ನವದೆಹಲಿ, ಜೂ.25-ಜನರ ಕುಂದು-ಕೊರತೆ ಆಲಿಸಲು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚನ್ನಪಟ್ಟಣ ಪ್ರವಾಸ ಕೈಗೊಂಡಿರುವುದಕ್ಕೆ ಆಭಾರಿಯಾಗಿದ್ದೇನೆ ಎಂದು ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ಕ್ಷೇತ್ರಕ್ಕೆ ಶಿವಕುಮಾರ್ ಹೋಗಿದ್ದಾರೆ.
ಜನರ ಸಂಕಷ್ಟ ಏನೆಂಬುದನ್ನು ಕೇಳಲಿ. ನಾನು ರಾಜಕಾರಣಕ್ಕೆ ಬಂದಿದ್ದು ತಡವಾಗಿದೆ ನಿಜ. ಕುಮಾರಸ್ವಾಮಿ ಅವರಿಗಿಂತ ನಾನೇ ಹಿರಿಯ ಎಂದು ಶಿವಕುಮಾರ್ ಹೇಳಿದ್ದಾರೆ ಎಂದರು.ಚನ್ನಪಟ್ಟಣ ಮತ್ತು ನನ್ನ ನಡುವಿನ ಸಂಬಂಧ ಈಗ ಪ್ರಾರಂಭವಾಗಿಲ್ಲ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು 1985ರಲ್ಲಿ ಸ್ಪರ್ಧಿಸಿದಾಗ ನಾನು ಚುನಾವಣೆ ಉಸ್ತುವಾರಿ ವಹಿಸಿದೆ.
ಆಗ ದೇವೇಗೌಡರ ಬದಲು ನಾನೇ ಸಾತನೂರಿನಲ್ಲಿ ಸ್ಪರ್ಧೆ ಮಾಡಿದ್ದರೆ, 1989ರಲ್ಲಿ ಶಿವಕುಮಾರ್ ಶಾಸಕರಾಗುತ್ತಿರಲಿಲ್ಲ ಎಂದು ಹೇಳಿದರು.ನಮ್ಮ ತಂದೆಯವರು ತೆರವು ಮಾಡಿದ ಸಾತನೂರು ಕ್ಷೇತ್ರದ ಸ್ಪರ್ಧೆಗೆ ಒಪ್ಪಿಗೆ ಕೊಟ್ಟಿದ್ದರೆ ನಾನೇ ಸ್ಪರ್ಧೆ ಮಾಡಿ ಶಾಸಕನಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ವಿಚಾರದ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.