ಮಕ್ಕಳ ಶೈಕ್ಷಣಿಕ ಪ್ರಯಾಣದಲ್ಲಿ ಪರೀಕ್ಷೆಗಳು ಗಮನಾರ್ಹ ಮೈಲುಗಲ್ಲುಗಳಾಗಿದ್ದು, ಅವರ ಭವಿಷ್ಯ ಮತ್ತು ಆತ್ಮ ಗೌರವದ ಮೇಲೆ ಪ್ರಭಾವ ಬೀರುತ್ತವೆ. ಆದರೆ, ಈ ಸಂದರ್ಭಗಳಲ್ಲಿ ಯಶಸ್ವಿಯಾಗಬೇಕೆಂದು ಅವರ ಮೇಲಿರುವ ಆಗ್ರಹವು ಅವರಿಗೆ ಒತ್ತಡ, ಆತಂಕ ಮತ್ತು ಮಾನಸಿಕವಾಗಿ ಜರ್ಜರಿತವಾಗುವಂತಹ ಬರ್ನ್ಔಟ್ ತೊಂದರೆಗೆ ದಾರಿ ಮಾಡಿಕೊಡಬಹುದು.
ಮಕ್ಕಳಲ್ಲಿ ನಿದ್ದೆಯಲ್ಲಿ ಅಡಚಣೆಯಾಗುವುದು, ಕಿರಿಕಿರಿಯಾಗುವುದು ಅಲ್ಲದೆ, ದೈಹಿಕ ಲಕ್ಷಣಗಳಾದ ತಲೆನೋವುಗಳು ಅಥವ ಹೊಟ್ಟೆನೋವುಗಳ ಮೂಲಕ ಈ ಒತ್ತಡ ಕಾಣಿಸಿಕೊಳ್ಳುತ್ತದೆ. ಸ್ವಲ್ಪಮಟ್ಟಿಗೆ ಒತ್ತಡ ಪ್ರೇರೇಪಣೆ ನೀಡಬಹುದು. ಆದರೆ, ಅತಿಯಾದ ಆತಂಕ ಅಥವ ಉದ್ವೇಗ ಪ್ರಗತಿ ಮತ್ತು ಯೋಗಕ್ಷೇಮಕ್ಕೆ ಅಡ್ಡಿಯಾಗಬಹುದು.
ಶೈಕ್ಷಣಿಕವಾಗಿ ಪ್ರಗತಿ ಹೊಂದುವುದರೊoದಿಗೆ ಯೋಗಕ್ಷೇಮವನ್ನು ಉಳಿಸಿಕೊಳ್ಳಲು ಆರೋಗ್ಯಕರ ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದು ಮಕ್ಕಳಿಗೆ ಅಗತ್ಯವಾಗಿರುತ್ತದೆ. ಮಕ್ಕಳನ್ನು ಕುರಿತಂತೆ ಅವಾಸ್ತವಿಕ ನಿರೀಕ್ಷೆಗಳು ಅವರಲ್ಲಿ ಪರೀಕ್ಷೆಯ ಒತ್ತಡ ಉಂಟಾಗುವುದಕ್ಕೆ ಪ್ರಮುಖವಾಗಿ ಕೊಡುಗೆ ನೀಡುತ್ತವೆ. ಪೋಷಕರು, ಶಿಕ್ಷಕರು ಮುಂತಾದವರು ಸತತವಾಗಿ ಅವರ ಮೇಲೆ ಯಾವುದೇ ಉದ್ದೇಶವಿಲ್ಲದೆ ಒತ್ತಡ ಹೇರುತ್ತಾರೆ.
