ಬೆಂಗಳೂರು,ಜ.1- ಸ್ಯಾಂಡಲ್ವುಡ್ನ ಹಿರಿಯ ನಟ ಹ್ಯಾಟ್ರಿಕ್ ಹೀರೊ ಶಿವರಾಜ್ಕುಮಾರ್ ಕ್ಯಾನ್ಸರ್ ಮುಕ್ತರಾಗಿರುವ ಸಂತೋಷದ ಸುದ್ದಿ ಹೊಸ ವರ್ಷಕ್ಕೆ ಹೊರಬಿದ್ದಿದೆ.ಅಮೆರಿಕದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಡಾ.ಶಿವರಾಜ್ಕುಮಾರ್ ಅವರ ವೈದ್ಯಕೀಯ ಎಲ್ಲಾ ವರದಿಗಳೂ ಬಂದಿದ್ದು, ಅಂತಿಮವಾಗಿ ಕ್ಯಾನ್ಸರ್ನಿಂದ ಮುಕ್ತರಾಗಿದ್ದಾರೆ ಎಂದು ಸಾಬೀತಾಗಿದೆ. ಹೊಸ ವರ್ಷದ ಸಂದರ್ಭದಲ್ಲಿ ಈ ಸುದ್ದಿಯನ್ನು ಶಿವರಾಜ್ಕುಮಾರ್ ಮತ್ತು ಅವರ ಪತ್ನಿ ಗೀತಾ ಅವರು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಅಮೆರಿಕದಿಂದಲೇ ವಿಡಿಯೋ ಸಂದೇಶದ ಮೂಲಕ ಶಿವಣ್ಣ ತಮ ಆರೋಗ್ಯ ಸ್ಥಿತಿಯ ಬಗ್ಗೆ ಸಂಪೂರ್ಣ ಅಪ್ಡೇಟ್ ನೀಡಿದ್ದಾರೆ. ಈವರೆಗೂ ಚಿಕಿತ್ಸೆ ನೀಡಿದ ವೈದ್ಯರಿಗೆ ಧನ್ಯವಾದ ಹೇಳಿದ್ದಾರೆ. ತಮ ಆರೋಗ್ಯಕ್ಕೆ ಹಾನಿ ಮಾಡಿದ್ದ ಯುರೋಬ್ಲಾಡರ್ ಅನ್ನು ತೆಗೆದು ಹಾಕಿದ್ದು ಹೊಸ ಬ್ಲಾಡರ್ನ್ನು ಅಳವಡಿಸಿದ್ದಾರೆ. ಇನ್ನೊಂದು ತಿಂಗಳು ವಿಶ್ರಾಂತಿಯಲ್ಲಿರಿ. ನಂತರ ನಿಮ ಚಟುವಟಿಕೆಗಳನ್ನು ಮುಂದುವರೆಸಿ ಎಂದು ವೈದ್ಯರು ಸಲಹೆ ನೀಡಿದ್ದರು.
ಮೊದಲಿಗಿಂತಲೂ ಡಬ್ಬಲ್ ಪವರ್ನಲ್ಲಿ ನಿಮ ಮುಂದೆ ಬರುತ್ತೇನೆ ಎಂದು ಶಿವರಾಜ್ಕುಮಾರ್ ಹೇಳಿಕೊಂಡಿದ್ದಾರೆ.ಆರಂಭದಲ್ಲಿ ಮಾತನಾಡುವಾಗ ಭಾವೋದ್ವೇಗಕ್ಕೆ ಒಳಗಾಗುತ್ತೇನೆ ಎಂಬ ಕಾರಣಕ್ಕೆ ಸ್ವಲ್ಪ ಭಯವಾಗುತ್ತಿದೆ. ಮನುಷ್ಯನಿಗೆ ಭಯವಿರಬೇಕು. ಭಾರತದಿಂದ ಹೊರಡುವಾಗ ಒಂದಿಷ್ಟು ಭಾವೋದ್ವೇಗಕ್ಕೆ ಒಳಗಾಗಿದ್ದೆ. ಭಯವನ್ನು ನಿವಾರಿಸಲು ಅಭಿಮಾನಿಗಳು, ಸ್ನೇಹಿತರು, ಸಂಬಂಧಿಕರು, ಸಹನಟರು ಮತ್ತು ವೈದ್ಯರು ನಮೊಂದಿಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ವಿವಿಧ ಆಸ್ಪತ್ರೆಗಳು, ವೈದ್ಯರು ನನ್ನನ್ನು ಚೆನ್ನಾಗಿ ನೋಡಿಕೊಂಡರು. ಅವರ ಧೈರ್ಯದ ಮೇಲೆ ನಾನು ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದೆ. 45 ಚಿತ್ರದ ಕ್ಲೈಮ್ಯಾಕ್‌್ಸ ಫೈಟ್ನಲ್ಲಿ ಕಿಮೋಥೆರಪಿ ಮಾಡಿಸಿಕೊಂಡೇ ಭಾಗವಹಿಸಿದ್ದೆ. ನನ್ನಿಂದ ಫೈಟ್ ಮಾಡಿಸಿದ ಕೀರ್ತಿ ಸಾಹಸ ನಿರ್ದೇಶಕ ರವಿವರ್ಮ ಅವರಿಗೆ ಸಲ್ಲಬೇಕು ಎಂದರು.
