Friday, November 22, 2024
Homeರಾಜ್ಯಧಾರಾಕಾರ ಮಳೆಗೆ ಧರೆಗುರುಳಿದ ಮನೆಗಳು

ಧಾರಾಕಾರ ಮಳೆಗೆ ಧರೆಗುರುಳಿದ ಮನೆಗಳು

ಬೆಂಗಳೂರು,ಜು.20- ಕಳೆದ 15 ದಿನಗಳಿಂದ ರಾಜ್ಯದಲ್ಲಿ ಧಾರಕಾರ ಮಳೆ ಸುರಿಯುತ್ತಿದ್ದು, ಹುಬ್ಬಳ್ಳಿ, ಬೆಳಗಾವಿ, ಹಾಸನ, ಶಿವಮೊಗ್ಗ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಮನೆಗಳು ಕುಸಿದುಬಿದ್ದು ಅಪಾರ ನಷ್ಟ ಉಂಟಾಗಿದೆ. ಬೆಳಗಾವಿಯಲ್ಲಿ ಮಳೆಯಿಂದಾಗಿ ಅನಾಹುತಗಳು ಹೆಚ್ಚಾಗಿವೆ. ಎರಡು ಗ್ರಾಮಗಳಲ್ಲಿ ಮನೆ ಕುಸಿದು ಕುಟುಂಬಸ್ಥರು ಬೀದಿ ಪಾಲಾಗಿದ್ದಾರೆ.

ಅದರಲ್ಲೂ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹೊಸಟ್ಟಿಯಲ್ಲಿ ಮನೆ ಕುಸಿಯುವ ಮುನ್ನ 2 ಇಟ್ಟಿಗೆಗಳು ಬಿದ್ದಿದ್ದು ಎಚ್ಚೆತ್ತ ಕುಟುಂಬಸ್ಥರು ಓಡಿ ಆಚೆ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ.
ಅದೃಷ್ಟವಶಾತ್ ಎರಡು ಇಟ್ಟಿಗೆಗಳಿಂದಾಗಿ ಇಡೀ ಕುಟುಂಬ ಸಾವಿನ ದವಡೆಯಿಂದ ಪಾರಾಗಿದೆ.

ಪರಿಹಾರದ ನಿರೀಕ್ಷೆ: ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ಅನಾಹುತಗಳು ಹೆಚ್ಚಾಗ್ತಿವೆ. ಸದ್ಯ ಬಿದ್ದ ಮನೆಯಲ್ಲಿಯೇ ನಿಂಗಪ್ಪ ಕಮತಗಿ ಕುಟುಂಬ ಬೇರೆ ದಾರಿ ಇಲ್ಲದೆ ವಾಸಿಸುವಂತಾಗಿದೆ. ಮನೆಯ ಒಂದು ಗೋಡೆ ಉರುಳಿ ಬಿದ್ದು ಅವಾಂತರವಾಗಿದೆ. ಮನೆಯ 11 ಜನ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಕಮತಗಿ ಕುಟುಂಬ ಸರ್ಕಾರದಿಂದ ಸಿಗುವ ಪರಿಹಾರದ ನಿರೀಕ್ಷೆಯಲ್ಲಿದೆ.

ಶಿವಮೊಗ್ಗ:
ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರೀ ಮಳೆಯ ಹಿನ್ನಲೆಯಲ್ಲಿ ಶಾಲಾ ಕಾಲೇಜು ಹಾಗೂ ಅಂಗನವಾಡಿಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಮಕ್ಕಳ ಹಿತದೃಷ್ಟಿಯಿಂದ ಆಯಾ ತಾಲೂಕಿನ ತಹಶೀಲ್ದಾರ್‍ಗಳು ರಜೆ ಘೋಷಣೆ ಮಾಡಿದ್ದಾರೆ. ಧಾರಾಕಾರ ಮಳೆಗೆ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಗಾಂಧಿನಗರದಲ್ಲಿ 3 ಮನೆಗಳು ಧರೆಗುರುಳಿವೆ.

ನವಲಗುಂದ: ಪಟ್ಟಣದಬಸವೇಶ್ವರ ನಗರದ ನಿವಾಸಿಯಾದ ಗೌರಮ್ಮ ಅನುರಾಜ್ ಕುಂಕುಮಗಾರ ಅವರ ಮನೆ ಸತತ ಮಳೆಯಿಂದಾಗಿ ರಾತ್ರಿ ಮನೆ ಕುಸಿದು ಮನೆಯಲ್ಲಿನ ಸಂಪೂರ್ಣ ವಸ್ತುಗಳು ಹಾಳಾಗಿವೆ.

ಹಾಸನ: ಭಾರೀ ಮಳೆಯ ಪರಿಣಾಮ ಮನೆ ಹಾಗೂ ಕೊಟ್ಟಿಗೆ ಕುಸಿದುಬಿದ್ದು ಮೂರು ಹಸುಗಳು ದಾರುಣವಾಗಿ ಮೃತಪಟ್ಟಿದ್ದು, ಅದೃಷ್ಟವಶಾತ್ ಮನೆ ಮಾಲೀಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೇಲೂರು ತಾಲ್ಲೂಕು ಮಾದೀಹಳ್ಳಿ ಹೋಬಳಿ ಸಂಕೇನಹಳ್ಳಿ ಗ್ರಾಮದ ಅಣ್ಣಪ್ಪ ಶೆಟ್ಟಿ ಮತ್ತು ರತ್ನಮ್ಮ ಎಂಬವರ ಮನೆ ಇಂದು ಮುಂಜಾನೆ ಇದ್ದಕ್ಕಿದ್ದಂತೆ ನೆಲಕ್ಕುರಳಿದೆ. ಮನೆಗೆ ಹೊಂದಿಕೊಂಡಂತಿದ್ದ ಕೊಟ್ಟಿಗೆಯಲ್ಲಿ ಮಲಗಿದ್ದ ಮೂರು ಹಸುಗಳುಸಾವನ್ನಪ್ಪಿವೆ.

ಮನೆಯಲ್ಲಿದ್ದ ಟಿ.ವಿ. ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳು, ದವಸ ಧಾನ್ಯಗಳು ಮಣ್ಣುಪಾಲಾಗಿವೆ. ಮನೆ ಗೋಡೆ ನೆಲಕ್ಕುರುಳಿದ ರಭಸಕ್ಕೆ ಕೊಟ್ಟಿಗೆಯಲ್ಲಿದ್ದ ಮೂರು ಹಸುಗಳು ಸಾವನ್ನಪ್ಪಿದ್ದು ಮಣ್ಣಿನಡಿ ಸಿಲುಕಿದರು ಹಸುಗಳ ದೇಹ ಕಂಡು ಮಾಲಕಿ ರತ್ನಮ್ಮ ದುಃಖಿಸುವ ದೃಶ್ಯ ಕರುಳು ಚುರುಕ್ ಎನ್ನಿಸುವಂತಿತ್ತು.

RELATED ARTICLES

Latest News