ಬೆಂಗಳೂರು,ಸೆ.9-ಜೈಲಿನಲ್ಲಿ ನನಗೆ ಬೆಳಕು ನೋಡಲು ಆಗುತ್ತಿಲ್ಲ. ಕೈ ಎಲ್ಲಾ ಫಂಗಸ್ ಆಗಿದೆ. ನಾನು ಏನೇ ಕೇಳಿದರೂ ಅಧಿಕಾರಿಗಳು ಕೊಡುತ್ತಿಲ್ಲ. ದಯಮಾಡಿ ನನಗೆ ಮಾತ್ರ ವಿಷ ಕೊಟ್ಟು ಬಿಡಿ… ಚಿತ್ರದುರ್ಗ ನಿವಾಸಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಚಿತ್ರನಟ ದರ್ಶನ್ ನ್ಯಾಯಾಧೀಶರ ಮುಂದೆ ವಿಚಿತ್ರ ಬೇಡಿಕೆಯಿಟ್ಟ ಪರಿ ಇದು.
ದರ್ಶನ್ ಮತ್ತು ಇತರೆ ಆರೋಪಿಗಳು ಬೆಂಗಳೂರಿನ 57ನೇ ಹೆಚ್ಚುವರಿ ಸಿಸಿಎಚ್ ನ್ಯಾಯಾಲಯದ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು.
ತಮಗೆ ಹಾಸಿಗೆ, ದಿಂಬು, ಕುಡಿಯಲು ನೀರು, ಊಟ, ತಿಂಡಿ ನೀಡಬೇಕೆಂದು ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಅರ್ಜಿ ವಿಚಾರಣೆ ನಡೆಸುತ್ತಿದ್ದ ವೇಳೆ ಮೊದಲು ಕೈ ಎತ್ತಿದ ಪ್ರಕರಣದ 2ನೇ ಆರೋಪಿ ದರ್ಶನ್, ಜೈಲಿನಲ್ಲಿ ಬದುಕಲು ಸಾಧ್ಯವಾಗುತ್ತಿಲ್ಲ ಎಂದು ಗದ್ಗರಿತರಾಗಿ ಕಣ್ಣೀರು ಹಾಕಿದರು.
ಸ್ವಾಮಿ ನನಗೆ ಕುಡಿಯಲು ಸ್ವಲ್ಪ ವಿಷ ಕೊಟ್ಟು ಬಿಡಿ. ಇದನ್ನು ಇಲ್ಲಿಂದಲೇ ಆದೇಶ ಮಾಡಿ. ಒಂದು ತಿಂಗಳಿನಿಂದ ನಾನು ಬಿಸಿಲನ್ನೇ ನೋಡಿಲ್ಲ. ನನಗೆ ಕೈಯೆಲ್ಲ ಫಂಗಸ್ ಆಗಿದೆ. ನ್ಯಾಯಾಲಯ ಆದೇಶ ನೀಡಬೇಕು. ನನಗೆ ಮಾತ್ರ ವಿಷ ಕೊಡಿ. ಬೇರೆಯವರಿಗೆ ಬೇಡ ಎಂದು ಕೋರಿದರು.
ಆಗ ನ್ಯಾಯಾಧೀಶರು ನೀವು ಹೇಳಿದ ಹಾಗೆ ಆದೇಶ ನೀಡಲು ಸಾಧ್ಯವಿಲ್ಲ. ಯಾವುದೇ ನ್ಯಾಯಾಲಯ ಆರೋಪಿ ಅಥವಾ ಅಪರಾಧಿಗೆ ವಿಷ ಕುಡಿ ಎಂದು ಹೇಳಲು ಕಾನೂನಿನಲ್ಲಿ ಅವಕಾಶವಿಲ್ಲ. ಇಲ್ಲಿಂದಲೇ ಆದೇಶ ನೀಡಿ ಎಂದು ನೀವು ಹೇಳುವಂತೆಯೂ ಇಲ್ಲ ಎಂದು ಬುದ್ದಿವಾದ ಹೇಳಿದರು.
ಮಾತು ಮುಂದುವರೆಸಲು ದರ್ಶನ್ ಮುಂದಾದಾಗ, ನೀವು ಅರ್ಜಿಯಲ್ಲಿ ಏನು ಮನವಿ ಮಾಡಿಕೊಂಡಿದ್ದೀರೋ ಅದನ್ನು ವಿಚಾರಣೆ ನಡೆಸುತ್ತೇವೆ. ವಿಷ ಕುಡಿ ಎಂದು ನ್ಯಾಯಾಲಯ ಇಲ್ಲವೇ ದೇಶದ ಯಾವುದೇ ನ್ಯಾಯಾಧೀಶರು ಕೂಡ ಹೇಳಲು ಸಾಧ್ಯವಿಲ್ಲ. ಇಂಥ ಮನವಿಯನ್ನು ಮಾಡಬಾರದು ಎಂದು ಹೇಳಿದರು.
ಇದಕ್ಕೆ ದರ್ಶನ್ ಸರಿ ಸ್ವಾಮಿ ಎಂದಷ್ಟೇ ನ್ಯಾಯಾಧೀಶರಿಗೆ ಪ್ರತಿಕ್ರಿಯಿಸಿ ಮೌನಕ್ಕೆ ಶರಣಾದರು. ನೀವು ಮಾಡಿಕೊಂಡಿರುವ ಮನವಿಯ ಅರ್ಜಿ ವಿಚಾರಣೆ ಕುರಿತಂತೆ ಮಧ್ಯಾಹ್ನ ಆದೇಶ ನೀಡಲಾಗುತ್ತದೆ. ಹೀಗೆಲ್ಲ ಕೇಳುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.