Monday, October 6, 2025
Homeರಾಜ್ಯತವರು ಮನೆ ಸೇರಿದ್ದ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದ ಪತಿ

ತವರು ಮನೆ ಸೇರಿದ್ದ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದ ಪತಿ

Husband hacks wife to death with axe

ಸುರಪುರ,ಅ.6-ತನ್ನಿಂದ ದೂರವಾಗಿ ತವರು ಮನೆ ಸೇರಿದ್ದ ಪತ್ನಿಯನ್ನು ಕೊಡಲಿಯಿಂದ ಹೊಡೆದು ಪತಿಯೇ ಕೊಲೆ ಮಾಡಿರುವ ಘಟನೆ ರಾತ್ರಿ ನಡೆದಿದೆ. ಪಟ್ಟಣದ ಬಿಎಸ್‌‍ಎನ್‌ಎಲ್‌ ಕಚೇರಿ ಬಳಿಯ ಡೊಣ್ಣೆಗೇರಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪತಿ ಸಂಗಪ್ಪ ಕಕ್ಕೇರಾ ಕೋಪಕ್ಕೆ ಪತ್ನಿ ಮರಿಯಮ ಕೊಲೆಯಾದ ದುರ್ದೈವಿ.

ಕಕ್ಕೇರಾ ಪಟ್ಟಣದ ಬಳಿಯ ದೊಡ್ಡಿಯೊಂದರಲ್ಲಿ ದಂಪತಿ ವಾಸವಾಗಿದ್ದು, ಮದ್ಯವೆಸನಿ ಪತಿಯ ವರ್ತನೆಯಿಂದ ಬೆಸತ್ತು ಮರಿಯಮ ಕಳೆದ ಒಂದು ವರ್ಷದಿಂದ ಸುರಪುರದ ಡೊಣ್ಣಿಗೇರಾದಲ್ಲಿನ ತನ್ನ ತವರು ಮನೆ ಸೇರಿದ್ದರು.

ಆಗಾಗ್ಗೆ ಪತಿ ಸಂಗಪ್ಪ ಅಲ್ಲಿಗೂ ಹೋಗಿ ಬರುತ್ತಿದ್ದನು. ನಿನ್ನೆ ತಡರಾತ್ರಿ ಪತ್ನಿ ಮಾತನಾಡಿಸಲು ಹೋಗಿದ್ದಾನೆ. ಆ ವೇಳೆ ತನಗೆ ಗೌರವ ಕೊಡುತ್ತಿಲ್ಲ ಹಾಗೂ ಸ್ಪಂದಿಸುತ್ತಿಲ್ಲವೆಂದು ಪತ್ನಿ ಜೊತೆ ಜಗಳವಾಡಿದ್ದಾನೆ. ಆ ಸಂದರ್ಭದಲ್ಲಿ ಕೈಗೆ ಸಿಕ್ಕಿದ ಕೊಡಲಿಯಿಂದ ಪತ್ನಿ ಮೇಲೆ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾನೆ.

ನಂತರ ಪತ್ನಿಯ ಅಣ್ಣಂದಿರು ಮಲಗಿದ್ದ ಕೋಣಿಗಳ ಚಿಲಕವನ್ನು ಹಾಕಿಕೊಂಡು ಮನೆ ಬಾಗಿಲು ಲಾಕ್‌ ಮಾಡಿ ಕೊಡಲಿ ಸಮೇತ ಪೊಲೀಸ್‌‍ ಠಾಣೆಗೆ ಹೋಗಿ ಶರಣಾಗಿದ್ದಾನೆ.ಇನ್ಸ್ ಪೆಕ್ಟರ್‌ ಉಮೇಶ್‌ನಾಯಕ್‌ ಸೇರಿದಂತೆ ಪೊಲೀಸ್‌‍ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕೊಠಡಿಯ ಚಿಲಕ ತೆಗೆದಿದ್ದಾರೆ.ಈ ಬಗ್ಗೆ ಮೃತ ಮಹಿಳೆಯ ಅಣ್ಣ ನೀಡಿರುವ ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

RELATED ARTICLES

Latest News