ಈ ಮೂಲಕ ಮಕ್ಕಳು ಉತ್ತಮ ಅಂಕ ಮತ್ತು ರ‍್ಯಾಂಕ್ ಗಳಿಸಿ ತಮ್ಮ ಮೌಲ್ಯ ನಿರೂಪಿಸಿಕೊಳ್ಳಬೇಕು ಎಂಬ ಭಾವನೆಗೆ ಅಂಟಿಕೊಳ್ಳುತ್ತಾರೆ. ಶೈಕ್ಷಣಿಕ ಯಶಸ್ಸು ಮುಖ್ಯವಾಗಿದ್ದರೂ, ಪರೀಕ್ಷೆಗಳು ಕಲಿಕಾ ಪ್ರಕ್ರಿಯೆಯ ಒಂದು ಭಾಗ ಮಾತ್ರ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು.
ಮಕ್ಕಳು ಕೇವಲ ರ‍್ಯಾಂಕ್ ಪಡೆಯುವುದು, ಉನ್ನತ ದರ್ಜೆಯ ಅಂಕ ಪಡೆಯುವುದು ಮುಂತಾದವುಗಳತ್ತ ಗಮನ ಹರಿಸುವುದಕ್ಕಿಂತಲೂ ಪ್ರಯತ್ನ ಮತ್ತು ಕಲಿಕೆಯ ಕಡೆಗೆ ಗಮನವನ್ನು ಬದಲಾಯಿಸಿಕೊಂಡಲ್ಲಿ ಒತ್ತಡ ಕಡಿಮೆಯಾಗಿ ಸ್ಥಿರತೆಯನ್ನು ಬೆಳೆಸಿಕೊಳ್ಳಬಹುದು. ಪರಿಣಾಮಕಾರಿ ಸಮಯ ನಿರ್ವಹಣೆಯು ಒತ್ತಡ ಕಡಿಮೆ ಮಾಡುವುದಕ್ಕೆ ಪ್ರಮುಖ ಅಂಶವಾಗಿರುತ್ತದೆ. ವಿಳಂಬ ಮಾಡಿಕೊಳ್ಳುವುದರಿಂದ ಕೊನೆಯ ನಿಮಿಷದ ಅವಸರಕ್ಕೆ ಮತ್ತು ಆತಂಕ ಹೆಚ್ಚಳಕ್ಕೆ ದಾರಿ ಮಾಡಿಕೊಡುತ್ತದೆ.
ಬಿಡುವುಗಳು, ಮನರಂಜನೆ ಮತ್ತು ವಿಶ್ರಾಂತಿಗಳನ್ನು ಒಳಗೊಂಡ ನೈಜವಾದ ಅಧ್ಯಯನ ಕಾರ್ಯಕ್ರಮ ಪಟ್ಟಿ ಮಾಡಿಕೊಳ್ಳುವುದಕ್ಕೆ ಪ್ರೋತ್ಸಾಹಿಸುವುದರಿಂದ ಮಕ್ಕಳಲ್ಲಿ ಏಕಾಗ್ರತೆ, ನೆನಪಿನ ಶಕ್ತಿ ಸುಧಾರಿಸಬಹುದಲ್ಲದೆ ಒತ್ತಡ ಕಡಿಮೆಯಾಗಬಹುದು. ಅಧ್ಯಯನದ ಅವಧಿಗಳನ್ನು ಸಣ್ಣ ವಿಭಾಗಗಳಾಗಿಸಿಕೊಂಡು ನಡುವಿನಲ್ಲಿ ವಿಶ್ರಾಂತಿಗಳನ್ನು ಸೇರಿಸಿಕೊಳ್ಳುವುದರಿಂದ ಹೆಚ್ಚಿನ ಏಕಾಗ್ರತೆ ಸಾಧಿಸಲು ಪರಿಣಾಮಕಾರಿಯಾಗುತ್ತದೆ. ಅಲ್ಲದೆ, ಇದರಿಂದ ಮಾನಸಿಕ ಆಯಾಸವು ಕಡಿಮೆಯಾಗುತ್ತದೆ.
