Sunday, October 6, 2024
Homeರಾಜಕೀಯ | Politicsನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕ್ಷಕ್ಷಿಯಲ್ಲ : ಡಿ.ಕೆ.ಸುರೇಶ್‌

ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕ್ಷಕ್ಷಿಯಲ್ಲ : ಡಿ.ಕೆ.ಸುರೇಶ್‌

ಬೆಂಗಳೂರು, ಮೇ 31– ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಾವು ಆಕಾಂಕ್ಷಿಯಲ್ಲ, ಕೆಲವರು ನನ್ನನ್ನು ನಾಯಕನನ್ನಾಗಿ ಮಾಡಲು ಹೆಸರು ಪ್ರಸ್ತಾಪಿಸುತ್ತಿದ್ದಾರೆ, ಅದಕ್ಕೆ ಬೇಡ ಎಂದು ಹೇಳಲಾಗುವುದಿಲ್ಲ, ಈಗಾಗಲೇ ಕೆಪಿಸಿಸಿ ಅಧ್ಯಕ್ಷರು ಇದ್ದಾರೆ. ಹೀಗಾಗಿ ಹೊಸ ಅಧ್ಯಕ್ಷರ ಚರ್ಚೆ ಅಪ್ರಸ್ತುತ ಎಂದು ಸಂಸದ ಡಿ.ಕೆ.ಸುರೇಶ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೊಬ್ಬ ಪ್ರಾಮಾಣಿಕ ಸಣ್ಣ ಕಾರ್ಯಕರ್ತ. ಕೆಲವರು ತಮ್ಮ ತೀಟೆ ತೀರಿಸಿಕೊಳ್ಳಲು ಬೇರೆ ಬೇರೆ ಹೆಸರುಗಳನ್ನು ಹೇಳುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಪೆನ್‌ಡ್ರೈವ್‌ ಪ್ರಕರಣದಲ್ಲಿ ವಾಸ್ತವ ಏನು ಎಂದು ಜಗತ್ತು ನೋಡಿದೆ. ಆರೋಪಿ ಪ್ರಜ್ವಲ್‌ ರೇವಣ್ಣನನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಯುತ್ತಿದೆ. ನಾನು ವಿಮಾನನಿಲ್ದಾಣದಲ್ಲಿ ಬರುತ್ತಿದ್ದ ವೇಳೆಯಲ್ಲೇ ಪ್ರಜ್ವಲ್‌ ಕೂಡ ಬಂದಿದ್ದಾರೆ. ಹಾಗೆಂದು ನಾನು ಅವರನ್ನು ನೋಡಲು ವಿದೇಶಕ್ಕೆ ಹೋಗಿದ್ದೆ ಎಂಬ ವ್ಯಾಖ್ಯಾನ ಹಾಸ್ಯಾಸ್ಪದ ಎಂದರು.

ಪ್ರತಿ ಚುನಾವಣೆಯನ್ನು ನಾನು ಹೋರಾಟ ಎಂದೇ ಭಾವಿಸುತ್ತೇನೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರು, ಮುಖಂಡರು ಎಂದಿನ ಮನೋಭಾವದಲ್ಲೇ ಕೆಲಸ ಮಾಡಿದ್ದಾರೆ. ಗೆಲ್ಲುವ ವಿಶ್ವಾಸವಿದೆ. ಒಬ್ಬೊಬ್ಬರು ಒಂದೊಂದು ರೀತಿಯ ಅಭಿಪ್ರಾಯಗಳನ್ನು ಹೇಳುತ್ತಿದ್ದಾರೆ. ಎಲ್ಲದಕ್ಕೂ ಉತ್ತರ ಹೇಳಲು ಸಾಧ್ಯವಿಲ್ಲ ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಪ್ರಕರಣದಲ್ಲಿ ಬಿಜೆಪಿಗರು ಸಚಿವ ನಾಗೇಂದ್ರ ಅವರ ರಾಜೀನಾಮೆ ಕೇಳುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಕರಣದ ಬಗ್ಗೆ ಈಗಾಗಲೇ ಮುಖ್ಯಮಂತ್ರಿಯವರು ತನಿಖೆಗೆ ಆದೇಶಿಸಿದ್ದಾರೆ. ತನಿಖೆ ಪೂರ್ಣಗೊಳ್ಳಲಿ. ಬಳಿಕ ಲೋಪ ಕಂಡುಬಂದರೆ ಸಚಿವ ನಾಗೇಂದ್ರ ತಲೆಬಾಗುತ್ತಾರೆ ಎಂದು ಹೇಳಿದರು.

