ನವದೆಹಲಿ, ಮೇ 18- `ಭಾರತ ಕ್ರಿಕೆಟ್ ಲೋಕಕ್ಕೆ ಹೊಸ ಭಾಷ್ಯ ಬರೆದಿರುವ ದಿಗ್ಗಜರಾದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಹಾಗೂ ಆಧುನಿಕ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್ ಗೆ ವಿದಾಯ ಘೋಷಿಸಿರುವುದು ನನ್ನಲ್ಲಿ ಆಶ್ಚರ್ಯ ಮೂಡಿಸಿದೆ’ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಆರಂಭಿಕ ಎರಡು ಆವೃತ್ತಿಗಳಲ್ಲಿ ಭಾರತ ತಂಡವು ರನ್ನರ್ ಅಪ್ ಆಗುವಲ್ಲಿ ರೋಹಿತ್ ಹಾಗೂ ಕೊಹ್ಲಿ ಅವರ ಕೊಡುಗೆ ಅನನ್ಯವಾಗಿತ್ತು. ಈಗ ಇಂಗ್ಲೆಂಡ್ ಸರಣಿಯ ಮೂಲಕ 4ನೇ ಆವೃತ್ತಿ (2025-27) ಯ ಡಬ್ಲ್ಯುಟಿಸಿ ಆರಂಭಗೊಳ್ಳುತ್ತಿದ್ದು, ಸರಣಿ ಆರಂಭಕ್ಕೂ ಮುನ್ನವೇ ಇಬ್ಬರು ದಿಗ್ಗಜರು ನಿವೃತ್ತಿ ಘೋಷಿಸಿರುವುದು ಭಾರತ ತಂಡಕ್ಕೆ ದೊಡ್ಡ ಸವಾಲಾಗಿದೆ.
ನಿವೃತ್ತಿ ನಿರ್ಧಾರ ಅಚ್ಚರಿ ತಂದಿದೆ: ಗಂಗೂಲಿ
ಸುದ್ದಿಗಾರರೊಂದಿಗೆ ಮಾತನಾಡಿರುವ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, `ತಂಡದಲ್ಲಿ ಆಡುವುದು ಬಿಡುವುದು ಆಟಗಾರರ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇಬ್ಬರು ಭಾರತ ತಂಡಕ್ಕೆ ಅಗಾಧ ಕೊಡುಗೆ ನೀಡಿದ್ದಾರೆ. ಅಲ್ಲದೆ ಹಲವು ಸರಣೀಯ ಕ್ಷಣಗಳನ್ನು ಕೂಡ ತಂಡಕ್ಕೆ ಬಿಟ್ಟು ಹೋಗಿದ್ದಾರೆ. ವಿರಾಟ್ ಕೊಹ್ಲಿ ರೆಡ್ ಬಾಲ್ ಕ್ರಿಕೆಟ್ ಗೆ ವಿದಾಯ ಹೇಳಿರುವುದು ನಿಜಕ್ಕೂ ನನಗೆ ಆಶ್ಚರ್ಯ ತಂದಿದೆ’ ಎಂದು ಗಂಗೂಲಿ ಹೇಳಿದ್ದಾರೆ.
ಆಯ್ಕೆ ಮಂಡಳಿಗೆ ದೊಡ್ಡ ಸವಾಲು:
`ರೋಹಿತ್ ಶರ್ಮಾ ಅವರ ನಿವೃತ್ತಿಯಿಂದ ಭಾರತ ಕ್ರಿಕೆಟ್ ತಂಡದ ಮುಂದಿನ ನಾಯಕರು ಯಾರು? ಎಂಬ ಯಕ್ಷಪ್ರಶೆ ಮೂಡಿದೆ. ರೋಹಿತ್ ಶರ್ಮಾ ಅವರಿಂದ ತೆರವಾಗಿರುವ ಕ್ಯಾಪ್ಟನ್ಸಿ ಸ್ಥಾನಕ್ಕೆ ಸೂಕ್ತ ಆಟಗಾರನನ್ನು ಕರೆತರುವುದು ಆಯ್ಕೆ ಮಂಡಳಿಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ’ ಎಂದು ದಾದಾ ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಹಳಷ್ಟು ಮಂದಿ ಜಸ್ ಪ್ರೀತ್ ಬೂಮ್ರಾ ಅವರೇ ಭವಿಷ್ಯದ ಟೆಸ್ಟ್ ನಾಯಕರಾಗುತ್ತಾರೆ ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ಅವರಿಗೆ ಗಾಯದ ಸಮಸ್ಯೆಯೇ ದೊಡ್ಡ ತೊಂದರೆ ಆಗಲಿದೆ ಎಂದು ಗಂಗೂಲಿ ಹೇಳಿದ್ದಾರೆ.