Friday, November 22, 2024
Homeಬೆಂಗಳೂರುಬೆಂಗಳೂರು : ತವರು ಮನೆ ಸೇರಿದ್ದ ಪತ್ನಿಯನ್ನು ಚುಚ್ಚಿ ಕೊಂದ ಪಾಪಿ ಪತಿ

ಬೆಂಗಳೂರು : ತವರು ಮನೆ ಸೇರಿದ್ದ ಪತ್ನಿಯನ್ನು ಚುಚ್ಚಿ ಕೊಂದ ಪಾಪಿ ಪತಿ

ಬೆಂಗಳೂರು,ಆ.2- ಕೌಟುಂಬಿಕ ಕಲಹದಿಂದ ತವರು ಮನೆ ಸೇರಿದ್ದ ಪತ್ನಿಯ ಧೋರಣೆಯಿಂದ ಬೇಸತ್ತಿದ್ದ ಪಾಪಿ ಪತಿಯೊಬ್ಬ ಅಮಾಯಕನಂತೆ ಅತ್ತೆ ಮನೆಗೆ ಬಂದು ಮಡದಿಗೆ ಮನಬಂದಂತೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ತಾನು ಬಯ್ಯುತ್ತಿರುವುದನ್ನು ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡು ಫೇಸ್‌‍ಬುಕ್‌ನಲ್ಲಿ ಹಾಕಿ ಪರಾರಿಯಾಗಿರುವ ಘಟನೆ ಇಂದು ಬೆಳಿಗ್ಗೆ ಚಾಮರಾಜಪೇಟೆ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪತಿಯಿಂದಲೇ ಹತ್ಯೆಯಾದ ಮಹಿಳೆಯನ್ನು ಸೈಯದ್‌ ಫಾಜೀಲ್‌ ಫಾತೀಮಾ (34) ಎಂದು ಗುರುತಿಸಲಾಗಿದೆ.ಫಾತೀಮಾ 9 ವರ್ಷಗಳ ಹಿಂದೆ ಸಿದ್ದಾಪುರದ ತಬರೇಜ್‌ ಪಾಷಾ ಅವರನ್ನು ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಈ ನಡುವೆ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಕೌಟುಂಬಿಕ ಕಲಹದಿಂದಾಗಿ ಆಕೆ ಕೆಲ ದಿನಗಳ ಹಿಂದೆ ಪತಿಯನ್ನು ತೊರೆದು ತಾಯಿ ಮನೆ ಸೇರಿಕೊಂಡಿದ್ದರು.

ಚಾಮರಾಜಪೇಟೆಯ ಎಂಡಿ ಬ್ಲಾಕ್‌ನಲ್ಲಿದ್ದ ತಾಯಿ ಮನೆಯಲ್ಲಿದ್ದ ಫಾತೀಮಾ ಅವರ ಮಕ್ಕಳು ಅಲ್ಲಿಂದಲೇ ಶಾಲೆಗೆ ಹೋಗಿ ಬರುತ್ತಿದ್ದರು.ಪತ್ನಿ ದೂರ ಆದಾಗಿನಿಂದ ಹುಚ್ಚನಂತಾಗಿದ್ದ ತಬರೇಜ್‌ ಫಾತೀಮಾಳನ್ನು ಮತ್ತೆ ಮನೆಗೆ ವಾಪಸ್ಸಾಗುವಂತೆ ಪರಿ ಪರಿಯಾಗಿ ಬೇಡಿಕೊಂಡಿದ್ದರೂ ಆಕೆ ಜಪ್ಪಯ್ಯ ಎಂದಿರಲಿಲ್ಲ. ಪತ್ನಿಯ ಈ ವರ್ತನೆ ಆತನನ್ನು ಮೃಗವನ್ನಾಗಿ ಪರಿವರ್ತಿಸಿತ್ತು ಎನ್ನಲಾಗಿದೆ. ಹೀಗಾಗಿಯೇ ಆತ ತನ್ನ ಮಡದಿಯ ಹತ್ಯೆಗೆ ಮುಹೂರ್ತ ಫಿಕ್‌್ಸ ಮಾಡಿಕೊಂಡಿದ್ದ.

