ಅನೇಕಲ್,ಏ.5- ಅಕ್ರಮ ಸಂಬಂಧ ಶಂಕೆಯಿಂದಾಗಿ ಪತಿಯೇ ಪತ್ನಿಯನ್ನು ನಡುರಸ್ತೆಯಲ್ಲಿ ಕತ್ತುಕೊಯ್ದು ಬರ್ಬರವಾಗಿ ಕೊಲೆಮಾಡಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶಾರದಾ (35) ಕೊಲೆಯಾದ ನತದೃಷ್ಟೆ, ಪತಿ ಕೃಷ್ಣ ಪರಾರಿಯಾಗಿದ್ದಾನೆ.
ಬಾಗೇಪಲ್ಲಿ ಮೂಲದ ಶಾರದಾ ಹಾಗೂ ಕೃಷ್ಣ ದಂಪತಿ ದೊಡ್ಡತೋಗೂರು ಬಳಿಯ ಪ್ರಗತಿ ನಗರದಲ್ಲಿ ವಾಸಿಸುತ್ತಿದ್ದರು. ಈ ನಡುವೆ ದಂಪತಿ ನಡುವೆ ವಿನಾಕಾರಣ ಜಗಳವಾಗುತ್ತಿತ್ತು. ಪತ್ನಿಯ ಶೀಲದ ಬಗ್ಗೆ ಅನುಮಾನಗೊಂಡು ಪತಿ ಗಲಾಟೆ ಮಾಡುತ್ತಿದ್ದನು.
ನಿನ್ನೆ ರಾತ್ರಿ ಶಾರದಾ ಅವರು ಹೊರಗೆ ಹೋಗಿದ್ದರು, ಆ ವೇಳೆ ಕೃಷ್ಣ ಆಕೆ ಬರುವುದನ್ನೇ ಕಾದುಕುಳಿತ್ತಿದ್ದನು. ಶಾರದಾ ಅವರು ಮನೆಯೊಳಗೆ ಬರುತ್ತಿದ್ದಂತೆ ನಡು ರಸ್ತೆಯಲ್ಲೇ ಚಾಕುವಿನಿಂದ ಏಕಾಏಕಿ ದಾಳಿ ಮಾಡಿ ಕತ್ತು ಕೊಯ್ದ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ದಾರಿಹೋಕರು ಗಮನಿಸಿ ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಕೃಷ್ಣನಿಗಾಗಿ ಶೋಧಕೈಗೊಂಡಿದ್ದಾರೆ.