ಭಾವನಾತ್ಮಕ ನಿಯಂತ್ರಣ ಕೂಡ ಈ ಸಂದರ್ಭದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ತಮ್ಮ ಭಾವನೆಗಳನ್ನು ಅದುಮಿಟ್ಟುಕೊಳ್ಳದೆ ಅಭಿವ್ಯಕ್ತಿಸಲು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಪೋಷಕರು, ಶಿಕ್ಷಕರು ಅಥವ ಸಮಾಲೋಚಕರೊಂದಿಗೆ ಮುಕ್ತ ಸಂವಹನ ನಡೆಸುವುದರಿಂದ ಬೆಂಬಲದ ವಾತಾವರಣ ಪೂರೈಸಬಹುದಾಗಿದೆ.
ಆಳ ಮತ್ತು ದೀರ್ಘವಾದ ಉಸಿರಾಟ, ಧ್ಯಾನ ಮುಂತಾದ ಪ್ರಜ್ಞಾಪೂರ್ವಕ ತಂತ್ರಗಳು ಏಕಾಗ್ರತೆಯನ್ನು ಸುಧಾರಿಸಿ ಆತಂಕವನ್ನು ಕಡಿಮೆ ಮಾಡುತ್ತವೆ. ಪ್ರಜ್ಞಾಪೂರ್ವಕವಾಗಿ ಈ ತಂತ್ರಗಳನ್ನು ಕೆಲವು ನಿಮಿಷಗಳಷ್ಟಾದರೂ ಉಪಯೋಗಿಸಿಕೊಳ್ಳುವುದರಿಂದ ಒತ್ತಡ ನಿಭಾಯಿಸಲು ಮತ್ತು ಗ್ರಹಿಕೆಯ ಪ್ರದರ್ಶನವನ್ನು ಹೆಚ್ಚಿಸಲು ಮಕ್ಕಳಿಗೆ ಗಮನಾರ್ಹವಾಗಿ ಸಹಾಯವಾಗಬಹುದು ಎಂದು ಸಂಶೋಧನೆ ತಿಳಿಸಿದೆ.
ದೈಹಿಕ ಆರೋಗ್ಯವು ಮಾನಸಿಕ ಸೌಖ್ಯತೆಯೊಂದಿಗೆ ಸಂಬoಧ ಹೊಂದಿರುತ್ತದೆ. ಆದರೂ ಕೂಡ ಪರೀಕ್ಷೆಯ ಸಮಯದಲ್ಲಿ ಸ್ವಯಂ ಆರೈಕೆಯತ್ತ ವಿದ್ಯಾರ್ಥಿಗಳು ನಿರ್ಲಕ್ಷ್ಯಯ ವಹಿಸುತ್ತಾರೆ. ಕಳಪೆ ಪ್ರಮಾಣದ ನಿದ್ರೆ, ಆಹಾರಕ್ರಮ ಮತ್ತು ವ್ಯಾಯಾಮದ ಕೊರತೆ, ಒತ್ತಡ ಹೆಚ್ಚಿಸುತ್ತವೆ. ಸಮತೋಲಿತ ಆಹಾರಕ್ರಮ, ಕಾಲಕಾಲಕ್ಕೆ ಸಾಕಷ್ಟು ನೀರು ಕುಡಿಯುವುದು ಮತ್ತು ನಿಯಮಿತ ದೈಹಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದರಿಂದ ಮನಸ್ಥಿತಿ ಮತ್ತು ಮೆದುಳಿನ ಕಾರ್ಯ ಸುಧಾರಿಸುತ್ತದೆ. ಸಾಕಷ್ಟು ನಿದ್ರೆ ಬಹಳ ಮುಖ್ಯವಾಗಿರುತ್ತದೆ. ನಿದ್ರೆಯ ಕೊರತೆಯಿಂದ ನೆನಪಿನ ಶಕ್ತಿ ಅಲ್ಲದೆ ಅರಿವು ಹಾಗೂ ಗ್ರಹಿಕೆಯ ಸಾಮರ್ಥ್ಯಗಳಿಗೆ ಅಡ್ಡಿವುಂಟಾಗುತ್ತದೆ.
