ಚನ್ನಪಟ್ಟಣ,ಆ.24- ನನ್ನ ರಾಜಕೀಯ ಜೀವನ ಪ್ರಾರಂಭವಾಗಿದ್ದು ಕಾಂಗ್ರೆಸ್ ಪಕ್ಷದಲ್ಲಿಯೇ ಎಂದು ಮಾಜಿ ಸಚಿವ ಹಾಗೂ ಮಾಜಿ ವಿಧಾನ ಪರಿಷತ್ತುಸದಸ್ಯ ಸಿ .ಪಿ.ಯೋಗೇಶ್ವರ್ ತಿಳಿಸಿದರು. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜನೆ ಮಾಡಲಾಗಿದ್ದ ಪತ್ರಿಕಾಗೋಷ್ಟಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ನಾನು ಮರಳಿ ಗೂಡಿಗೆ ಬಂದಿದ್ದೇನೆ ಹೊರತು ಇದರಲ್ಲಿ ಹೊಸತು ಏನು ಇಲ್ಲ, ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡುರಾವ್‌ರವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿಯೇ ನಾನು ಯೂತ್ ಕಾಂಗ್ರೆಸ್ ಅಧ್ಯಕ್ಷನಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದೆ ಎಂದು ಹಳೆಯ ನೆನಪನ್ನು ಮೆಲಕು ಹಾಕಿದರು.
ಪ್ರತಿನಿತ್ಯದ ರಾಜಕೀಯ ಬೆಳವಣಿಗೆಗಳನ್ನು ಎಲ್ಲರೂ ಗಮನಿಸಿದ್ದಿರಿ, ಮತ್ತೆ ನಾನು ನನ್ನ ಮನೆಗೆ ಬಂದಿದ್ದೇನೆ, ಈಗಾಗಲೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಹಾಗೂ ಕೆ.ಪಿ.ಸಿ.ಸಿ. ಅಧ್ಯಕ್ಷ ಹಾಗೂ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಂಸದ ಡಿ.ಕೆ.ಸುರೇಶ್‌ರವರು ಹಾಗೂ ಹಲವಾರು ಪಕ್ಷದ ನಾಯಕರ ಜೊತೆಯಲ್ಲಿ, ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಬಾವುಟವನ್ನು ಹಿಡಿದು ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ ಎಂದರು.
ಈಗಾಗಲೇ ಬಿಜೆಪಿಯ ಎಂ.ಎಲ್.ಸಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರ ಜೊತೆಯಲ್ಲಿ, ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೂ ರಾಜಿನಾಮೆ ನೀಡಿದ್ದೇನೆ, ಈಗ ರಾಜಕೀಯವಾಗಿ ಮಾತನಾಡುವ ಸಮಯವಲ್ಲ. ಕಾರಣ ಇಂದು ಕಾಂಗ್ರೆಸ್ ಪಕ್ಷದಿಂದ ನಾಮಪತ್ರ ಸಲ್ಲಿಸುತ್ತಿದ್ದು, ಸಾಕಷ್ಟು ಕೆಲಸ ಇರುವುದರಿಂದ, ನಾಮಪತ್ರ ಸಲ್ಲಿಕೆಯ ನಂತರ ರಾಜಕೀಯವಾಗಿ ಮಾತನಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಗಡಿ ಶಾಸಕ ಬಾಲಕೃಷ್ಣ, ರಾಮನಗರ ಶಾಸಕ ರಾಜು ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ಮಾತನಾಡಿ, ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆಯಾಗಿರುವುದು ಪಕ್ಷಕ್ಕೆ ಆನೆಬಲ ಬಂದಂತಾಗಿದೆ. ಆದರೂ ಈ ಚುನಾವಣೆಯಲ್ಲಿ ಮೈಮರೆಯುವುದು ಸರಿಯಲ್ಲ. ಕಾರಣ ಕೇಂದ್ರದ ಮಂತ್ರಿಗಳ ಜೊತೆ ಸೆಣಸಾಟವಾಗಿರುವುದರಿಂದ, ಪ್ರತಿಯೊಬ್ಬ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಗೆಲುವಿಗೆ ಸನ್ನದ್ಧರಾಗಬೇಕು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿ, ಇತರೆ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಉಪಾಧ್ಯಕ್ಷರಾದ ಡಾ.ಪವಿತ್ರ ಪ್ರಭಾಕರ ರೆಡ್ಡಿ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶಿವಮಾಧು, ಪಕ್ಷದ ಹಿರಿಯ ಮುಖಂಡ ಡಿ.ಎಂ.ವಿಶ್ವನಾಥ್, ಮುಖಂಡರುಗಳಾದ ಬೋರ್‌ವೆಲ್ ರಂಗನಾಥ್, ಎಂ.ಸಿ.ಕರಿಯಪ್ಪ,ಬೈರಪಟ್ಟಣ ರವಿ,ಮಾಸ್ತಿಗೌಡ, ಜಯಕಾಂತ್ ಚಾಲುಕ್ಯ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎ.ಸಿ.ವೀರೇಗೌಡ ಹಾಗೂ ನೂರಾರು ಮಂದಿ ಮುಖಂಡರು ಹಾಜರಿದ್ದರು.
ಮುಖಂಡರ ಸಂಭ್ರಮ :
ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಮೊಟ್ಟಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದ ಕಚೇರಿಗೆ ಆಗಮಿಸುತ್ತಿದ್ದಂತೆ, ಸಾವಿರಾರು ಮಂದಿ ಮುಖಂಡರು, ಕಾರ್ಯಕರ್ತರು ಅದರಲ್ಲೂ ಮುಸ್ಲಿಂ ಸಮುದಾಯದ ಮುಖಂಡರು ಹಾಜರಿದ್ದು ವಿಶೇಷವಾಗಿತ್ತು. ಅಲ್ಲದೆ ಚುನಾವಣೆಯಲ್ಲಿ ಗೆದ್ದಾಯಿತು ಎಂಬಂತೆ, ಸಿ.ಪಿ.ಯೋಗೇಶ್ವರ್‌ಗೆ ಹೂವಿನ ಹಾರಗಳನ್ನು ಹಾಕಲು ಮುಗಿ ಬಿದ್ದದ್ದು ಕಂಡು ಬಂದಿತು.