ಕಾಲಕಳೆದಂತೆ ಟೆನ್ಷನ್ ಹೆಚ್ಚಾಯಿತು. ಬಾಲ್ಯಸ್ನೇಹಿತರಾದ ಶೇಖರ್, ವಿಜಯಪ್ರಸಾದ್, ಪತ್ನಿ ಗೀತಾ ಸಹೋದರ ಸಂಬಂಧಿ ಸಚಿವ ಮಧುಬಂಗಾರಪ್ಪ, ಮಗಳು ಮುಂತಾದವರ ಬೆಂಬಲ ಮರೆಯಲಾಗುವುದಿಲ್ಲ. ಅಮೆರಿಕದ ಅನು ಅವರ ಸಹಕಾರವೂ ತುಂಬಾ ಇದೆ ಎಂದು ಸರಿಸಿಕೊಂಡಿದ್ದಾರೆ.
ಶಿವರಾಜ್ಕುಮಾರ್ ಅವರಿಗೆ ಕಿಡ್ನಿ ಕಸಿ ಮಾಡಲಾಗುತ್ತಿದೆ ಎಂಬ ವದಂತಿಗಳಿವೆ. ಅದು ಸುಳ್ಳು. ಯುರೋಬ್ಲಾಡರ್ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ವಿವರವಾದ ಮಾಹಿತಿಯನ್ನು ಆರಂಭದಲ್ಲೇ ನೀಡಿದರೆ ಆತಂಕ ಸೃಷ್ಟಿಯಾಗುತ್ತದೆ ಎಂಬ ಕಾರಣಕ್ಕೆ ಮುಚ್ಚಿಡಲಾಗಿತ್ತು. ಎಲ್ಲರ ಆರೈಕೆಯಿಂದ ನಾನು ಗುಣಮುಖನಾಗಿದ್ದೇನೆ ಎಂದಿದ್ದಾರೆ.
ಒಂದು ತಿಂಗಳು ಮಾತ್ರ ಸಾವಧಾನದಿಂದ ಇರಿ. ನಂತರ ನಿಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಡ್ಯಾನ್‌್ಸ, ಫೈಟ್ ಎಲ್ಲದರಲ್ಲೂ ಭಾಗಿಯಾಗಬಹುದು. ಶಿವರಾಜ್ಕುಮಾರ್ ಮೊದಲಿನಂತೆ ನಿಮ ಎದುರು ಬರಲಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಇದೇ ವೇಳೆ ಮಾತನಾಡಿದ ಗೀತಾ ಶಿವರಾಜ್ಕುಮಾರ್, ಎಲ್ಲರ ಪ್ರಾರ್ಥನೆಯಿಂದ ಎಲ್ಲಾ ವೈದ್ಯಕೀಯ ವರದಿಗಳಲ್ಲಿ ನೆಗೆಟಿವ್ ಬಂದಿದೆ. ಪೆಥಾಲಜಿ ವರದಿಯನ್ನು ಕಾಯಲಾಗುತ್ತಿದ್ದು, ಅದೂ ಕೂಡ ಬಂದಿದ್ದು ನೆಗೆಟಿವ್ ಆಗಿದೆ. ಶಿವರಾಜ್ಕುಮಾರ್ ಕ್ಯಾನ್ಸರ್ ಮುಕ್ತರಾಗಿದ್ದಾರೆ ಎಂದು ಅಧಿಕೃತವಾಗಿ ಘೋಷಣೆಯಾಗಿದೆ ಎಂದು ತಿಳಿಸಿದರು.