ಪರೀಕ್ಷೆಯ ಒತ್ತಡವನ್ನು ನಿರ್ವಹಿಸುವಲ್ಲಿ ಪೋಷಕರ ಬೆಂಬಲ ಪ್ರಮುಖ ಪಾತ್ರವಹಿಸುತ್ತದೆ. ಪ್ರಶಾಂತವಾದ ಮತ್ತು ಸಕಾರಾತ್ಮಕ ಮನೆಯ ವಾತಾವರಣ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಪ್ರೋತ್ಸಾಹಿಸುವ ಮಾತುಗಳು, ಸಕ್ರಿಯವಾಗಿ ಆಲಿಸುವುದು ಅಲ್ಲದೆ, ಅವರ ಪ್ರಯತ್ನಗಳನ್ನು ಗುರುತಿಸುವ ಕಾರ್ಯಗಳು ವಿದ್ಯಾರ್ಥಿಗಳಲ್ಲಿ ಸ್ಥಿರತೆಯನ್ನು ಪೋಷಿಸುತ್ತವೆ.
ಮಕ್ಕಳು ಒತ್ತಡವನ್ನು ತಡೆದುಕೊಳ್ಳುವುದರೊಂದಿಗೆ, ಪೋಷಕರು ತಮ್ಮದೇ ಆತಂಕಗಳನ್ನು ಕೂಡ ನಿರ್ವಹಿಸಿಕೊಳ್ಳಬೇಕು. ಪರೀಕ್ಷೆಗಳನ್ನು ಕುರಿತಂತೆ ಸಮತೋಲಿತ ಮನೋಭಾವ ಹೊಂದಿರುವುದರಿoದ ಹೆಚ್ಚು ಆರೋಗ್ಯಕರ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಲು ಮಕ್ಕಳಿಗೆ ಸಹಾಯವಾಗುತ್ತದೆ. ಒತ್ತಡ ಅತಿಯಾದ ಮಟ್ಟವನ್ನು ತಲುಪಿದಲ್ಲಿ ವೃತ್ತಿಪರರ ಸಹಾಯ ಅಗತ್ಯವಾಗಬಹುದು. ಮಗುವಿಗೆ ವೈಫಲ್ಯದ ಆತಂಕ ಅಥವ ಭಯ ಕಾಡಿದಲ್ಲಿ ಮನಶ್ಶಾಸ್ತ್ರಜ್ಞರು ಅಥವ ಸಮಾಲೋಚಕರಿಂದ ಸಲಹೆ ಪಡೆಯುವುದು ಲಾಭದಾಯಕ.
ಪರೀಕ್ಷೆಗಳನ್ನು ಹೊರೆಯಾಗಿ ನೋಡುವ ಬದಲಿಗೆ ಅವುಗಳನ್ನು ಕಲಿಕೆಯ ಅವಕಾಶಗಳಾಗಿ ನೋಡಬೇಕು. ಅಧ್ಯಯನಕ್ಕೆ ಸಮತೋಲಿತ ಮಾರ್ಗದ ಜೊತೆಗೆ ಭಾವನಾತ್ಮಕ ಬೆಂಬಲ ಮತ್ತು ಸಕಾರಾತ್ಮಕ ವಾತಾವರಣ ಇದ್ದಲ್ಲಿ ಮಕ್ಕಳು ಆತ್ಮವಿಶ್ವಾಸ ಮತ್ತು ಸ್ಥಿರತೆ ಪಡೆದುಕೊಳ್ಳಬಹುದು. ಇದರೊಂದಿಗೆ ಶೈಕ್ಷಣಿಕ ಯಶಸ್ಸು ಮತ್ತು ಭಾವನಾತ್ಮಕ ಯೋಗಕ್ಷೇಮದ ಖಾತ್ರಿ ಲಭಿಸುತ್ತದೆ.
–ಡಾ. ವಿದ್ಯಾ ಜ್ಯೋತಿ ಎನ್., ಮನೋವೈದ್ಯ ಸಲಹಾತಜ್ಞರು, ಟ್ರೈಲೈಫ್ ಹಾಸ್ಪಿಟಲ್.