ಹುಬ್ಬಳ್ಳಿ,ಏ.17-ಎನ್‌ಕೌಂಟರ್ ಪ್ರಕರಣ ಸಂಬಂಧ ಸಿಐಡಿ ಎಸ್.ಪಿ. ವೆಂಕಟೇಶ ನೇತೃತ್ವದಲ್ಲಿ ಡಿವೈಎಸ್‌ಪಿ ಪುನೀತ್‌ಕುಮಾರ್, ಇನ್‌ಸ್ಪೆಕ್ಟರ್ ಮಂಜುನಾಥ ಅವರು ಪೊಲೀಸರಿಂದ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಇನ್ನಷ್ಟು ಈ ಪ್ರಕರಣ ಕುರಿತು ದಾಖಲೆಗಳನ್ನು ಪಡೆದರು. ಕೃತ್ಯಗಳು ನಡೆದ ಘಟನಾ ಸ್ಥಳವನ್ನು ಪರಿಶೀಲಿಸಿದರು.
ಮರಣೋತ್ತರ ಪರೀಕ್ಷೆ:
ರಿತೇಶ ಕುಮಾರನ ಮೃತದೇಹದ ಮರಣೋತ್ತರ ಪರೀಕ್ಷೆ ಸಿಐಡಿ ಅಧಿಕಾರಿಗಳ ಮತ್ತು ತಾಲ್ಲೂಕು ದಂಡಾಧಿಕಾರಿಗಳ ಸಮ್ಮುಖದಲ್ಲಿ ನಡೆದಿದೆ. ಇದರ ಸಂಪೂರ್ಣವಾಗಿ ಚಿತ್ರಿಕರಣ ಮಾಡಲಾಗಿದ್ದು ಮೃತ ದೇಹ ಕೊಂಡೊಯ್ಯಲು ಸಂಬಂಧಿಕರು ಯಾರೂ ಬಾರದ ಕಾರಣ ಕೆಲ ದಿನಗಳವರೆಗೆ ಶವ ಸಂರಕ್ಷಿಸಿಟ್ಟು ನಂತರ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ.
ಸ್ವಪ್ರೇರಣೆಯಿಂದ ಸಿಐಡಿ ತನಿಖೆ: ಪ್ರಕರಣದ ತನಿಖಾ ಹಂತದಲ್ಲಿ ಪೊಲೀಸರ ವಶದಲ್ಲಿದ್ದ ಆರೋಪಿ ಮೃತಪಟ್ಟರೆ, ನ್ಯಾಯಾಲಯದ ಆದೇಶದಂತೆ ಸ್ವಯಂಪ್ರೇರಣೆಯಿಂದ ಆ ಪ್ರಕರಣದ ತನಿಖೆ ನಡೆಸುತ್ತದೆ. ಇದೇ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಬಂದ ಸಿಐಡಿ ಅಧಿಕಾರಿಗಳ ತಂಡ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಸ್ತಾಂತರಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ ಎಂದು ಡಿಸಿಪಿ ಮಹಾನಿಂಗ ನಂದಗಾವಿ ತಿಳಿಸಿದ್ದಾರೆ.
ಪಾಟ್ನಾಗೆ ಹುಬ್ಬಳ್ಳಿ ಪೊಲೀಸರ ತಂಡ :
ಅಪ್ರಾಪ್ತ ಬಾಲಕಿ ಕೊಲೆ ಪಾತಕಿ ರಿತೇಶ್ ಕುಮಾರ್ ಕುಟುಂಬದ ಮಾಹಿತಿ ಪತ್ತೆಗೆ ಪೊಲೀಸರ ತಂಡ ಬಿಹಾರದ ಪಾಟ್ನಾಕ್ಕೆ ತೆರಳಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದ ಅವರು ಕೊಲೆ ಆರೋಪಿ ಮರಣೋತ್ತರ ಪರೀಕ್ಷೆ ಮುಗಿದಿದ್ದು,ಆತ ಅನೇಕ ವರ್ಷಗಳ ಹಿಂದೆಯೇ ಬಿಹಾರ ಬಿಟ್ಟಿದ್ದಾನೆ ಮತ್ತು ಕುಟುಂಬ ಸದಸ್ಯರ ಜೊತೆ ಸಂಪರ್ಕದಲ್ಲಿಲ್ಲ.ನಮ್ಮ ಎರಡು ತಂಡ ಪಾಟ್ನಾ ಮತ್ತು ಸುತ್ತಲಿನ ಸ್ಥಳಕ್ಕೆ ಹೋಗಿವೆ ಆತನ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ ಎಂದರು.
ನೆರೆಯ ರಾಜ್ಯಗಳಿಗೆ ಕೂಡಾ ತಂಡಗಳು ಹೋಗಿವೆ ಆರೋಪಿ ಗುರುತು ಪತ್ತೆ ಕಾರ್ಯ ನಡೆದಿದ್ದು ಕುಟುಂಬದವರು ಸಿಕ್ಕರೆ ಅವರಿಗೆ ಶವ ಹಸ್ತಾಂತರ ಮಾಡ್ತೇವೆ ಇಲ್ಲದಿದ್ದರೆ ವೈದ್ಯರ ಸಲಹೆ, ಕಾನೂನು ಅವಕಾಶ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. ಮೃತ ಆರೋಪಿ ಮೊಬೈಲ್ ಬಳಕೆ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಆತನ ಜೊತೆ ಕೆಲಸ ಮಾಡಿದವರು ಪರಿಚಿತರು ಬಂದು ಮಾಹಿತಿ ನೀಡಬೇಕು ಎಂದರು.