Friday, August 15, 2025
Homeರಾಜ್ಯಠಾತ್‌ ಹೃದಯಾಘಾತ ತಪ್ಪಿಸಲು ಜಿಲ್ಲೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲೂ ಹೃದಯ ಜ್ಯೋತಿ ಯೋಜನೆ ಅನುಷ್ಠಾನ

ಠಾತ್‌ ಹೃದಯಾಘಾತ ತಪ್ಪಿಸಲು ಜಿಲ್ಲೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲೂ ಹೃದಯ ಜ್ಯೋತಿ ಯೋಜನೆ ಅನುಷ್ಠಾನ

Hridaya Jyoti scheme being implemented in district and taluk hospitals

ಮಂಗಳೂರು, ಆ.15– ಹಠಾತ್‌ ಹೃದಯಾಘಾತದಿಂದ ಜನರನ್ನು ರಕ್ಷಿಸಲು ಜಿಲ್ಲೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲೂ ಕರ್ನಾಟಕ ರತ್ನ ಡಾ. ಪುನೀತ್‌ ರಾಜ್‌ಕುಮಾರ್‌ ಹೃದಯ ಜ್ಯೋತಿ ಯೋಜನೆಯನ್ನು ಅನುಷ್ಠಾನ ಗೊಳಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್‌ಗುಂಡೂರಾವ್‌ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದ ಅವರು, ಹೃದಯಾಘಾತದಿಂದ ಜನರನ್ನು ರಕ್ಷಿಸಲು ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಹೃದಯ ಜ್ಯೋತಿಯನ್ನು ಜಿಲ್ಲೆ ಹಾಗೂ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಹಬ್‌ ಮತ್ತು ಸ್ಪೋಕ್‌ ಮಾದರಿಯಲ್ಲಿ ಜಾರಿಗೊಳಿಸಲಾಗಿದೆ. ಜಿಲ್ಲೆಯಲ್ಲಿ ಯೆನಪೋಯ ವೈದ್ಯಕೀಯ ಕಾಲೇಜು ಸಹಯೋಗದೊಂದಿಗೆ ಕಾರ್ಯ ನಿರ್ವಹಿಸುತ್ತಿವೆ ಎಂದರು.

ಮಾರ್ಚ್‌ 2024 ರಿಂದ ಜುಲೈ 2025 ರವರೆಗೆ ಹೃದಯಜ್ಯೋತಿ ಯೋಜನೆಯಡಿ ಒಟ್ಟು 33,356 ಫಲಾನುಭವಿಗಳಿಗೆ ಇಸಿಜಿ ಪರೀಕ್ಷೆಯನ್ನು ನಡೆಸಲಾಗಿದ್ದು, ಹೃದಯಾಘಾತ ಲಕ್ಷಣಗಳು ಕಂಡುಬಂದ 296 ವ್ಯಕ್ತಿಗಳಿಗೆ ಉನ್ನತ ಚಿಕಿತ್ಸೆಯನ್ನು ನೀಡಲು ಕ್ರಮವಹಿಸಲಾಗಿರುತ್ತದೆ ಎಂದರು.

ರಾಜ್ಯದ 16 ಜಿಲ್ಲಾಸ್ಪತ್ರೆಗಳಲ್ಲಿ ಡೇ ಕೇರ್‌ ಕಿಮೋಥೆರಪಿ ಸೌಲಭ್ಯ ಅನುಷ್ಠಾನಗೊಳಿಸಲಾಗಿದ್ದು ದ.ಕ.ಜಿಲ್ಲೆಯ ಜಿಲ್ಲಾ ವೆನ್ಲಾಕ್‌ ಆಸ್ಪತ್ರೆಯಲ್ಲಿಯೂ ಕೂಡಾ 10 ಹಾಸಿಗೆಗಳ ವಾರ್ಡುಗಳನ್ನು ಸ್ಥಾಪಿಸಲಾಗಿದೆ ಎಂದರು.

