Friday, November 22, 2024
Homeರಾಜ್ಯಜಯನಗರದಲ್ಲಿ ಎರಡು ಕಾರುಗಳಲ್ಲಿ ಸಾಗಿಸುತ್ತಿದ್ದ ಕೋಟಿ ಕೋಟಿ ಹಣ ಪತ್ತೆ

ಜಯನಗರದಲ್ಲಿ ಎರಡು ಕಾರುಗಳಲ್ಲಿ ಸಾಗಿಸುತ್ತಿದ್ದ ಕೋಟಿ ಕೋಟಿ ಹಣ ಪತ್ತೆ

ಬೆಂಗಳೂರು,ಏ.13- ಪ್ರಸಕ್ತ ಲೋಕಸಭೆ ಚುನಾವಣೆ ಮಾದರಿ ನೀತಿಸಂಹಿತೆ ಕಟ್ಟುನಿಟ್ಟಿನ ಜಾರಿ ಹಿನ್ನಲೆಯಲ್ಲಿ ಜಯನಗರ 4ನೇ ಬ್ಲಾಕ್ನಲ್ಲಿ ಕೋಟ್ಯಂತರ ರೂ. ಹಣ ಪತ್ತೆಯಾಗಿದೆ.ಜಯನಗರ 4ನೇ ಬ್ಲಾಕ್ನ ಗಣಪತಿ ದೇವಾಲಯದ ಬಳಿ 2 ಕಾರು ಹಾಗೂ 1 ಬೈಕ್ನ್ನು ತಡೆದು ಪರಿಶೀಲನೆ ನಡೆಸಿದ ಎಂಸಿಸಿ ತಂಡ ಕಾರುಗಳಲ್ಲಿ ಹಣ ಇರುವುದನ್ನು ಪತ್ತೆಹಚ್ಚಿದೆ.

ಎರಡು ಕಾರಿಗಳಲ್ಲಿ ಹಣ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯನ್ನು ಪಡೆದ ಎಂಸಿಸಿ ತಂಡ ಗಣಪತಿ ದೇವಾಲಯದ ಬಳಿ ತಡೆದು ತಪಾಸಣೆಗೊಳಪಡಿಸಿದಾಗ, ಒಂದು ಕಾರಿನೊಳಗಿದ್ದ ಬ್ಯಾಗ್ಗಳಲ್ಲಿ ಹಣ ಇರುವುದು ಪತ್ತೆಯಾಗಿದೆ. ಮತ್ತೊಂದು ಕಾರಿನ ಬಾಗಿಲನ್ನು ತೆಗೆಯಲು ಆಗಿಲ್ಲ. ಎರಡೂ ಕಾರುಗಳಲ್ಲಿ ಕೋಟ್ಯಂತರ ರೂ. ಸಾಗಾಣಿಕೆ ಮಾಡಲಾಗುತ್ತಿತ್ತು ಎನ್ನಲಾಗಿದೆ.

ಈ ಕಾರುಗಳು ಮತ್ತು ಬೈಕ್ ಯಾರಿಗೆ ಸೇರಿದ್ದು ಎಂಬುದರ ಮಾಹಿತಿ ಈತನಕ ತಿಳಿದುಬಂದಿಲ್ಲ. ಕಾರಿನಲ್ಲಿದ್ದ ಹಣವನ್ನು ಯಾರು ಎಲ್ಲಿಗೆ ಕೊಂಡೊಯ್ಯುತ್ತಿದ್ದರು? ಯಾರಿಗೆ ಸೇರಿದ್ದು ಎಂಬ ಮಾಹಿತಿ ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕ ಸ್ಪಷ್ಟವಾಗಲಿದೆ. ಕಾರುಗಳಲ್ಲಿನ ಬ್ಯಾಗ್ಗಳಲ್ಲಿ ಹಣ ಇರುವುದರ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿಯನ್ನು ಎಂಸಿಸಿ ತಂಡ ನೀಡಿದೆ.

ಕಾರುಗಳನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು ಕಾರಿನ ನೋಂದಾಯಿತ ಸಂಖ್ಯೆಯನ್ನು ಆಧರಿಸಿ ಮಾಲೀಕರಿಗೆ ನೋಟಿಸ್ ನೀಡಲಿದ್ದಾರೆ. ಬಳಿಕ ಹಣದ ಬಗ್ಗೆ ಮಾಹಿತಿ ಕಲೆ ಹಾಕಲಿರುವ ಚುನಾವಣಾ ಅಧಿಕಾರಿಗಳು ಸದ್ಯ ಸಿಕ್ಕಿರುವ ಹಣಕ್ಕೆ ದಾಖಲೆಯನ್ನು ಕೇಳಲಾಗಿದ್ದು, ಸರಿಯಾದ ದಾಖಲೆ ಇಲ್ಲದ ಕಾರಣ ಹಣವನ್ನು ವಶಕ್ಕೆ ಪಡೆಯಲಾಗಿದೆ.

ಒಟ್ಟು ಮೂರು ಕಾರಿನಲ್ಲಿ ಬಂದಿರುವ ಶಂಕೆಯಿದ್ದು, ಅದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಫ್ಯಾರ್ಚುನ್ ಕಾರಿನಲ್ಲಿದ್ದವರು ಕಾರು ಸಮೇತ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಐಷರಾಮಿ ಕಾರುಗಳಲ್ಲಿ ಕೋಟ್ಯಾಂತರ ರೂ. ಹಣ ಇತ್ತು ಎಂದು ಮಾಹಿತಿ ಲಭ್ಯವಾಗಿದ್ದು, ಹಣವನ್ನು ವಶಕ್ಕೆ ಪಡೆದು ಎಣಿಕೆ ಕಾರ್ಯದಲ್ಲಿ ಅಧಿಕಾರಿಗಳು ತೊಡಗಿದ್ದಾರೆ.

RELATED ARTICLES

Latest News