ಬೆಂಗಳೂರು, ಜ.5- ನಗರದಲ್ಲಿ ನಿನ್ನೆ ಹಾಡಹಗಲೇ ಗೃಹಿಣಿಯನ್ನು ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಎರಡು ತಂಡಗಳನ್ನು ರಚಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಭಾಕರ್‍ರೆಡ್ಡಿ ಲೇಔಟ್‍ನಲ್ಲಿ ನಾಲ್ಕು ವರ್ಷಗಳಿಂದ ವಾಸವಾಗಿದ್ದ ಉತ್ತರಪ್ರದೇಶ ಮೂಲದ ನೀಲಂ (30) ಎಂಬ ಗೃಹಿಣಿಯನ್ನು ಪರಿಚಯಸ್ಥರೇ ಕೊಲೆ ಮಾಡಿರುವ ಶಂಕೆ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಮನೆ ಸಮೀಪವೇ ಹಾರ್ಡ್‍ವೇರ್ ಮಳಿಗೆ ನಡೆಸುತ್ತಿರುವ ಈ ಮಹಿಳೆಯ ಪತಿ ಪ್ರದ್ಯುಮ್ನ ಅವರು ಪೇಂಟರ್ ಗುತ್ತಿಗೆದಾರರೂ ಆಗಿದ್ದು , ನಿನ್ನೆ ಎಂದಿನಂತೆ ಪತಿ ಕೆಲಸಕ್ಕೆ ಹೋಗಿದ್ದು, ಇಬ್ಬರು ಗಂಡು ಮಕ್ಕಳು ಶಾಲೆಗೆ ಹೋಗಿದ್ದರು. ನೀಲಂ ಅವರು ಪ್ರತಿನಿತ್ಯದಂತೆ ಗೇಟ್‍ಗೆ ಬೀಗ ಹಾಕಿ ನಂತರ ಮನೆ ಚಿಲಕ ಹಾಕಿಕೊಂಡು ಒಳಗಿರುತ್ತಿದ್ದರು.
ಆದರೆ ನಿನ್ನೆ ಘಟನೆ ಬೆಳಕಿಗೆ ಬಂದಾಗ ಗೇಟ್ ಬೀಗ ತೆಗೆಯಲಾಗಿತ್ತು, ಮನೆಯ ಮುಂಬಾಗಿಲು ಸಹ ತೆರೆದಿತ್ತು. ಹಾಗಾಗಿ ಪರಿಚಯಸ್ಥರೇ ಬಂದು ಕೊಲೆ ಮಾಡಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ನಿನ್ನೆ ಪತಿ ಹಾಗೂ ಮಕ್ಕಳು ಹೊರಗೆ ಹೋಗುವುದನ್ನೇ ಕಾದಿದ್ದ ಹಂತಕರು ಮಹಿಳೆ ಒಬ್ಬರೇ ಇರುವ ಸಮಯಕ್ಕಾಗಿ ಹೊಂಚು ಹಾಕಿ ಹಾಡಹಗಲೇ ಮನೆಗೆ ನುಗ್ಗಿ ನೀಲಂ ಅವರನ್ನು ಕತ್ತುಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಶಾಲೆ ಮುಗಿಸಿ ಮಧ್ಯಾಹ್ನ ಕಿರಿಯ ಪುತ್ರ ಮನೆಗೆ ಬಂದಾಗಲೇ ಈ ಪ್ರಕರಣ ಬೆಳಕಿಗೆ ಬಂದಿದೆ.
ಹಂತಕರು ಮನೆಯಲ್ಲಿ ಯಾವುದೇ ಹಣ, ಆಭರಣವನ್ನು ದೋಚಿಲ್ಲ . ಮಹಿಳೆಯನ್ನು ಕೊಲೆ ಮಾಡುವ ಉದ್ದೇಶಕ್ಕಾಗಿಯೇ ಬಂದು ಕೃತ್ಯವೆಸಗಿ ಪರಾರಿಯಾಗಿದ್ದಾರೆ. ಆರೋಪಿಗಳ ಬಂಧನಕ್ಕಾಗಿ ರಚಿಸಲಾಗಿರುವ ಎರಡು ತಂಡಗಳು ಈಗಾಗಲೇ ಕಾರ್ಯಾಚರಣೆ ಕೈಗೊಂಡು, ಆ ಮನೆ ಸುತ್ತಮುತ್ತಲಿನ ಸಿಸಿಟಿವಿಗಳನ್ನು ಪರಿಶೀಲಿಸಿ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.
ಯಾವ ಕಾರಣಕ್ಕಾಗಿ, ಯಾರು ಈ ಮಹಿಳೆಯನ್ನು ಕೊಲೆ ಮಾಡಿದ್ದಾರೆ ಎಂಬಿತ್ಯಾದಿ ಮಾಹಿತಿಗಳನ್ನು ಪೊಲೀಸರು ಕಲೆ ಹಾಕುತ್ತಿದ್ದು , ಶೀಘ್ರದಲ್ಲೇ ಹಂತಕರನ್ನು ಬಂಧಿಸುವುದಾಗಿ ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.