ಯಾದಗಿರಿ,ಸೆ.25-ಪತ್ನಿಯ ಶೀಲ ಶಂಕಿಸಿ ಇಬ್ಬರು ಕಂದಮಗಳನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಯಾದಗಿರಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ತಾಲ್ಲೂಕಿನ ಹತ್ತಿಕುಣಿ ಗ್ರಾಮದ ಸಾನ್ವಿ (5) ಮತ್ತು ಭರತ್ (3) ತಂದೆಯ ಕೋಪಕ್ಕೆ ಬಲಿಯಾದ ಮುಗ್ಧ ಮಕ್ಕಳು.
ಶರಣಪ್ಪ ಎಂಬಾತ ಪತ್ನಿಯ ಶೀಲ ಶಂಕಿಸಿ ವಿನಾಕಾರಣ ಜಗಳವಾಡುತ್ತಿದ್ದನು. ಪ್ರತಿನಿತ್ಯ ಒಂದಲ್ಲಾ ಒಂದು ಕಾರಣಕ್ಕೆ ಪತ್ನಿಯ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದನು. ಹಾಗಾಗಿ ದಂಪತಿ ನಡುವೆ ಜಗಳವಾಗುತ್ತಿತ್ತು.
ರಾತ್ರಿ ಸಹ ಶರಣಪ್ಪ ಪತ್ನಿ ಜೊತೆ ಜಗಳವಾಡಿದ್ದಾನೆ. ಇಂದು ಬೆಳಗಿನ ಜಾವ 6 ಗಂಟೆ ಸುಮಾರಿನಲ್ಲಿ ಪತ್ನಿ ಬಹಿರ್ದೆಸೆಗೆ ಹೋಗಿದ್ದಾಗ, ಕೋಪದ ಕೈಗೆ ಬುದ್ದಿ ಕೊಟ್ಟು ಮಲಗಿದ್ದ ತನ್ನ ಪುಟ್ಟ-ಪುಟ್ಟ ಮೂವರು ಮಕ್ಕಳ ಮೇಲೆ ಕೊಡಲಿಯಿಂದ ಮನಬಂದಂತೆ ಹೊಡೆದು ಕೊಡಲಿ ಸಮೇತ ಪರಾರಿಯಾಗಿದ್ದಾನೆ.
ಕೊಡಲಿ ಏಟಿನಿಂದ ಇಬ್ಬರು ಪುಟ್ಟ ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊಬ್ಬ ಮಗ ಹೇಮಂತ್ (8) ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಅಪ್ಪ-ಅಮನ ಜಗಳದಲ್ಲಿ ಏನೂ ಅರಿಯದ ಕಂದಮಗಳು ಪ್ರಾಣ ಕಳೆದುಕೊಂಡಿರುವುದು ದುರ್ದೈವ.
ಈ ಸುದ್ದಿ ತಿಳಿಯುತ್ತಿದ್ದಂತೆ ಡಿವೈಎಸ್‌ಪಿ ಹಾಗೂ ಪಿಎಸ್‌ಐ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಶರಣಪ್ಪನ ಪತ್ತೆಗಾಗಿ ಶೋಧ ಕೈಗೊಂಡಿದ್ದಾರೆ.