ಹಾಸನ,ಸೆ.12- ಮದ್ಯದ ಅಮಲಿನಲ್ಲಿ ಪತಿ ಮನೆಗೆ ಹೋಗಿ ಪತ್ನಿಯೊಂದಿಗೆ ಜಗಳವಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆ ಗ್ರಾಮದಲ್ಲಿ ನಡೆದಿದೆ.
ರೇಖಾ (38) ಕೊಲೆಯಾದ ಮಹಿಳೆ. ಆರೋಪಿ ಪತಿ ರಘು ಘಟನೆ ನಂತರ ಪರಾರಿಯಾಗಿದ್ದಾನೆ. ರಘು ಪ್ರತಿನಿತ್ಯ ಮದ್ಯ ಸೇವಿಸಿ ಮನೆಗೆ ಬಂದು ಪತ್ನಿಯೊಂದಿಗೆ ಜಗಳವಾ ಡುತ್ತಿದ್ದ.ನಿನ್ನೆ ರಾತ್ರಿ ಮನೆಯಲ್ಲಿದ್ದ ಇಬ್ಬರು ಗಂಡು ಮಕ್ಕಳು ಟ್ಯೂಷನ್ಗೆ ತೆರಳಿದ್ದ ವೇಳೆ, ಮದ್ಯದ ಅಮಲಿನಲ್ಲಿ ರಘು ಮನೆಗೆ ಹೋಗಿದ್ದಾನೆ.
ಆ ಸಂದರ್ಭದಲ್ಲಿ ಪತ್ನಿಯೊಂದಿಗೆ ಜಗಳವಾಡಿ, ಆಕೆಯನ್ನು ಮನೆಯಿಂದ ಹೊರಗೆ ಎಳೆದುಕೊಂಡು ಹೋಗಿ ಚಾಕುವಿನಿಂದ ಎದೆಗೆ ಇರಿದು ಪರಾರಿಯಾಗಿದ್ದಾನೆ.ತೀವ್ರ ರಕ್ತಸ್ರಾವದಿಂದ ರೇಖಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಹಿರೀಸಾವೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ರಘು ಪತ್ತೆಗೆ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಪತಿ ಕೊಂದು ನಾಟಕವಾಡಿದ್ದ ಪತ್ನಿ ಬಂಧನ
ಹುಣಸೂರು,ಸೆ.12- ಪತಿಗೆ ವಿಷ ಹಾಕಿ ಕೊಂದು ತಿಪ್ಪೆಗುಂಡಿಗೆ ಎಸೆದು, ಹುಲಿ ಕೊಂದಿದೆ ಎಂದು ನಾಟಕವಾಡಿದ್ದ ಪತ್ನಿಯನ್ನು ಹುಣಸೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.ಸಲ್ಲಾಪುರಿ ಬಂಧಿತ ಮಹಿಳೆಯಾಗಿದ್ದು,ಹುಣಸೂರು ತಾಲ್ಲೂಕು ಚಿಕ್ಕ ಹೆಜ್ಜೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಪರಿಹಾರ ಹಣದ ಆಸೆಗೆ ಪತಿ ವೆಂಕಟಸ್ವಾಮಿನ್ನು ತಾನೇ ಕೊಂದು ಹುಲಿ ಕೊಂದಿದೆ ಎಂದು ನಾಟಕವಾಡಿದ್ದ ಸಲ್ಲಾಪುರಿ ಪಾಪ ಕೃತ್ಯ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ದಂಪತಿ ಅಡಿಕೆ ತೋಟದಲ್ಲಿ ಕೆಲಸ ಮಾಡಿಕೊಂಡು ಅಲ್ಲೇ ವಾಸ ಇದ್ದರು. ಒಂದು ವಾರದ ಹಿಂದೆ ಪತಿ ನಾಪತ್ತೆಯಾಗಿದ್ದಾರೆ ಎಂದು ಪತ್ನಿ ದೂರು ನೀಡಿದ್ದರು.
ಹುಲಿ ಆತನನ್ನು ಕೊಂದು ಎಳೆದುಕೊಂಡು ಹೋಗಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಳು. ಈ ಬಗ್ಗೆ ಪರಿಶೀಲನೆ ನಡೆಸಿದ ಪೊಲೀಸರು ಅರಣ್ಯ ಇಲಾಖೆ ಸಿಬ್ಬಂದಿ ಯಾವುದೇ ಪ್ರಾಣಿ ಬಂದ ಕುರುಹು ಇರಲಿಲ್ಲ. ಅನುಮಾನಗೊಂಡು ಮನೆಯಲ್ಲಿ ಹುಡುಕಾಟ ವೇಳೆ ಮನೆಯ ಹಿಂದೆ ತಿಪ್ಪೆಗುಂಡಿಯಲ್ಲಿ ವೆಂಕಟಸ್ವಾಮಿ ಶವ ಪತ್ತೆಯಾಗಿತ್ತು.
ವಿಷ ಹಾಕಿ ಪತಿ ಕೊಲೆ ಮಾಡಿದ್ದ ಪತ್ನಿ ನಂತರ ತಿಪ್ಪೆಗುಂಡಿಗೆ ಎಸೆದಿದ್ದಳು ನಂತರ ಪರಿಹಾರ ಸಿಗುತ್ತದೆ, ಐಷಾರಾಮಿ ಜೀವನ ನಡೆಸಬಹುದು ಎಂಬ ಆಕೆಯ ಆಸೆ ಕೊನೆಗೆ ಅವಳು ಜೈಲು ಕಂಬಿ ಎಣಿಸುವ ಸ್ಥಿತಿಗೆ ತಲುಪಿದೆ.ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.