ಗೃಹ ಆರೋಗ್ಯ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಆರಂಭಿಸಲಾಗಿದ್ದು, ಆರೋಗ್ಯ ಕಾರ್ಯಕರ್ತರ ಮೂಲಕ ಗ್ರಾಮೀಣ ಭಾಗದ ಎಲ್ಲಾ ನಾಗರಿಕರ ಮನೆಗಳಿಗೆ ಭೇಟಿ ನೀಡಿ ಪ್ರಮುಖ 14 ಅಸಾಂಕ್ರಾಮಿಕ. ರೋಗಗಳ ಕುರಿತು ತಿಳುವಳಿಕೆ, ಅರಿವು ಮೂಡಿಸುವುದರೊಂದಿಗೆ ಉಚಿತ ಔಷಧಿ ಕಿಟ್‌ಗಳನ್ನು ಆರೋಗ್ಯ ಕೇಂದ್ರಗಳಲ್ಲಿ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ. ವಿಶೇಷವಾಗಿ ಅಧಿಕ ರಕ್ತದೊತ್ತಡ, ಸಕ್ಕರೆ ಖಾಯಿಲೆ, ಮೂರು ರೀತಿಯ ಕ್ಯಾನ್ಸರ್‌ಗಳಾದ ಸ್ತನ, ಗರ್ಭಕೋಶ ಮತ್ತು ಬಾಯಿಯ ಕ್ಯಾನ್ಸರ್‌ಗಳ ಶೀಘ್ರ ಪತ್ತೆ ಮತ್ತು ಚಿಕಿತ್ಸೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದರು.

ಇದು ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಅಸಾಂಕ್ರಾಮಿಕ ರೋಗಗಳನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿ, ನಿರಂತರ ಉಚಿತ ತಪಾಸಣೆ ಹಾಗೂ ಚಿಕಿತ್ಸೆಯ ಮೂಲಕ ಅಡ್ಡ ಪರಿಣಾಮಗಳು ಮತ್ತು ಅಕಾಲಿಕ ಮರಣಗಳನ್ನು ತಡೆಗಟ್ಟುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದರು.

ಸ್ವಾತಂತ್ರ್ಯ ಸಂಗ್ರಾಮಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಪಾಲುಗಾರಿಕೆ ಹಾಗೂ ಕೊಡುಗೆಗಳ ಬಗ್ಗೆ ಇದೇ ವೇಳೆ ಪ್ರಸ್ತಾಪಿಸಿದ ಸಚಿವರು ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಬಗ್ಗೆಯೂ ಮಾಹಿತಿ ನೀಡಿದರು.
ಕಡಲ ತಟಕ್ಕೆ ಸಾಗಿ ಬರುವ ಅಲೆ ಅಲೆಗಳೂ ಸಹ ಸ್ವಾತಂತ್ರ್ಯದ ಕಥನ ಹೇಳುವ ಹಿರಿಮೆ ನಮದು. ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಯ ನಿಟ್ಟಿನಲ್ಲಿ ಸರಕಾರವು ಪೂರಕವಾಗಿ ಸ್ಪಂದಿಸುತ್ತಾ ಬಂದಿದೆ. ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ಮಾಸ್ಟರ್‌ ಪ್ಲಾನ್‌ನ 3ನೇ ಹಂತದಲ್ಲಿ ಸುಮಾರು ರೂ. 400 ಕೋಟಿ ವೆಚ್ಚದಲ್ಲಿ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಇನ್ನಿತರ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಕಾಮಗಾರಿಗಳನ್ನು ಪ್ರಸಕ್ತ ವರ್ಷದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಕೆಂಪುಕಲ್ಲು ಮತ್ತು ಮರಳು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಲು ರಾಜ್ಯ ಸರಕಾರ ಎಲ್ಲ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ ಜಿಲ್ಲೆಯ ಶಾಸಕರು ಮತ್ತು ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದು, ಶೀಘ್ರದಲ್ಲೇ ಈ ಕುರಿತು ಸರಳೀಕೃತ ನಿಯಮ ಜಾರಿಗೆ ಬರಲಿದೆ ಎಂದು ಭರವಸೆ ನೀಡಿದರು.