ಪತ್ನಿಯನ್ನು ಕೊಲೆ ಮಾಡಲೆ ಬೇಕು ಎಂದುಕೊಂಡೇ ಇಂದು ಬೆಳಗ್ಗೆ ಬಂದಿದ್ದ ತಬರೇಜ್‌ ತನ್ನ ಇಬ್ಬರು ಮಕ್ಕಳು ಶಾಲೆಗೆ ಹೋಗುವವರೆಗೆ ಕಾದು ಕುಳಿತು ಮಕ್ಕಳು ಶಾಲೆಗೆ ಹೋದ ನಂತರ ತಾನು ತಂದಿದ್ದ ಬೈಕ್‌ಅನ್ನು ಅತ್ತೆ ಮನೆ ಮುಂಭಾಗ ಪಾರ್ಕ್‌ ಮಾಡಿ ಏನೂ ಅರಿಯದ ಮುಗ್ದನಂತೆ ಮನೆ ಪ್ರವೇಶಿಸಿದ್ದ.

ಮನೆ ಪ್ರವೇಶಿಸುತ್ತಿದ್ದಂತೆ ಮೃಗದಂತಾದ ತಬರೇಜ್‌ ಅತ್ತೆಯ ಎದುರೇ ತನ್ನ ಬಳಿ ಇದ್ದ ಚಾಕುವಿನಿಂದ ಪತ್ನಿಗೆ ಐದಾರು ಬಾರಿ ಮನಬಂದಂತೆ ಇರಿದು ಕೊಲೆ ಮಾಡಿದ್ದಾನೆ. ನಂತರ ತಾನು ಬಯ್ಯುವುದನ್ನು ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡು ಫೇಸ್‌‍ಬುಕ್‌ ಲೈವ್‌ಅನ್ನು ಪ್ರೈವೇಟ್‌ ಮಾಡಿ ಚಾಕು ಹಿಡಿದುಕೊಂಡೇ ಹೊರ ಬಂದು ತಾನು ತಂದಿದ್ದ ಬೈಕ್‌ ಹತ್ತಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಮಾಯಕನಂತೆ ಹಾಡಹಗಲೇ ಬಂದು ಭೀಕರವಾಗಿ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿರುವ ತಬರೇಜ್‌ ಬಂಧನಕ್ಕಾಗಿ ಚಾಮರಾಜ ಪೇಟೆ ಪೊಲೀಸರು ಜಾಲ ಬೀಸಿದ್ದಾರೆ.

ತಬರೇಜ್‌ ಬಂಧನಕ್ಕಾಗಿ ಅಕ್ಕಪಕ್ಕದ ಮನೆಯವರ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ ಪೊಲೀಸರಿಗೆ ಆರೋಪಿ ಮನೆ ಪ್ರವೇಶಿಸುವ ಮುನ್ನ ಏನು ತಿಳಿಯದ ಅಮಾಯಕನಂತೆ ಮನೆ ಪ್ರವೇಶಿಸಿರುವುದು ಕಂಡು ಬಂದರೆ ಕೊಲೆ ಮಾಡಿದ ನಂತರ ಚಾಕು ಹಿಡಿದುಕೊಂಡೇ ಹೊರ ಹೋಗಿರುವ ದೃಶ್ಯಾವಳಿಗಳು ಸಿಕ್ಕಿವೆ.ಈ ಆಧಾರದ ಮೇಲೆ ಕೊಲೆ ಆರೋಪಿಗಾಗಿ ಚಾಮರಾಜಪೇಟೆ ಪೊಲೀಸರು ಶೋಧ ನಡೆಸುತ್ತಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಮುಂದಿನ ಅಗತ್ಯ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News