ ಸುಮಾರಿನಲ್ಲಿ ವಾಪಸ್ಸಾಗುತ್ತಿದ್ದರು.
ಇವರ ಕಾರು ಚತುಷ್ಪಥ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಮೊದಲು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಪಕ್ಕದ ರಸ್ತೆಗೆ ಹಾರಿದ್ದು, ಆ ರಸ್ತೆಯಲ್ಲಿ ಮುಂಬೈನಿಂದ ಬಳ್ಳಾರಿ ಕಡೆಗೆ ಹೋಗುತ್ತಿದ್ದ ವಿಆರ್‌ಎಲ್ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದ್ದರಿಂದ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ನಿಂತಿದೆ. ಬಸ್‌ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪರಾಗಿದ್ದಾರೆ.
ಈ ಸರಣಿ ಅಪಘಾತದಲ್ಲಿ ಭಾಸ್ಕರ್ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಬಸ್ ಚಾಲಕ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಬಸವಬಾಗೇವಾಡಿ ಠಾಣೆ ಇನ್ಸ್ ಪೆಕ್ಟರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಮನಗೊಳಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಕಾರಿನಲ್ಲಿ ಸಿಲುಕಿಕೊಂಡಿದ್ದ ಚಾಲಕ ಸೇರಿದಂತೆ ಐವರ ಮೃತದೇಹಗಳನ್ನು ಹರಸಾಹಸ ಪಟ್ಟು ಹೊರತೆಗೆದು ನಂತರ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಅಪಘಾತದಲ್ಲಿ ಲಾರಿ ಚಾಲಕ ಚನ್ನಬಸುಸಿದ್ದಪ್ಪ ಎಂಬುವವರು ಗಾಯಗೊಂಡಿದ್ದು, ಅವರನ್ನು ಕೂಡ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಬೆಳ್ಳಂಬೆಳಗ್ಗೆ ಸರಣಿ ಅಪಘಾತದಿಂದಾಗಿ ಕೆಲಕಾಲ ಈ ಮಾರ್ಗದಲ್ಲಿ ವಾಹನಗಳ ಸಂಚಾರದಲ್ಲಿ ವ್ಯತ್ಯಯವಾಗಿತ್ತು.ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.