ಬಿಜೆಪಿಗರು ಎಲ್ಲಾ ಪ್ರಕರಣಗಳನ್ನು ಸಿಬಿಐ ತನಿಖೆಯನ್ನೂ ಕೇಳುತ್ತಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಇದರಿಂದ ರಾಜಕೀಯವಾಗಿ ತಮಗೆ ಲಾಭವಾಗಬಹುದು ಎಂಬ ಲೆಕ್ಕಾಚಾರ ಅವರದು. ಸಿಬಿಐ ಎಂದರೆ ಅವರೇನು ಬೇರೆ ಕಡೆಯಿಂದ ಬಂದವರಲ್ಲ. ಆ ಸಂಸ್ಥೆ ಮುಖ್ಯಸ್ಥರು ನಮ ರಾಜ್ಯದವರೇ ಆಗಿದ್ದಾರೆ. ಈ ಹಿಂದೆ ಹಲವು ಪ್ರಕರಣಗಳಲ್ಲಿ ರಾಜ್ಯದ ಪೊಲೀಸರು ಪತ್ತೆ ಹಚ್ಚಿದ ಅಂಶಗಳನ್ನೇ ಸಿಬಿಐ ಕೂಡ ಅಂಗೀಕರಿಸಿದೆ. ನಮ ರಾಜ್ಯದ ಪೊಲೀಸರು ಸಮರ್ಥರಿದ್ದಾರೆ ಎಂದರಲ್ಲದೆ, ರಾಜೀನಾಮೆ ಕೇಳುವುದು ಬಿಜೆಪಿಯವರ ಚಾಳಿಯಾಗಿದೆ.

ವಿರೋಧಪಕ್ಷ ಸದೃಢವಾಗಿದ್ದರೆ, ಆಡಳಿತ ಪಕ್ಷಕ್ಕೆ ಎಚ್ಚರಿಕೆ ಇರುತ್ತದೆ ಎಂದರು.
ಬಲಿ ಕೊಡುವುದರಲ್ಲಿ ಒಂದು ಪಕ್ಷ ಹೆಸರುವಾಸಿಯಾಗಿದೆ. ಈ ದೇಶದ ಆಸ್ತಿ ಎಂದು ಹೇಳಿಕೊಳ್ಳುವ ಶಕ್ತಿ ಮಂತ್ರ, ತಂತ್ರ, ಕುತಂತ್ರ ಮಾಡಿಕೊಂಡೇ ಬಂದಿದೆ. ಅದನ್ನು ಈಗಲೂ ಮುಂದುವರೆಸುತ್ತಿರಬಹುದು. ಪ್ರಜ್ವಲ್‌ ರೇವಣ್ಣ ಅವರ ಪ್ರಕರಣದ ದಿಕ್ಕು ತಪ್ಪಿಸಲು ಉಪಮುಖ್ಯಮಂತ್ರಿ ಹೆಸರು ಬಳಕೆ ಮಾಡಿಕೊಳ್ಳುವುದು ಬಿಟ್ಟರೆ ಅವರಿಗೆ ಬೇರೆ ಗತಿ ಇಲ್ಲ.

ಹಾಗಾಗಿ ಡಿ.ಕೆ.ಶಿವಕುಮಾರ್‌ರವರ ಹೆಸರನ್ನು ಮುಂದಿಟ್ಟುಕೊಂಡು ಪಕ್ಷ ಸಂಘಟನೆ ಮಾಡಿಕೊಳ್ಳುತ್ತಾರೆ. ಈ ಬಗ್ಗೆ ನಾನು ಹೆಚ್ಚು ಚರ್ಚೆ ಮಾಡುವುದಿಲ್ಲ. ದೇಶ ಗಮನಿಸುತ್ತಿದೆ. ಕರ್ನಾಟಕದ ಕರ್ಮಕಾಂಡ ಪ್ರಕರಣ ವಿಶ್ವಮಟ್ಟದಲ್ಲೂ ಕುಖ್ಯಾತಿಗೆ ಕಾರಣವಾಗಿದೆ. ಅದನ್ನು ಸಮರ್ಥಿಸಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದರೆ ಆ ಪಕ್ಷದ ಸ್ಥಿತಿ ಅರ್ಥವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

Latest News