ಜಿಲ್ಲೆಯಲ್ಲಿ ಇ-ಸ್ವತ್ತು ನಮೂನೆ 9/11 ವಿತರಣೆಯಲ್ಲಿ ಉಂಟಾಗಿರುವ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಬೇರೆ ಬೇರೆ ಇಲಾಖೆಯ ಸಚಿವರುಗಳು ಮತ್ತು ಹಿರಿಯ ಅಧಿಕಾರಿಗಳ ಸಭೆ ನಡೆಸಲಾಗಿದೆ. ಇದಕ್ಕೊಂದು ಶಾಶ್ವತ ಪರಿಹಾರ ಕಂಡು ಹಿಡಿಯಲಾಗುವುದು. 2 ದಶಕಗಳಿಂದ ಜಿಲ್ಲೆಯ ಜನರಿಗೆ ಮನೆ, ಕಟ್ಟಡ ನಿರ್ಮಿಸಲು ಆಗುತ್ತಿರುವ ಸಮಸ್ಯೆಯನ್ನು ನಿವಾರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಭರವಸೆ ನೀಡಿದರು.

ಜಿಲ್ಲೆಯಲ್ಲಿ ಇತ್ತಿಚೆಗೆ ನಡೆದ ಹತ್ಯೆ ಪ್ರಕರಣಗಳನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದ್ದು ಕೋಮು ಸಂಬಂಧಿತ ಘರ್ಷಣೆಗಳನ್ನು ತಪ್ಪಿಸಲು ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಗೆ ಒಳಗೊಂಡಂತೆ ವಿಶೇಷ ನಿಗ್ರಹ ಪಡೆ ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಯಾವುದೇ ಬಾಹ್ಯ ಒತ್ತಡಕ್ಕೆ ಅವಕಾಶವಿಲ್ಲದೇ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೋಲಿಸ್‌‍ ಇಲಾಖೆಗೆ ಸಂಪೂರ್ಣ ಜವಾಬ್ದಾರಿ ನೀಡಲಾಗಿದೆ. ಕೋಮು ಪ್ರಕರಣಗಳ ಮೂಲವನ್ನು ಅರಿಯಲು ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಕ್ಷೇತ್ರಗಳ ಮುಖಂಡರೊಂದಿಗೆ ಶಾಂತಿ ಸೌಹಾರ್ಧ ಸಭೆ ನಡೆಸಲಾಗಿದ್ದು, ಈ ಸಭೆಯಲ್ಲಿ ಮೂಡಿಬಂದ ಒಮತದ ಅಭಿಪ್ರಾಯದಂತೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು, ದೇವಸ್ಥಾನ, ಮಸೀದಿ, ಚರ್ಚ್‌ ಗಳ ಧಾರ್ಮಿಕ ಮುಖಂಡರು ತಮ ತಮ ಧಾರ್ಮಿಕ ಕೇಂದ್ರಗಳಲ್ಲಿ ಜನರಿಗೆ ತಿಳುವಳಿಕೆ ನೀಡಬೇಕು. ಸಾಮರಸ್ಯದಿಂದ ಅಭಿವೃದ್ಧಿ ಸಾಧ್ಯ ಎಂಬುದನ್ನು ಸಮಾಜದ ಜನರಿಗೆ ಮನದಟ್ಟು ಮಾಡಬೇಕಾಗಿದೆ. ಕಲೆ, ನಾಟಕ, ಯಕ್ಷಗಾನ ಕ್ಷೇತ್ರಗಳಲ್ಲೂ ಸಹ ಸಾಮರಸ್ಯ ಸಂದೇಶ ಸಾರುವತ್ತ ಕಲಾವಿದರು ಹೆಚ್ಚಿನ ಗಮನ ಹರಿಸಬೇಕು. ಹಿಂಸೆಗೆ ಅವಕಾಶ ನೀಡದೇ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

RELATED ARTICLES

Latest News