ಬೆಂಗಳೂರು, ಸೆ. 30- ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಾಹಸ ಸಿಂಹ ವಿಷ್ಣುವರ್ಧನ್ ಸಮಾಧಿ ತೆರವು ಮಾಸುವ ಮುನ್ನವೇ ಇದೀಗ ವರನಟ ಡಾ. ರಾಜ್ ಕುಮಾರ್ ಪುತ್ತಳಿಗೆ ತೆರವಿಗೆ ಕೆಲವರು ಮುಂದಾಗಿರುವ ಕ್ರಮ ಸಾರ್ವಜನಿಕರು ಹಾಗೂ ಅಣ್ಣಾವ್ರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಪದ್ಮನಾಭ ನಗರ ವಾರ್ಡ್‌ನ ಪುಟ್ಟಲಿಂಗಯ್ಯ ರಸ್ತೆಯ ಗಣೇಶ ದೇವಸ್ಥಾನದ ಮುಂಭಾಗದ ರಾಜ್ ಕಟ್ಟೆ ಡಾ. ರಾಜ್ ಕುಮಾರ್ ಪುತ್ಥಳಿಯನ್ನು ಕೆಡವಲು ಬಿಡಿಎ ಕಾರ್ಯೋನ್ಮುಖವಾಗಿದ್ದು, ಯಾವುದೇ ಕಾರಣಕ್ಕೂ ಪುತ್ಥಳಿ ಉರುಳಿಸಬಾರದು ಎಂದು ಜನ ಸೇವಾ ಸಂಘ ಆಗ್ರಹಿಸಿದೆ. ಒಂದು ವೇಳೆ ಪುತ್ಥಳಿ ಕಡೆವಿದರೆ ಡಾ. ರಾಜ್ ಅಭಿಮಾನಿಗಳ ಸಂಘ ಮತ್ತು ಕನ್ನಡಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿವೆ.
ಇತ್ತೀಚೆಗೆ ಡಾ. ವಿಷ್ಣುವರ್ಧನ್ ಸ್ಮಾರಕ ಉರುಳಿಸಿ ಕೆಂಗಣ್ಣಿಗೆ ಗುರಿಯಾಗಿದ್ದ ಘಟನೆ ಮಾಸುವ ಮುನ್ನವೇ ಕನ್ನಡದ ಮೇರುನಟನ ಪುತ್ಥಳಿ ಧ್ವಂಸಕ್ಕೆ ಮುಂದಾಗಿರುವ ಘಟನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಸಂಬಂಧ ಜನ ಸೇವಾ ಸಂಘ ಗೃಹ ಸಚಿವರು ಮತ್ತು ಬಿಡಿಎಗೆ ಮನವಿ ಸಲ್ಲಿಸಿದೆ.
ಇದು ಸಾರ್ವಜನಿಕರ ಉಪಯೋಗಕ್ಕೆ ಬಳಕೆಯಾಗುವ ಸಿಎ ಪಾರ್ಕ್ ಆಗಿದ್ದು, ಇದು ಬಿಬಿಎಂಪಿ ಮತ್ತು ಬಿಡಿಎ ಸ್ವತ್ತಾಗಿದೆ. 2005 6 ರಲ್ಲಿ ಇಲ್ಲಿ ವರನಟ ಡಾ. ರಾಜ್ ಕುಮಾರ್ ಪುತ್ಥಳಿ ಅನಾವರಣಗೊಳಿಸಲಾಗಿದೆ. ಇಲ್ಲಿ ಧ್ವಜಕಂಬವಿದ್ದು, ಇದು ಪದ್ಮನಾಭನಗರದ ಏಕೈಕ ಕನ್ನಡ ಧ್ವಜ ಸ್ತಂಭವಾಗಿದೆ. ಇಲ್ಲಿ ರಾಜ್ಯೋತ್ಸವ ಮತ್ತು ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಪ್ರದೇಶ ಇದಾಗಿದೆ ಎಂದು ಹೇಳಿದೆ.
ಸುದ್ದಿಗಾರರ ಜೊತೆ ಮಾತನಾಡಿದ ಜನ ಸೇವಾ ಸಂಘದ ಕಾರ್ಯದರ್ಶಿ ಸತೀಶ್, ಈ ಜಾಗದ ಮೇಲ್ಮನವಿ ಅರ್ಜಿ ವಿಚಾರಣೆಗೆ ಬಾಕಿ ಇದೆ. ಆದರೂ ಓಂ ಪ್ರಕಾಶ್ ಎಂಬವರು ಈ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ಕಾನೂನು ಬಾಹಿರ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಓಂ ಪ್ರಕಾಶ್ ಎಂಬುವರದ್ದು ನಿವೇಶನ ಸಂಖ್ಯೆ 86. ಆದರೆ ಅಲ್ಲಿ ಮನೆ ನಿರ್ಮಿಸದೇ ಸಿಎ ನಿವೇಶದ ಮೇಲೆ ಕಣ್ಣಿಟ್ಟು ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ.
ಈ ಬೆಳವಣಿಗೆಯಿಂದ ಡಾ. ರಾಜ್ ಅಭಿಮಾನಿಗಳು ಮತ್ತು ಕನ್ನಡಿಗರು ತೀವ್ರ ಆಕ್ರೋಶಗೊಳ್ಳುವಂತಾಗಿದೆ ಎಂದು ಹೇಳಿದ್ಧಾರೆ. ಬಿಡಿಎ ಅಧಿಕಾರಿಗಳು ಮತ್ತು ಪೊಲೀಸರು ತಕ್ಷಣ ಮಧ್ಯ ಪ್ರವೇಶಿಸಿ ಇಲ್ಲಿನ ಜಾಗದ ಯಥಾಸ್ಥಿತಿ ಕಾಪಾಡಬೇಕು. ಡಾ. ರಾಜ್ ಪುತ್ಥಳಿ ಕೆಡವಿದರೆ ಕಾನೂನು ಸುವ್ಯವಸ್ಥೆ ಸಮಸ್ಯೆ ಎದುರಾಗಲಿದೆ. ಹಾಗಾಗಿ ಡಾ. ಪುತ್ಥಳಿಗೆ ರಕ್ಷಣೆ ನೀಡಬೇಕು ಎಂದು ಸತೀಶ್ ಆಗ್ರಹಿಸಿದ್ಧಾರೆ.